ಬೆಳಗಾವಿ: 'ಬೆಳಗಾವಿ ಕ್ಷೇತ್ರದಲ್ಲಿ ಕಳೆದೆರಡು ದಿನಗಳಿಂದ ಕಾಂಗ್ರೆಸ್ ನವರು ಹಣ ಹಂಚುವುದನ್ನು ಬಿಟ್ಟರೆ, ಮತದಾರರನ್ನು ಮನವೊಲಿಸುವ ಕೆಲಸ ಮಾಡಲಿಲ್ಲ. ಹಣ ಹಂಚಿಕೆ ಮೇಲೆಯೇ ಅವರು ಗೆಲ್ಲುವ ಭ್ರಮೆಯಲ್ಲಿದ್ದಾರೆ. ಆದರೆ, ಜನ ಅವರನ್ನು ತಿರಸ್ಕರಿಸಿ, ಸರಿಯಾಗಿ ಉತ್ತರ ಕೊಡಲಿದ್ದಾರೆ. ಹಣ ಮತ್ತು ಅಧಿಕಾರದ ಬಲದ ಮೇಲೆ ಪ್ರಜಾತಂತ್ರ ವ್ಯವಸ್ಥೆ ನಡೆಯುವುದಿಲ್ಲ' ಎಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ತಿರುಗೇಟು ನೀಡಿದರು.
ಇಲ್ಲಿನ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಮಂಗಳವಾರ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
'ಕಾಂಗ್ರೆಸ್ ನವರು ತಾವು ಮಾಡಿದ ಸಾಧನೆ ಹಾಗೂ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸಬೇಕಿತ್ತು. ಆದರೆ, ಸೋಲಿನ ಭೀತಿ, ಹತಾಶೆ ಮನೋಭಾವದಿಂದ ಹಣ ಹಂಚುತ್ತಿದ್ದಾರೆ. ಈ ಬಗ್ಗೆ ದೂರು ಕೊಟ್ಟಿದ್ದು, ಸಂಬಂಧಿತರು ಗಂಭೀರವಾದ ಕ್ರಮ ಕೈಗೊಳ್ಳಬೇಕಿದೆ' ಎಂದರು.
'ಕಳೆದೊಂದು ತಿಂಗಳಿಂದ ಬೆಳಗಾವಿಯಲ್ಲಿ ಪ್ರಚಾರ ಮಾಡುತ್ತಿದ್ದೇನೆ. ದಿನದಿಂದ ದಿನಕ್ಕೆ ನಮ್ಮ ಪಕ್ಷಕ್ಕೆ ಹೆಚ್ಚಿನ ಬೆಂಬಲ ಸಿಗುತ್ತಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು ಎಂದು ಜನರು ಇಚ್ಛೆ ಹೊಂದಿದ್ದಾರೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು, ಮತ ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟ ಜೋರಾಗಿದೆ. ಹಾಗಾಗಿ ಉಳಿದ ಮತದಾರರು ಬೇಗನೆ ಆಗಮಿಸಿ ಮತ ಚಲಾಯಿಸಬೇಕು' ಎಂದು ಕೋರಿದರು.
ಪ್ರಜ್ವಲ್ ರೇವಣ್ಣ ಅವರ ವಿಡಿಯೊಗಳ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಆಡಿಯೊ ಹರಿದಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, 'ಈ ಪ್ರಕರಣದಲ್ಲಿ ಡಿಕೆಶಿ ಹೆಸರು ಹಿಂದಿನಿಂದಲೂ ಕೇಳಿಬರುತ್ತಿದೆ. ಎಸ್ಐಟಿ ತನಿಖೆಯಿಂದ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐಯಿಂದ ತನಿಖೆಗೆ ಒಳಪಡಿಸಬೇಕು' ಎಂದು ಆಗ್ರಹಿಸಿದರು.
'ಈ ಚುನಾವಣೆಗೂ, ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಮತ್ತು ಶಿವಕುಮಾರ್ ಆಡಿಯೋ ಹರಿದಾಡುತ್ತಿರುವ ವಿಚಾರಗಳಿಗೂ ಯಾವುದೇ ಸಂಬಂಧವಿಲ್ಲ. ಈ ವಿಷಯ ಬಿಜೆಪಿ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.