ಬೆಳಗಾವಿ: ಯಾವ ಕಡೆ ಐತ್ರಿ ಹವಾ...!
ಜಿಲ್ಲೆಯಲ್ಲಿ ಯಾರನ್ನೇ ಭೇಟಿ ಮಾಡಿದರೂ ಮೊದಲು ಕೇಳುವ ಪ್ರಶ್ನೆ ಇದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಯಾರ ಕಡೆ ಎಂಬುದನ್ನು ಜನ ಸೂಚ್ಯವಾಗಿ ಹೀಗೆ ಪ್ರಶ್ನಿಸುತ್ತಿದ್ದಾರೆ.
ಇನ್ನೆರಡು ದಿನಗಳಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಬಿಜೆಪಿ– ಕಾಂಗ್ರೆಸ್ ಕಾರ್ಯಕರ್ತರು ತುದಿಗಾಲ ಮೇಲೆ ನಿಂತಿದ್ದಾರೆ. ಮೂರು ವಾರಗಳ ಹಿಂದೆಯೇ ಮತ ಚಲಾಯಿಸಿ ನಿರುಮ್ಮಳವಾಗಿದ್ದ ಮತದಾರರಲ್ಲಿ ಕೂಡ ಈಗ ಇನ್ನಿಲ್ಲದ ಚರ್ಚೆಗೆಳು ಭುಗಿಲೆದ್ದಿವೆ.
ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಯುವ ರಾಜಕಾರಣಿಗಳು ಹಾಗೂ ಬಿಜೆಪಿಯ ಅನುಭವಿಗಳ ಮಧ್ಯೆ ನೇರಾನೇರ ಹೋರಾಟವಿದೆ. ಬಿಜೆಪಿಗರ ಹಳೆಯ ಆಟ– ಕಾಂಗ್ರೆಸ್ಸಿಗರ ಹೊಸ ಪ್ರಯೋಗಗಳು ಜನರಲ್ಲಿ ಇನ್ನಿಲ್ಲದ ಆಸಕ್ತಿ ಕೆರಳಿಸಿವೆ. ಆದರೆ, ಮತದಾರ ಮಾತ್ರ ಕೊನೆ ಕ್ಷಣದವರೆಗೂ ತನ್ನ ಗುಟ್ಟು ಬಿಟ್ಟುಕೊಟ್ಟಿಲ್ಲ.
ಸಚಿವರು, ಶಾಸಕರು, ರಾಜಕಾರಣದ ಹಿರಿಯ ತಲೆಗಳು, ರಾಜಕೀಯ ಪಂಡಿತರು, ಜಾತಿ ಸಂಘಟನೆಗಳ ಮುಖಂಡರು ಅಳೆದು– ತೂಗಿ, ತಲೆಕೆಳಗಾಗಿ ಲೆಕ್ಕ ಹಾಕಿದರೂ ಫಲಿತಾಂಶ ಹೀಗೇ ಆಗಲಿದೆ ಎಂದು ಖಂಡತುಂಡವಾಗಿ ಹೇಳುವ ಧೈರ್ಯ ತೋರುತ್ತಿಲ್ಲ. ಅಷ್ಟರಮಟ್ಟಿಗೆ ಮತದಾರ ‘ಪ್ರಭು’ ತನ್ನ ತೀರ್ಪು ಕಾಯ್ದಿರಿಸಿದ್ದಾನೆ.
ಮೋದಿ ವಿರುದ್ಧ ಗ್ಯಾರಂಟಿ: ಜಿಲ್ಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆ ‘ಅಕ್ಕಿ ಮೇಲೆ ಆಸೆ– ನೆಂಟರ ಮೇಲೆ ಪ್ರೀತಿ’ ಎಂಬ ಮಾತಿಗೆ ಸಾಕ್ಷಿ ಆಯಿತು. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನದ ಅಲೆ; ಇನ್ನೊಂದೆಡೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಸೆಲೆ.
‘ಗ್ಯಾರಂಟಿ ಮೇಲೆ ಆಸೆ ಮೋದಿ ಮೇಲೆ ಪ್ರೀತಿ’ ಎಂದು ಇದನ್ನು ವ್ಯಾಖ್ಯಾನಿಸಬಹುದು. ಎರಡೂ ಸಂಗತಿಗಳು ಮತದಾರರನ್ನು ಸಮನಾಗಿ ಸೆಳೆಯುವಲ್ಲಿ ಯಶಸ್ವಿಯಾದವು. ಹೀಗಾಗಿ, ಫಲಿತಾಂಶ ಹೀಗೇ ಬರಲಿದೆ ಎಂದು ಹೇಳಲು ತಜ್ಞರು ಕೂಡ ತಡವರಿಸುತ್ತಿದ್ದಾರೆ.
‘ಮನೆಮಗಳು’ ಎಂಬ ಬ್ರ್ಯಾಂಡ್ ಬೆಳೆಸಿಕೊಂಡು ಗೆದ್ದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಈ ಚುನಾವಣೆಯಲ್ಲಿ ‘ಮನೆಮಗ’ ಬ್ರ್ಯಾಂಡ್ ಹುಟ್ಟುಹಾಕಿದರು. ಜಿಲ್ಲೆಯ ಜನ ಪಕ್ಕಾ ಸ್ವಾಭಿಮಾನಿಗಳು. ‘ಹೊರಗಿನ’ ವ್ಯಕ್ತಿಯನ್ನು ಧಿಕ್ಕರಿಸುತ್ತಾರೆ ಎಂಬ ವಿಶ್ವಾಸ ಮೃಣಾಲ್ ಹೆಬ್ಬಾಳಕರ ಅವರದು.
‘ಮೂರು ದಶಕಗಳಿಂದ ಜಿಲ್ಲೆಯ ಜತೆಗೆ ನಂಟಸ್ತಿಕೆ ಹೊಂದಿದ್ದೇನೆ. ಇದು ನನ್ನ ಕರ್ಮಭೂಮಿ. ಮೋದಿ ಅವರನ್ನು ಪ್ರಧಾನಿ ಮಾಡಲು ಜನ ನನ್ನನ್ನು ಗೆಲ್ಲಿಸುತ್ತಾರೆ’ ಎಂಬ ಭರವಸೆ ಜಗದೀಶ ಶೆಟ್ಟರ್ ಅವರದು.
‘ತಂದೆಯ ಸಾಧನೆಗಳು, ಗ್ಯಾರಂಟಿ ಯೋಜನೆಗಳೇ ಶ್ರೀರಕ್ಷೆ’ ಎಂಬುದು ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಅಭಯ. ‘ಸಾವಿರಾರು ಕೋಟಿ ಅನುದಾನ ಬಳಸಿಕೊಂಡಿದ್ದು, ಪ್ರಧಾನಿ ಮೋದಿ ಗೆಲುವಿಗೆ ದಾರಿ’ ಎಂಬುದು ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರ ಆತ್ಮವಿಶ್ವಾಸ.
‘ಬೆಳಗಾವಿ ಜಿಲ್ಲೆಯ ರಾಜಕಾರಣ ಪ್ರತಿಷ್ಠೆಯ ಕಣ. ಒಳಪೆಟ್ಟಿನ ಆತಂಕ ಇಬ್ಬರಿಗೂ ಇದೆ. ಇಲ್ಲಿ ಎದುರಿನ ಅಭ್ಯರ್ಥಿಯನ್ನು ಗೆಲ್ಲುವುದಕ್ಕಿಂತ ಮುಖ್ಯವಾಗಿ ನಮ್ಮವರನ್ನೇ ನಾವು ಮೊದಲು ಗೆಲ್ಲಬೇಕು’ ಎಂಬ ಮಾತು ಎರಡೂ ಪಕ್ಷಗಳಲ್ಲಿ ಪ್ರತಿಧ್ವನಿಸುತ್ತಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಆಯಾ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಎಷ್ಟು ‘ಲೀಡ್’ ನೀಡುತ್ತಾರೆ ಎಂಬುದರ ಮೇಲೆ ಗೆಲುವು ನಿರ್ಧಾರವಾಗಲಿದೆ. ಬೆಳಗಾವಿ ದಕ್ಷಿಣದಲ್ಲಿ ಶಾಸಕ ಅಭಯ ಪಾಟೀಲ ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಬಿಜೆಪಿಗೆ ಮುನ್ನಡೆ ನೀಡುವ ಸಾಧ್ಯತೆಗಳಿವೆ. ಆದರೆ ಗೋಕಾಕ ಹಾಗೂ ಅರಭಾವಿಯಲ್ಲಿ ಪಂಚಮಸಾಲಿ ಮತದಾರರ ಸಂಖ್ಯೆಯೂ ದೊಡ್ಡದು. ಇದೇ ಕಾರಣಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಈ ಎರಡೂ ಕ್ಷೇತ್ರಗಳಲ್ಲಿ ಪಂಚಮಸಾಲಿ ಅಸ್ತ್ರವನ್ನು ಹೆಚ್ಚಾಗಿ ಬಳಸಿದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇಲ್ಲಿಗೆ ಬಂದು ರಣಕಹಳೆ ಊದಿದರು. ಕಾಂಗ್ರೆಸ್ಸಿಗರ ಲೆಕ್ಕಾಚಾರ ಖಾತ್ರಿಯಾದರೆ ಬಿಜೆಪಿ ನೆಚ್ಚಿಕೊಂಡಷ್ಟು ಮುಂಚೂಣಿ ಸಿಗುವುದು ಕಷ್ಟ. ಸದ್ಯ ಲೆಕ್ಕಾಚಾರದಲ್ಲಿ ಮೂರೂ ಕ್ಷೇತ್ರ ಸೇರಿ 1.50 ಲಕ್ಷ ಮತಗಳ ಲೀಡ್ ಸಿಗುತ್ತದೆ ಎಂಬ ನಿರೀಕ್ಷೆ ಬಿಜೆಪಿಗರದ್ದು. ಉಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಮತಗಳನ್ನು ಹೇಗೆ ಕ್ರೂಡೀಕರಿಸಿದ್ದಾರೆ ಮತದಾರರ ಮೇಲೆ ಎಷ್ಟು ಬಿಗಿ ಹಿಡಿತ ಸಾಧಿಸಿದ್ದಾರೆ ಎಂಬುದೂ ಈಗ ಚರ್ಚಾಸ್ಪದ. ಬಿಜೆಪಿ ಮೂರೂ ಕ್ಷೇತ್ರಗಳಲ್ಲಿ ತಲಾ 50 ಸಾವಿರದಷ್ಟು ಮುಂಚೂಣಿ ಸಾಧಿಸಿದರೆ ಇದನ್ನು ಮೀರಿಸಲು ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಇಷ್ಟೇ ಪ್ರಮಾಣದ ಲೀಡ್ ಸಾಧಿಸಬೇಕು. ಅದು ಸಾಧ್ಯವೇ ಎಂಬುದನ್ನು ಫಲಿತಾಂಶವೇ ಬಹಿರಂಗ ಮಾಡಲಿದೆ.
‘ಚಿಕ್ಕೋಡಿಯಲ್ಲಿ ನಾವು ಎಲ್ಲ ಲೆಕ್ಕ ಹಾಕಿದ್ದೇವೆ. 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ’ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
‘ನಾವು ಗುಣಾಕಾರ– ಭಾಗಾಕಾರ ಮಾಡುವುದಿಲ್ಲ. ಗೆಲ್ಲುವುದು ಖಾತ್ರಿಯಾಗಿದೆ’ ಎನ್ನುತ್ತಾರೆ ಕಾಂಗ್ರೆಸ್ಸಿಗರು.
ನಿಪ್ಪಾಣಿ ರಾಯಬಾಗ ಹಾಗೂ ಹುಕ್ಕೇರಿ ಕ್ಷೇತ್ರಗಳಲ್ಲಿ ಬಿಜೆಪಿ ಮುಂಚೂಣಿ ಸಾಧಿಸುವ ಉಮೇದಿನಲ್ಲಿದೆ. ಉಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಬಲ ಮತಪೆಟ್ಟಿಗೆ ಹೊಂದಿದ್ದೂ ನಿಜ. ಅಥಣಿ ಚಿಕ್ಕೋಡಿ ಯಮಕನಮರಡಿ ಕುಡಚಿ ಕಾಗವಾಡ ಕ್ಷೇತ್ರಗಳ ಮೇಲೆ ಸಚಿವ ಸತೀಶ ಜಾರಕಿಹೊಳಿ ಶಾಸಕ ಲಕ್ಷ್ಮಣ ಸವದಿ ರಾಜು ಕಾಗೆ ಹಿರಿಯ ನಾಯಕ ಪ್ರಕಾಶ ಹುಕ್ಕೇರಿ ಬಿಗಿ ಹಿಡಿತ ಹೊಂದಿದ್ದನ್ನು ಅಲ್ಲಗಳೆಯುವಂತಿಲ್ಲ. ‘ಅಹಿಂದ’ ಮತದಾರರು ಹೆಚ್ಚಾಗಿದ್ದಾರೆ ಎಂಬ ಕಾರಣಕ್ಕೆ ಈ ಕ್ಷೇತ್ರ ಹಲವು ವರ್ಷ ಮೀಸಲು ಕ್ಷೇತ್ರವಾಗಿತ್ತು. ಅಲ್ಲದೇ ಲಿಂಗಾಯತ ಹಾಗೂ ಹಿಂದೂ ಅಭಿಮಾನದ ಮತಗಳೂ ಇಲ್ಲಿ ದೊಡ್ಡ ಪ್ರಮಾಣದಲ್ಲಿವೆ ಎಂಬುದೂ ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.