ADVERTISEMENT

ಖಾನಾಪುರ | ಮತದಾನ ಬಹಿಷ್ಕಾರ: ಅಧಿಕಾರಿಗಳಿಂದ ಮನವೊಲಿಕೆ

ಕಾಡಾನೆ ದಾಳಿಯಿಂದ ಬೇಸತ್ತ ಕಬನಾಳಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 2 ಮೇ 2024, 14:08 IST
Last Updated 2 ಮೇ 2024, 14:08 IST
ಖಾನಾಪುರ ತಾಲ್ಲೂಕಿನ ಕಬನಾಳಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಅರಣ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಗ್ರಾಮಸ್ಥರ ಜೊತೆ ಕಾಡಾನೆ ಹಾವಳಿ ಮತ್ತು ಮತದಾನ ಬಹಿಷ್ಕಾರದ ಕುರಿತು ಚರ್ಚಿಸಿದರು
ಖಾನಾಪುರ ತಾಲ್ಲೂಕಿನ ಕಬನಾಳಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಅರಣ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಗ್ರಾಮಸ್ಥರ ಜೊತೆ ಕಾಡಾನೆ ಹಾವಳಿ ಮತ್ತು ಮತದಾನ ಬಹಿಷ್ಕಾರದ ಕುರಿತು ಚರ್ಚಿಸಿದರು   

ಖಾನಾಪುರ:  ಮೂರು ವಾರದಿಂದ ತಮ್ಮೂರ ಸುತ್ತ ಸುತ್ತಿ ಬೆಳೆಹಾನಿ ಮಾಡುತ್ತಿರುವ ಕಾಡಾನೆಯಿಂದಾಗಿ ಬೇಸತ್ತು ಮತದಾನ ಬಹಿಷ್ಕಾರಕ್ಕೆ ಮುಂದಾಗಿರುವ ತಾಲ್ಲೂಕಿನ ಕಬನಾಳಿ ಗ್ರಾಮಸ್ಥರ ಅಹವಾಲು ಆಲಿಸಿದ ಅಧಿಕಾರಿಗಳು, ಮತದಾನ ಬಹಿಷ್ಕರಿಸದಂತೆ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು.

ತಮ್ಮೂರಿನ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಕಾಡಾನೆ ಹಾವಳಿಯಿಂದ ಬೆಳೆ ನಾಶವಾಗಿ, ಕಾಡಾನೆಯನ್ನು ಬೇರೆ ಸ್ಥಳಕ್ಕೆ ಓಡಿಸದಿದ್ದರೇ ಮತದಾನ ಬಹಿಷ್ಕರಿಸುವುದಾಗಿ ನಿರ್ಧರಿಸಿದ್ದರಿಂದ ಗುರುವಾರ ಗ್ರಾಮಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ನಿಂಬರಗಿ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮಸ್ಥರ ಸಭೆ ನಡೆಸಿದರು.

 ಸುನಿತಾ ನಿಂಬರಗಿ ಮಾತನಾಡಿ, ‘ಕಬನಾಳಿ ಗ್ರಾಮಸ್ಥರಿಗೆ ಕಾಡಾನೆಯಿಂದ ಸಮಸ್ಯೆ ಉಂಟಾಗಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಆನೆ ಮಾಡಿರುವ ಬೆಳೆನಾಶದ ಬಗ್ಗೆಯೂ ಪರಿಶೀಲಿಸಿ ವರದಿ ತಯಾರಿಸಲಾಗಿದೆ. ಆದಷ್ಟು ಬೇಗ ಕಾಡಾನೆಯನ್ನು ಗ್ರಾಮದಿಂದ ಬೇರೆ ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಬೆಳೆಹಾನಿಗೆ ಪರಿಹಾರವನ್ನೂ ಒದಗಿಸಲಾಗುವುದು. ಅಲ್ಲಿಯವರೆಗೆ ಗ್ರಾಮಸ್ಥರು ಅರಣ್ಯ ಇಲಾಖೆ ಜೊತೆ ಸಹಕರಿಸಬೇಕು’ ಎಂದು ಕೋರಿದರು.

ADVERTISEMENT

ಸ್ವೀಪ್ ಸಮಿತಿ ಅಧ್ಯಕ್ಷೆ ಭಾಗ್ಯಶ್ರೀ ಜಹಾಗೀರದಾರ ಮಾತನಾಡಿ, ‘ಮತದಾನ ಸಂವಿಧಾನ ನಮಗೆ ನೀಡಿರುವ ಶ್ರೇಷ್ಠ ಹಕ್ಕು. ಪ್ರತಿಯೊಂದು ಮತವೂ ಅಮೂಲ್ಯವಾಗಿದೆ. ಯಾರು ಮತದಾನದಿಂದ ಹೊರಗುಳಿಯಬಾರದು’  ಎಂದು ಗ್ರಾಮದ ಮತದಾರರಲ್ಲಿ ಮನವಿ ಮಾಡಿದರು.

ಹಾಯಕ ಚುನಾವಣಾಧಿಕಾರಿ ಬಲರಾಮ ಚವ್ಹಾಣ, ತಹಶೀಲ್ದಾರ್ ಪ್ರಕಾಶ ಗಾಯಕವಾಡ, ನೀಲಾವಡೆ ಗ್ರಾಪಂ ಪಿಡಿಓ ಎಂ.ಎಂ. ಮೊಕಾಶಿ, ಕಾರ್ಯದರ್ಶಿ ರಾಮು ತಳವಾರ,  ಲಕ್ಷ್ಮಣ ದೇಸಾಯಿ ಸೇರಿದಂತೆ ಗ್ರಾಪಂ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.