ಮುಗಳಖೋಡ: ತಲೆತಲಾಂತರದಿಂದ ಬಂದ ಕಲೆಯನ್ನೇ ನಂಬಿ ಬದುಕು ನಡೆಸುವ ಬಹುರೂಪಿ ಕಲಾವಿದರಿಗೆ ಕೊರೊನಾ ಮತ್ತು ಲಾಕ್‌ಡೌನ್ ಬಲವಾದ ಬರೆ ಎಳೆದಿದ್ದು, ಮೂರ‍್ಹೊತ್ತಿನ ಊಟಕ್ಕೂ ಅವರು ಪರದಾಡುತ್ತಿದ್ದಾರೆ.
ರಾಯಬಾಗ ತಾಲ್ಲೂಕು ಮುಗಳಖೋಡದ ಸಿದ್ದರಾಯನ ಮಡ್ಡಿಯಲ್ಲಿ ಸದ್ಯ ವಾಸವಿರುವ ಅಲೆಮಾರಿ ಕುಟುಂಬದವರು 15 ದಿನಗಳಿಂದ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಹಾಡು ಹಾಡುವ ಅವರ ಬದುಕು ಈಗ ತಾಳ ತಪ್ಪಿದೆ. ಚಿಕ್ಕ ಮಕ್ಕಳು, ತುಂಬು ಗರ್ಭಿಣಿಯರು, ವಯೋವೃದ್ಧರು ಹಸಿವಿನಿಂದ ಕಂಗಾಲಾಗಿದ್ದು, ನೆರವಿನ ನಿರೀಕ್ಷೆಯಲ್ಲಿ ಅವರಿದ್ದಾರೆ. ಅನ್ನದಾನಿಗಳನ್ನು ಎದುರು ನೋಡುತ್ತಿದ್ದಾರೆ.
ದೇಶದಲ್ಲಿ ಮಾರಕ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ಸೂಚನೆಯಂತೆ ಲಾಕ್‌ಡೌನ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಯಾವುದೇ ಕೆಲಸ ಸಿಗುತ್ತಿಲ್ಲ. ಊರು ಊರುಗಳಿಗೆ ಹೋಗಿ ಅವರು ತಮ್ಮ ಕಲಾ ಪ್ರದರ್ಶನ ನೀಡಿ ಹಣ ಸಂಗ್ರಹಿಸುವುದು ಸಾಧ್ಯವಾಗಿಲ್ಲ. ಮಾರುಕಟ್ಟೆಗೆ ಹೋಗಿ ದಿನಸಿ, ತರಕಾರಿ ಮತ್ತು ಹಣ್ಣುಗಳನ್ನು ತರಲು ಕೂಡ ತೀವ್ರ ತೊಂದರೆ ಉಂಟಾಗಿದೆ.
‘ನಾವು ಹಳ್ಳಿ ಹಳ್ಳಿಗೆ ಹೋಗಿ ಹಾಡು ಹಾಡಿ ಬಂದಂತ ಕಾಳು, ಹಣ, ವಸ್ತ್ರಗಳಲ್ಲಿ ಜೋಪಡಿಯಲ್ಲಿ ನಮ್ಮ ಜೀವನ ನಡೆಸುತ್ತಿದ್ದೆವು. ಆದರೆ, ಈಗ ಅದು ಆಗುತ್ತಿಲ್ಲ. ಈಗ ಲಾಕ್ ಡೌನ್ ಹಿನ್ನೆಲೆಯಲ್ಲಿ ನಮ್ಮ ಹಾಡು ಕೇಳುವವರಿಲ್ಲ. ಇಲ್ಲಿಂದ ತೆರಳಲು ಅನುಕೂಲವಿಲ್ಲ. ಹೀಗಾಗಿ ನಮ್ಮ ಬದುಕು ದಯನೀಯವಾಗಿದೆ. ಚಿಕ್ಕ ಮಕ್ಕಳು ಹಸಿವಿನಿಂದ ಕಂಗಾಲಾಗುತ್ತಿವೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಅವರು.
‘ಕೆಲ ಕುಟುಂಬಗಳು ಬಿ.ಪಿ.ಎಲ್. ಕಾರ್ಡ್ ಹೊಂದಿದ್ದು ಅಕ್ಕಿ ಮಾತ್ರ ಸಿಕ್ಕಿದೆ. ಹಾಲು, ತರಕಾರಿ ಇಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಸಿದ್ದರಾಯನ ಮಡ್ಡಿಯ ಎಲ್ಲ ಕುಟುಂಬಗಳು ಸ್ಲಂಗಳಲ್ಲಿ ವಾಸಿಸುತ್ತಿವೆ. ಮಠಾಧೀಶರು, ಕುಡಚಿ ಶಾಸಕ ಪಿ. ರಾಜೀವ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ, ಪುರಸಭೆ ಮುಖ್ಯಾಧಿಕಾರಿ ಮತ್ತು ಸದಸ್ಯರು ಈ ಕುಟುಂಬಗಳ ಕಡೆಗೆ ಗಮನಹರಿಸಬೇಕು. ಕಂಗಾಲಾಗಿರುವ ತಮಗೆ ನೆರವಾಗಬೇಕು ಎನ್ನುವುದು ಈ ಕುಟುಂಬಗಳ ಆಗ್ರಹವಾಗಿದೆ.
‘ಹಿಂದಿನಿಂದಲೂ ಬಹುರೂಪಿ ಕಲೆಯೇ ನಮಗೆ ಆಧಾರವಾಗಿದೆ. ಪೌರಾಣಿಕ ನಾಟಕಗಳಾದ ಕುರುಕ್ಷೇತ್ರ, ಮಹಾಭಾರತ, ರಾಮಾಯಣ, ಸತ್ಯಹರಿಶ್ಚಂದ್ರ ಹೀಗೆ... ಹತ್ತು ಹಲವಾರು ಪಾತ್ರಾಭಿನಯವನ್ನು ಮಾಡುತ್ತಾ, ಹಾಡುತ್ತಾ ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಜನರನ್ನು ರಂಜಿಸಿ ಅವರು ನೀಡಿದ ಹಣ, ದವಸಧಾನ್ಯ ಕಾಣಿಕೆ ರೂಪದಲ್ಲಿ ಪಡೆದು ಬದುಕು ನಡೆಸುವವರು ನಾವು. ಆದರೆ, ಈಗ ಲಾಕ್‌ಡೌನ್‌ನಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ನಮಗೆ ಅಧಿಕಾರಿಗಳು ದವಸಧಾನ್ಯ ಒದಗಿಸಿದರೆ ಅನುಕೂಲವಾಗುತ್ತದೆ’ ಎಂದು ಕಲಾವಿದ ಬಾಳಪ್ಪ ಈರಪ್ಪ ಬಹುರೂಪಿ ಒತ್ತಾಯಿಸಿದರು.
‘ರಾಯಬಾಗ ತಹಶೀಲ್ದಾರ್ ಜೊತೆ ಚರ್ಚೆ ಮಾಡಿದ್ದೇನೆ. ಮುಗಳಖೋಡದ ಬಹುರೂಪಿ ಜನಾಂಗದ ಕುಟುಂಬಕ್ಕೆ ಅಗತ್ಯ ಅಹಾರ ವಸ್ತುಗಳನ್ನು ವಿತರಿಸಲು ಸೂಚಿಸಿದ್ದೇನೆ’ ಎಂದು ಕುಡಚಿ ಶಾಸಕ ಪಿ. ರಾಜೀವ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.