ಪ್ರೊ.ಕೆ.ಜಿ.ಕುಂದಣಗಾರ ವೇದಿಕೆ, ಮೂಡಲಗಿ: ‘ನಾಲ್ಕು ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಗೆ ಈಗ ಆತಂಕ ಎದುರಾಗಿದೆ. ಭಾಷೆ ಉಳಿಯಬೇಕೆಂದರೆ ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ರಾಜ್ಯ ಸರ್ಕಾರ ಕನಿಷ್ಠ 4ನೇ ತರಗತಿಯವರೆಗೆ ಕನ್ನಡದಲ್ಲೇ ಶಿಕ್ಷಣ ಕಡ್ಡಾಯ ಎನ್ನುವ ಕಾನೂನು ಜಾರಿಗೆ ತರಬೇಕು’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಅಕ್ಕಿ ಪ್ರತಿಪಾದಿಸಿದರು.
ಕನ್ನಡ ಸಾಹಿತ್ತ ಪರಿಷತ್ತಿನ ಜಿಲ್ಲಾ ಘಟಕದಿಂದ ಇಲ್ಲಿನ ಆರ್‌ಡಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಭಾಷಣ ಮಾಡಿದರು.
‘ಬಸವರಾಜ ಹೊರಟ್ಟಿ 2007ರಲ್ಲಿ ಶಿಕ್ಷಣ ಸಚಿವರಾಗಿದ್ದಾಗ ಕನ್ನಡ ಕಡ್ಡಾಯ ಜಾರಿ ಮಾಡಿದರು. ಆ ನಿಯಮ ಪಾಲಿಸದ 1,000ಕ್ಕೂ ಹೆಚ್ಚು ಶಾಲೆಗಳನ್ನು ಬಂದ್ ಮಾಡಿಸಿದ್ದರು. ಶಿಕ್ಷಣ ಸಂಸ್ಥೆಗಳು ಹೈಕೋರ್ಟ್‌ನಲ್ಲಿ ದಾವೆ ಹೂಡಿದವು. ಪಾಲಕರು ಬಯಸಿದ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬಹುದು ಎಂದು ಕೋರ್ಟ್ ಆದೇಶ ನೀಡಿತು. ಸುಪ್ರೀಂಕೋರ್ಟ್ ಕೂಡ ಇದನ್ನೇ ಎತ್ತಿಹಿಡಿಯಿತು. ಆ ತೀರ್ಪು ಕನ್ನಡಿಗರ ಪಾಲಿಗೆ ಮರಣ ಶಾಸನ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
‘ಆ ತೀರ್ಪಿನಿಂದ ರಾಜ್ಯದಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳೂ ಇಂಗ್ಲಿಷ್ ಮಾಧ್ಯಮ ಆರಂಭಿಸಿದವು. ಪಾಲಕರು ಇಂಗ್ಲಿಷ್ ವ್ಯಾಮೋಹಿಗಳಾದರು. ಅಂದಿನಿಂದ ಕನ್ನಡತಾಯಿ ಅನಾಥಪ್ರಜ್ಞೆ ಅನುಭವಿಸುತ್ತಿದ್ದಾಳೆ’ ಎಂದರು.
‘ಈಗಲೂ ಕಾಲ ಮಿಂಚಿಲ್ಲ. ರಾಜ್ಯದಲ್ಲಿ ಅನ್ನ ತಿನ್ನುವ ಪ್ರತಿಯೊಬ್ಬರಿಗೂ ಕನ್ನಡ ಮಾಧ್ಯಮವೇ ಅನಿವಾರ್ಯ ಎಂಬ ಕಾನೂನನ್ನು ಸರ್ಕಾರ ತರಬೇಕು. ಇದು ನ್ಯಾಯಾಂಗ ನಿಂದನೆ ಆಗುತ್ತದೆ. ಆದರೂ ಸರ್ಕಾರ ಚಿಂತೆ ಮಾಡಬೇಕಿಲ್ಲ. ನಾಡು– ನುಡಿಗಾಗಿ ಎಲ್ಲ ಹೋರಾಟಕ್ಕೂ ಸನ್ನದ್ಧವಾಗಬೇಕು’ ಎಂದೂ ಕರೆ ನೀಡಿದರು.
‘ಕನ್ನಡ ಮಾಧ್ಯಮ ಶಿಕ್ಷಣವಿಲ್ಲದಿದ್ದರೆ ಕನ್ನಡ ಉಳಿಯುವುದಿಲ್ಲ. ಕನ್ನಡ ಉಳಿಯದಿದ್ದರೆ ಸಂಸ್ಕೃತಿ ಉಳಿಯುವುದಿಲ್ಲ. ಸಂಸ್ಕೃತಿ ಇಲ್ಲದಿದ್ದರೆ ನಾವು ಇದ್ದೂ ಸತ್ತಂತೆ’ ಎಂದೂ ಕಳವಳ ಹೊರಹಾಕಿದರು.
‘ಅಖಂಡ ಭಾರತದ ನಿರ್ಮಾಣದ ಜತೆಗೆ ಅಖಂಡ ಕರ್ನಾಟಕ ನಿರ್ಮಾಣ ಹೋರಾಟವೂ ಆರಂಭವಾಯಿತು. ಸ್ವಾತಂತ್ರ್ಯಕ್ಕೆ ಹೋರಾಡಿದ ನಾಡಿನ ಎಲ್ಲ ನಾಯಕರು ಕರ್ನಾಟಕ ಏಕೀಕರಣಕ್ಕೂ ಹೋರಾಡಿದ್ದಾರೆ. ಇಂದಿನ ಮಹಾರಾಷ್ಟ್ರದ ಬಹುಭಾಗವೆಲ್ಲ ಕರ್ನಾಟಕದ್ದೇ ಆಗಿತ್ತು. ಅಜಂತಾ, ಎಲ್ಲೋರಾಗಳನ್ನು ಕನ್ನಡದ ಅರಸರೇ ಕಟ್ಟಿದ್ದಾರೆ. ಕಾವೇರಿಯಿಂದ ಗೋದಾವರಿಯವರೆಗೆ ನಮ್ಮದೇ ನಾಡಿತ್ತು. ಆದರೆ, ಏಕೀಕರಣದ ನಂತರವೂ ಕರ್ನಾಟಕ ಆತಂಕದಿಂದ ದೂರಾಗಿಲ್ಲ’ ಎಂದರು.
‘1986ರಲ್ಲಿ ಸರೋಜಿನಿ ಮಹಿಷಿ ಆಯೋಗ ವರದಿ ನೀಡಿದೆ. ಸರ್ಕಾರಿ– ಖಾಸಗಿ ಉದ್ಯೋಗದಲ್ಲಿ ಕನ್ನಡಿಗರಿಗೇ ಪ್ರಾಧಾನ್ಯತೆ ನೀಡಬೇಕು ಎಂದು ವರದಿ ನೀಡಿದ್ದಾರೆ. ಗಡಿ ಕನ್ನಡ ಅಭಿವೃದ್ಧಿಗೆ ಹಲವು ಸಮಿತಿಗಳು ವರದಿ ನೀಡಿವೆ. ಆದರೆ, ಎಲ್ಲವೂ ಕಸದ ಬುಟ್ಟಿ ಸೇರಿವೆ. ವರದಿ ಜಾರಿ ಮಾಡದೇ ಹೋದರೆ ಸಮಿತಿಗಳನ್ನು ಏಕೆ ರಚಿಸಬೇಕು. ಇದು ಸರ್ಕಾರಗಳ ಅಭಿಮಾನ ಶೂನ್ಯ ಬುದ್ಧಿ’ ಎಂದೂ ಅವರು ಕಿಡಿ ಕಾರಿದರು.
‘ಮೂಡಲಗಿಯಲ್ಲಿ ಶ್ರೀಪಾದರಂಗ ಬೋಧ ಶ್ರೀಗಳ ಹೆಸರಲ್ಲಿ ಕನ್ನಡ ಭವನ ಕಟ್ಟಬೇಕು. ಪ್ರತಿ ತಾಲ್ಲೂಕಿಗೂ ಒಂದೊಂದು ಭವನ ಬೇಕು. ಮಮದಾಪುರದಲ್ಲಿ ಡಿ.ಸಿ.ಪಾವಟೆ ಅವರ ಹೆಸರಲ್ಲಿ ರಾಜ್ಯಮಟ್ಟದ ವಿಜ್ಞಾನ ಕೇಂದ್ರ ಸ್ಥಾಪಿಸಬೇಕು. ಜಾನಪದ ಉಳಿವಿಗಾಗಿ ಕೌಜಲಗಿ ನಿಂಗಮ್ಮ ಹೆಸರಲ್ಲಿ ಒಂದು ಜಾನಪದ ಭವನ ಕಟ್ಟಿ ಸರ್ಕಾರದಿಂದಲೇ ಕಲೆಗಳ ತರಬೇತಿ ನೀಡಬೇಕು. ಗೋಕಾಕ ಕೇಂದ್ರವಾಗಿ ಹೊಸ ಜಿಲ್ಲೆ ನಿರ್ಮಾಣ ಮಾಡಬೇಕು’ ಎಂಬ ಬೇಡಿಕೆಗಳನ್ನು ಅವರು ಸರ್ಕಾರದ ಮುಂದೆ ಇಟ್ಟರು.
ಇದಕ್ಕೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿ ದೀಪ ಬೆಳಗಿಸಿ ಸಮ್ಮೇಳನ ಉದ್ಘಾಟಿಸಿದರು. ಶಿವಬೋಧರಂಗ ಸಿದ್ಧ ಸಂಸ್ಥಾನ ಮಠದ ದತ್ತಾತ್ರಯಬೋಧ ಸ್ವಾಮೀಜಿ, ಶಿವಾಪುರದ ಅಡವಿಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಜಗದೀಶ ಶೆಟ್ಟರ್, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ಭಾಷಣ ಮಾಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ, ಆರ್‌ಡಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂತೋಷ ಪಾರ್ಶಿ, ಪುರಸಭೆ ಅಧ್ಯಕ್ಷೆ ಖುರ್ಷದ್ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಬಿಡಿಸಿಸಿ ಉಪಾಧ್ಯಕ್ಷ ಎಸ್.ಜಿ.ಢವಳೇಶ್ವರ, ಭಾರತಿ ಮದಭಾವಿ, ಆರ್.ಪಿ.ಸೋನವಾಲ್ಕರ, ಈಶ್ವರ ಕತ್ತಿ, ವೈ.ಬಿ.ಪಾಟೀಲ, ಹಣಮಂತ ತೇರದಾಳ ವೇದಿಕೆ ಮೇಲಿದ್ದರು.
ಮಾತೃಭಾಷೆಗೆ ಆದ್ಯತೆ ನೀಡಬೇಕು. ಅದರೊಂದಿಗೆ ಇತರ ಭಾಷೆಗಳನ್ನೂ ಕಲಿಯಬೇಕು. ಇಲ್ಲದಿದ್ದರೆ ನಾವು ಹೊರಜಗತ್ತನ್ನು ಅರ್ಥ ಮಾಡಿಕೊಳ್ಳಲಾಗುವುದಿಲ್ಲಈರಣ್ಣ ಕಡಾಡಿ ರಾಜ್ಯಸಭೆ ಸದಸ್ಯ
ನ್ಯಾಯಾಂಗ ಇಲಾಖೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಜಾರಿಗೆ ತರಬೇಕಿದೆ. ಅದರಿಂದ ಬಹುಪಾಲು ಕೆಲಸಗಳಿಗೆ ಕನ್ನಡ ಅನಿವಾರ್ಯವಾಗುತ್ತದೆಜಗದೀಶ ಶೆಟ್ಟರ್ ಸಂಸದ
ಸ್ನಾನ ಮಾಡಿ ಬಂದು ಓದಬೇಕಾದಂಥ ಸಾಹಿತ್ಯ ಮೊದಲು ರಚಿಸುತ್ತಿದ್ದರು. ಆದರೆ ಈಗ ಓದಿದ ಮೇಲೆ ಸ್ನಾನ ಮಾಡಬೇಕಾದಂಥ ರಚನೆಗಳು ಬರುತ್ತಿರುವುದು ದುರಂತದತ್ತಾತ್ರಯಬೋಧ ಸ್ವಾಮೀಜಿ ಶಿವಬೋಧರಂಗ ಸಿದ್ಧ ಸಂಸ್ಥಾನ ಮಠ
ಕನ್ನಡಕ್ಕೆ ಕನ್ನಡಿಗರಿಂದಲೇ ಆತಂಕ ಎದುರಾಗಿದೆ ಹೊರತು ಬೇರಾರಿಂದಲೂ ಅಲ್ಲ. ಸರ್ಕಾರದ ಮೇಲೆ ಒತ್ತಡ ತರುವ ಬದಲು ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಬೇಕುಅಡವಿಸಿದ್ಧರಾಮ ಸ್ವಾಮೀಜಿ ಶಿವಾಪುರ
ಮೊಮ್ಮಗನಿಗೆ ಅರ್ಥವಾಗದ ಅಜ್ಜನ ಭಾಷೆ’ ‘ನಾನು ಬರೆದ ಕಾದಂಬರಿಯು ನನ್ನ ಮೊಮ್ಮಗನಿಗೆ ಓದಲು ಬರುವುದಿಲ್ಲ. ಅರ್ಥ ಆಗುವುದು ದೂರಿನ ಮಾತು. ನಮ್ಮ ಮುಂದಿನ ಪೀಳಿಗೆಯನ್ನು ನಾವು ಭಾಷಾವೈಕಲ್ಯಕ್ಕೆ ತಳ್ಳಿದ್ದೇವೆ’ ಎಂದು ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪೂರ ಆತಂಕ ವ್ಯಕ್ತಪಡಿಸಿದರು. ‘ನಿತ್ಯದ ಮಾತು ವ್ಯವಹಾರ ಸಂವಹನ ನುಡಿಗಟ್ಟುಗಳಲ್ಲಿ ಕನ್ನಡ ಮರೆಯಾಗುತ್ತದೆ. ಯಾವ ಭಾಷೆ ತನ್ನ ಮಾತಿನಲ್ಲಿ ಅನ್ಯಭಾಷೆಯ ಬಳಸುತ್ತದೆಯೋ ಅದು ಪತನದ ದಾರಿ ಹಿಡಿದಿದೆ ಎಂದರ್ಥ. ಈಗ ಹೋಟೆಲ್ಲಿಗೆ ಹೋಗಿ ಕೇಳಿ; ಸಾರಿನ ಬದಲು ಕರಿ ಎನ್ನುತ್ತಾರೆ. ಕಾರಬ್ಯಾಳಿ ಬದಲು ದಾಲ್‌ತಡ್ಕಾ ರೊಟ್ಟಿ ಬದಲು ರೋಠಿ ಎಂಬ ಬಳಕೆ ಶುರುವಾಗಿದೆ. ಅನ್ನದ ಭಾಷೆಯಲ್ಲೇ ನಾವು ಅನ್ಯವನ್ನು ಏಕೆ ಮಾತನಾಡುತ್ತಿದ್ದೇವೆ’ ಎಂದೂ ಪ್ರಶ್ನಿಸಿದರು. ‘ಚಕ್ಕಡಿ ಲಾಟೀನು ಕಡ್ಡಿಪಿಟಿಗಿ ಮ್ಯಾಣದಬತ್ತಿ ಮುಂತಾದ ದೈನಂದಿನ ಮಾತುಗಳು ಮರೆತೇ ಹೋಗಿವೆ. ದಟ್ಟಣೆ ಎನ್ನುವ ಪದ ತಾಯಂದಿರಿಗೇ ಮರೆತುಹೋಗಿದೆ; ರಶ್ ಪದ ಬಳಸುತ್ತಿದ್ದಾರೆ. ಸಿನಿಮಾಗಳಲ್ಲಿ ಉತ್ತರ ಕರ್ನಾಟಕದ ಪದಗಳನ್ನು ಗೇಲಿ ಮಾಡಲು ಬಳಸುತ್ತಿದ್ದಾರೆ. ಇದಕ್ಕೆಲ್ಲ ಅಂಕುಶ ಹಾಕಬೇಕಿದೆ’ ಎಂದರು.
ನಾಡು ನುಡಿ ಸೇವೆಗೆ ಬದ್ಧ: ಶಾಸಕ ‘ಕನ್ನಡ ಕಾರ್ಯಗಳು ಯಶಸ್ವಿಯಾಗಬೇಕೆಂದರೆ ಎಲ್ಲರೂ ಕೈ ಜೋಡಿಸಬೇಕಾಗುತ್ತದೆ. ನಾನು ಇಡೀ ದಿನ ಸಮ್ಮೇಳನಕ್ಕಾಗಿಯೇ ಮೀಸಲಿಟ್ಟು ಕುಳಿತಿದ್ದೇನೆ. ಇಂಥ ಆತ್ಮೀಯತೆ ಎಲ್ಲರಿಗೂ ಬರಬೇಕಿದೆ’ ಎಂದು ಸಮ್ಮೇಳನ ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ‘ಕನ್ನಡಕ್ಕಾಗಿ ದೊಡ್ಡ ಕೆಲಸಗಳು ಆಗಬೇಕಿದೆ. ಆದರೆ ಇಂದಿನ ಸರ್ಕಾರ ಶಾಸಕರಿಗೇ ಬಿಡಿಗಾಸು ಅನುದಾನ ಕೊಡುತ್ತಿಲ್ಲ. ಇಂಥದರಲ್ಲಿ ಭವನ ಕಟ್ಟುವಂತ ಕನಸು ಕಾಣುವುದಕ್ಕೂ ಭಯ ಆಗುತ್ತದೆ. ಆದರೂ ನನ್ನೆಲ್ಲ ಸಾಮರ್ಥ್ಯ ಒಂದಾಗಿಸಿ ನಾನು ಈ ಕೆಲಸ ಮಾಡುತ್ತೇನೆ’ ಎಂದೂ ಭರವಸೆ ನೀಡಿದರು. ‘ನಮ್ಮ ಹಿರಿಯರು ಕನ್ನಡ ರಥವನ್ನು ಇಲ್ಲಿಯವರೆಗೆ ಎಳೆದುಕೊಂಡು ಬಂದಿದ್ದಾರೆ. ನಾವು ಹಿಂದಕ್ಕೆ ತಳ್ಳಬಾರದು. ಮುಂದೆ ಎಳೆದುಕೊಂಡು ಹೋಗಬೇಕು. ಸುಮಧುರ ಕನ್ನಡ ಭಾಷೆಯನ್ನು ಮನೆಯ ಒಳಗೂ ಹೊರಗೂ ಬಳಸಬೇಕು’ ಎಂದೂ ಕರೆ ನೀಡಿದರು.
ಕಡಾಡಿಗೆ ಬಾಲಚಂದ್ರ ಜಾರಕಿಹೊಳಿ ಟಾಂಗ್ ‘ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳನ್ನು ದೂರವಿಡಿ. ಅವರಿಗೆ ಸನ್ಮಾನ ಮಾಡಿ ಹಣ ವ್ಯರ್ಥ ಮಾಡಬೇಡಿ. ರಾಜಕೀಯ ಹಂಗಿನಲ್ಲಿರುವ ಸಾಹಿತಿಯಿಂದ ಚಿಂತನಶೀಲತೆ ಹೊರಬರುವುದಿಲ್ಲ’ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅಭಿಪ್ರಾಯ ಪಟ್ಟರು. ಇದಕ್ಕೆ ವೇದಿಕೆಯಲ್ಲೇ ಟಾಂಗ್ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ‘ಹಿಂದೆಯೂ ಕನ್ನಡ ಕವಿಗಳಿಗೆ ರಾಜಾಶ್ರಯ ನೀಡಲಾಗಿದೆ. ಈಗಲೂ ಸರ್ಕಾರ ರಾಜಕಾರಣಿಗಳು ಕನ್ನಡಕ್ಕಾಗಿ ಬರಬೇಕು. ಯಾರಿಗೆ ಸಮ್ಮೇಳನ ಬೇಡವೋ ಅವರನ್ನು ಕರೆಯಬೇಡಿ. ನನಗೆ ಆಸಕ್ತಿ ಇದೆ. ನಮ್ಮಂಥವರನ್ನು ಕರೆಯಿರಿ’ ಎಂದರು.
‘ಪ್ರಜಾವಾಣಿ’ ಪ್ರಶಂಸಿಸಿದ ಸಮ್ಮೇಳನಾಧ್ಯಕ್ಷ ‘ಕನ್ನಡಕ್ಕೆ ಕಳಕಳಿ ಮಾತ್ರ ಸಾಲದು; ಚಳವಳಿ ಬೇಕು’ ಎಂಬ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸಂದರ್ಶನ ಹಾಗೂ ಮೂಡಲಗಿ ತಾಲ್ಲೂಕು ಸಾಹಿತ್ಯ ಸಂಸ್ಕೃತಿ ವಿವರಣೆಗಳನ್ನು ಕಂಡು ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಅಕ್ಕಿ ಪ್ರಶಂಸೆ ವ್ಯಕ್ತಪಡಿಸಿದರು. ಪ್ರಜಾವಾಣಿ ಕನ್ನಡಕ್ಕೆ ಕೊಟ್ಟ ಕಾಣಿಕೆ ದೊಡ್ಡದು. ಪ್ರಬುದ್ಧ ಬರಹಗಳ ಮೂಲಕ ಈ ಸಮ್ಮೇಳನಕ್ಕೂ ಆದ್ಯತೆ ನೀಡಿದ್ದು ಸಂತಸ ತಂದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.