ಮೂಡಲಗಿ (ಬೆಳಗಾವಿ ಜಿಲ್ಲೆ): ಜಿಲ್ಲಾ ಮಟ್ಟದ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣದಲ್ಲಿ ಶನಿವಾರ ಅದ್ಧೂರಿ ಚಾಲನೆ ದೊರೆಯಿತು. ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಅಕ್ಕಿ ಅವರನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.
ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಸಂಭ್ರಮದ ಚಾಲನೆ ನೀಡಲಾಯಿತು. ವಾದ್ಯಮೇಳಗಳು, ಕಲಾತಂಡಗಳು, ರೂಪಕಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಡೊಳ್ಳು ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗು ತಂದವು.
ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಕನ್ನಡ ಸಾಹಿತ್ಯಾಸಕ್ತರು, ಜಿಲ್ಲೆಯ ವಿವಿಧೆಡೆಯಿಂದ ಬಂದು ಕನ್ನಡಾಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಸಮ್ಮೇಳನ ಉದ್ಘಾಟನೆ: ಮೂಡಲಗಿಯ ಆರ್.ಡಿ.ಎಸ್. ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಾಕಿದ ಪ್ರೊ.ಕೆ.ಜೆ.ಕುಂದಣಗಾರ ಮುಖ್ಯ ವೇದಿಕೆಯಲ್ಲಿ ಸಮ್ಮೇಳನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಶಾಸಕ ಬಾಲಚಂದ್ರ ಜಾರಕಿಹೊಳಿ ದೀಪ ಬೆಳಗಿಸಿ ಉಸ್ಘಾಟಿಸಿದರು ಮೂಡಲಗಿ ಶಿವಬೋಧರಂಗ ಮಠದ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ಅಕ್ಕಿ ಸರ್ವಾಧ್ಯಕ್ಷತೆ ವಹಿಸಿಕೊಂಡರು. ಸಂಸದ ಜಗದೀಶ ಶೆಟ್ಟರ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.