ADVERTISEMENT

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಚುನಾವಣೆ: ಇಲ್ಲಿ ಪಕ್ಷ, ಅಲ್ಲಿ ವ್ಯಕ್ತಿ ನಿಷ್ಠ

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ಮತ್ತಷ್ಟು ಗಟ್ಟಿಯಾದ ಸಾಂಪ್ರದಾಯಿಕ ಮತಗಳು

ಸಂತೋಷ ಈ.ಚಿನಗುಡಿ
Published 11 ಜೂನ್ 2024, 7:08 IST
Last Updated 11 ಜೂನ್ 2024, 7:08 IST
ಬಿ.ಶಂಕರಾನಂದ
ಬಿ.ಶಂಕರಾನಂದ   

ಬೆಳಗಾವಿ: ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲೂ ಸಾಂಪ್ರದಾಯಿಕ ಮತಗಳು ಇರುತ್ತವೆ. ನಾವು ಏನೇ ತಿಪ್ಪರಲಾಗ ಹಾಕಿದರೂ ಆ ಮತದಾರರು ನಂಬಿಕೊಂಡ ಪಕ್ಷ ಹಾಗೂ ನಂಬಿಕೊಂಡ ವ್ಯಕ್ತಿಗೇ ಬೆಂಬಲ ನೀಡುತ್ತಾರೆ...

ಶಾಸಕ ಲಕ್ಷ್ಮಣ ಸವದಿ ಅವರ ಮಾತು ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕನ್ನಡಿ ಹಿಡಿದಂತಿದೆ. ಈ ಹಿಂದಿನ ಎಲ್ಲ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ನೋಡಿದರೆ; ಬೆಳಗಾವಿಯಲ್ಲಿ ಪಕ್ಷನಿಷ್ಠೆ– ಚಿಕ್ಕೋಡಿಯಲ್ಲಿ ವ್ಯಕ್ತಿನಿಷ್ಠೆ ಗೆಲುವು ಕಂಡಿದ್ದು ಸ್ಪಷ್ಟವಾಗುತ್ತದೆ. ಬೆಳಗಾವಿಯಲ್ಲಿ ಬಿಜೆಪಿ ಪರ, ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಪರವಾದ ಸಾಂಪ್ರದಾಯಿಕ ಮತಗಳು ಇನ್ನೂ ನಿಷ್ಠವಾಗಿವೆ ಎಂಬುದನ್ನು ಈ ಬಾರಿಯ ಚುನಾವಣೆ ಸಾಬೀತು ಮಾಡಿದೆ.

ಕಳೆದ ಐದು ಚುನಾವಣೆಗಳಲ್ಲಿ ಬೆಳಗಾವಿಯಲ್ಲಿ ಬಿಜೆಪಿ ವಿಕ್ರಮನಾಗಿ ಮೆರೆದಿದೆ. ಈ 20 ವರ್ಷಗಳ ಅವಧಿಯಲ್ಲಿ ಮತದಾರರ ಪಟ್ಟಿಯ ಸಂಖ್ಯೆ ಏರಿದೆ. ಅದಕ್ಕೆ ತಕ್ಕಂತೆ ಬಿಜೆಪಿ ಪರವಾದ ಮತಗಳೂ ಏರಿಕೆ ಕಂಡಿವೆ.

ADVERTISEMENT

1998ರಲ್ಲಿ ಬಾಬಾಗೌಡ ಪಾಟೀಲ ಅವರು ಮೊದಲ ಬಾರಿಗೆ ಇಲ್ಲಿ ಕಮಲ ಅರಳಿಸಿದರು. ನಂತರ 1999ರಲ್ಲಿ ಅಮರಸಿಂಹ ಪಾಟೀಲ ಮತ್ತೆ ‘ಕೈ’ ವಶ ಮಾಡಿಕೊಂಡರು. 2004ರಿಂದ ಇಲ್ಲಿಯವರೆಗೆ ನಡೆದ ಐದೂ ಚುನಾವಣೆಗಳಲ್ಲಿ ಬಿಜೆಪಿ ವಿಕ್ರಮನಾಗಿ ಮೆರೆದಿದೆ. ಪ್ರಭಾವಿ ಪಡೆ ಹೊಂದಿದ ಜಾರಕಿಹೊಳಿ ಕುಟುಂಬ, ಹೆಬ್ಬಾಳಕರ ಕುಟುಂಬದವರು ಕಣಕ್ಕಿಳಿದಾಗಲೂ; ಎರಡೂ ಕುಟುಂಬಗಳು ಒಟ್ಟಿಗೇ ಸೇರಿ ಯತ್ನ ಮಾಡಿದಾಗಲೂ ಮತದಾರ ಬಿಜೆಪಿ ಬಿಟ್ಟುಕೊಟ್ಟಿಲ್ಲ. ಇದಕ್ಕೆ ಕಾರಣ ಸಾಂಪ್ರದಾಯಿಕ ಮತಗಳ ಗಟ್ಟಿತನ.

ಹಿನ್ನೋಟ: 2009ರಲ್ಲಿ 7.54 ಲಕ್ಷ ಮತಗಳು ಚಲಾವಣೆಯಾಗಿದ್ದರೆ ಸುರೇಶ ಅಂಗಡಿ 3.84 ಲಕ್ಷ ಪಡೆದಿದ್ದರು. 2014ರಲ್ಲಿ 10.78 ಲಕ್ಷ ಮತಗಳಲ್ಲಿ ಅಂಗಡಿ ಅವರಿಗೆ 5.54 ಲಕ್ಷ ಮತ, 2019ರ ಚುನಾವಣೆಯಲ್ಲಿ ಚಲಾವಣೆಯಾದ 12 ಲಕ್ಷ ಮತಗಳ ಪೈಕಿ ಬಿಜೆಪಿಗೆ 7.61 ಲಕ್ಷ ಸಿಕ್ಕಿದ್ದವು. 2021ರಲ್ಲಿ ನಡೆದ ಉಪ ಚುನಾವಣೆಯಲ್ಲೂ 10.22 ಲಕ್ಷ ಮತಗಳ ಪೈಕಿ ಮಂಗಲಾ ಅಂಗಡಿ 4.40 ಲಕ್ಷ ಮತ ಗಿಟ್ಟಿಸಿಕೊಂಡರು. ಪ್ರಸಕ್ತ ಚುನಾವಣೆಯಲ್ಲಿ ಹೊಸಮುಖವಾದರೂ 13.84 ಲಕ್ಷ ಮತಗಳಲ್ಲಿ ಜಗದೀಶ ಶೆಟ್ಟರ್‌ 7.62 ಲಕ್ಷ ಮತ ಬಾಚಿಕೊಳ್ಳುವಲ್ಲಿ ಯಶಸ್ವಿಯಾದರು.

ಎರಡು ದಶಕಗಳ ಎಲ್ಲ ಚುನಾವಣೆಯಲ್ಲೂ ಬಿಜೆಪಿಗೆ ಸರಾಸರಿ 60ರಷ್ಟು ಮತಗಳು ಮೀಸಲಾಗಿರುವುದನ್ನು ಈ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ. ಅಭ್ಯರ್ಥಿ ಯಾರೇ ಆದರೂ ಸಾಂಪ್ರದಾಯಿಕ ಮತದಾರ ತನ್ನ ನಿಷ್ಠೆ ಬದಲಿಸಿಲ್ಲ ಎಂಬುದು ಸ್ಪಷ್ಟ.

ವ್ಯಕ್ತಿನಿಷ್ಠ ಮತಗಳ ‘ಮೀಸಲು’

1967ರಿಂದ 2009ರವರೆಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರ ಪರಿಶಿಷ್ಟರಿಗೆ ಮೀಸಲಾಗಿತ್ತು. ಇಂದಿರಾ ಗಾಂಧಿ ಕಾಲದ ಕಾಂಗ್ರೆಸ್‌ನಲ್ಲಿ ರಾಷ್ಟ್ರದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಬಿ.ಶಂಕರಾನಂದ ಅವರು ಇದೇ ಕ್ಷೇತ್ರದಿಂದ ಸತತ ಏಳು ಬಾರಿ ಗೆದ್ದಿದ್ದರು.

ಸಾಂಪ್ರದಾಯಿಕ ಮತಗಳು ಒಂದು ಪಕ್ಷಕ್ಕೆ ಎನ್ನುವುದಕ್ಕಿಂತ ಒಬ್ಬ ವ್ಯಕ್ತಿಗೆ ಬಂದಿದ್ದು ವಿಶೇಷ. ರಮೇಶ ಜಿಗಜಿಣಗಿ ಅವರು 1998ರಿಂದ ಮೂರು ಬಾರಿ ಅಂದರೆ; ಒಮ್ಮೆ ಲೋಕಶಕ್ತಿಯಿಂದ ಒಮ್ಮೆ ಸಂಯುಕ್ತ ದನತಾದಳದಿಂದ ಒಮ್ಮೆ ಬಿಜೆಪಿಯಿಂದ ಗೆದ್ದರು. ಪಕ್ಷ ಬದಲಾದರೂ ಮತದಾರ ಮಾತ್ರ ಸಾಂಪ್ರದಾಯಿಕ ವ್ಯಕ್ತಿ ನಿಷ್ಠೆ ಬಿಡಲಿಲ್ಲ.

2009ರಲ್ಲಿ ಈ ಕ್ಷೇತ್ರ ಸಾಮಾನ್ಯವಾಯಿತು. ಈ ಭಾಗದಲ್ಲಿ ಪ್ರಭಾವಿ ರಾಜಕಾರಣಿಗಳಾದ ರಮೇಶ ಕತ್ತಿ ಉಮೇಶ ಕತ್ತಿ ಸಾಂಪ್ರದಾಯಿಕ ಮತಗಳನ್ನು ಕ್ರೂಢೀಕರಿಸಿ ಕಮಲ ಅರಳಿಸಿದರು. ಆಗಲೂ ಚುನಾವಣೆ ವ್ಯಕ್ತಿಕೇಂದ್ರಿತವಾಗಿಯೇ ನಡೆದಿತ್ತು.

1957ರಿಂದ ಈವರೆಗೆ ನಡೆದ 16 ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದು ಎರಡು ಬಾರಿ ಮಾತ್ರ. ಉಳಿದಂತೆ ಕಾಂಗ್ರೆಸ್‌ ತನ್ನ ಸಾಂಪ್ರದಾಯಿಕ ಮತಗಳನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ ಗೆದ್ದಿದ್ದಾರೆ. ಇದು ಕಾಂಗ್ರೆಸ್‌ ಗೆಲುವು ಎನ್ನುವುದಕ್ಕಿಂತ ಸತೀಶ ಜಾರಕಿಹೊಳಿಯ ಪ್ರಭಾವ ಎಂಬುದು ಗುಟ್ಟಾಗಿ ಉಳಿದಿಲ್ಲ. ಮತದಾರ ಮತ್ತೆ ವ್ಯಕ್ತಿನಿಷ್ಠ ಸಂಪ್ರದಾಯದ ಮುಂದುವರಿಸಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.