ADVERTISEMENT

ಈ ಬಾರಿ ಬೆಳಗಾವಿ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿ ನಿಶ್ಚಿತ: ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 7 ಮೇ 2024, 4:19 IST
Last Updated 7 ಮೇ 2024, 4:19 IST
<div class="paragraphs"><p>ಬೆಳಗಾವಿ ತಾಲ್ಲೂಕಿನ ಹಿಂಡಲಗಾದ ವಿಜಯನಗರದ ಸರ್ಕಾರಿ ಮರಾಠಿ ಶಾಲೆ ಮತಗಟ್ಟೆಯಲ್ಲಿ ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಮತ ಚಲಾಯಿಸಿದರು.</p></div>

ಬೆಳಗಾವಿ ತಾಲ್ಲೂಕಿನ ಹಿಂಡಲಗಾದ ವಿಜಯನಗರದ ಸರ್ಕಾರಿ ಮರಾಠಿ ಶಾಲೆ ಮತಗಟ್ಟೆಯಲ್ಲಿ ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಮತ ಚಲಾಯಿಸಿದರು.

   

ಬೆಳಗಾವಿ: 'ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗುವುದು ನಿಶ್ಚಿತ' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ತಾಲ್ಲೂಕಿನ ಹಿಂಡಲಗಾದ ವಿಜಯನಗರದ ಸರ್ಕಾರಿ ಮರಾಠಿ ಶಾಲೆ ಮತಗಟ್ಟೆಯಲ್ಲಿ ಮಂಗಳವಾರ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ADVERTISEMENT

'ಇದು ದೇಶದ ಪ್ರಜಾಪ್ರಭುತ್ವದ ದೊಡ್ಡ ಹಬ್ಬ. ದೇವರು ಮತ್ತು ಅಜ್ಜನ ಆಶೀರ್ವಾದ ತೆಗೆದುಕೊಂಡು ಕುಟುಂಬ ಸಮೇತವಾಗಿ ಮತದಾನ ಮಾಡಿದ್ದೇನೆ. ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಪ್ರಚಾರದ ಮೊದಲ ದಿನವೇ ತಿಳಿಸಿದ್ದೆ. ಅಂದು ಹೇಳಿದಂತೆ ಈ ಬಾರಿ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಇತಿಹಾಸ ನಿರ್ಮಾಣವಾಗಲಿದೆ. ಪ್ರಚಾರದ ಮೊದಲ ದಿನದ ವಾತಾವರಣ ಫಲಿತಾಂಶದ ದಿನದವರೆಗೂ ಇರಲಿದೆ' ಎಂದರು.

'ಮತದಾರರನ್ನು ಸೆಳೆಯಲು ಕಾಂಗ್ರೆಸ್ ನವರು ಹಣ ಹಂಚುತ್ತಿದ್ದಾರೆ' ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಹೆಬ್ಬಾಳಕರ, 'ನಮಗೆ ಅದು ಗೊತ್ತಿಲ್ಲ. ಜೂನ್ 4ರಂದು ಜನರೇ ಇವರ ಆರೋಪಕ್ಕೆ ಉತ್ತರ ಕೊಡುತ್ತಾರೆ. ಅಲ್ಲಿಯವರೆಗೂ ಕಾಯಬೇಕು' ಎಂದು ತಿರುಗೇಟು ನೀಡಿದರು.

'ನನ್ನ ಸಹೋದರ ಚನ್ನರಾಜ, ನನ್ನ ಅಜ್ಜ, ನಮ್ಮ ಪಕ್ಷದ ಶಾಸಕರು, ಕಾಂಗ್ರೆಸ್ ಮುಖಂಡರು ಮತ್ತು ಮತದಾರರು ನನ್ನ ಶಕ್ತಿ. ಮಾವ-ಅಳಿಯನ ಜೋಡಿ ಖಂಡಿತವಾಗಿಯೂ ಹಿಟ್ ಆಗುತ್ತದೆ. ಇಂದು ನನ್ನ ತವರು ಮನೆಯಾದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಓಡಾಡುತ್ತೇನೆ' ಎಂದು ಹೇಳಿದರು.

'ಮೋದಿ ಅಲೆ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ, 2014ರಲ್ಲಿ ನಾನು ಸ್ಪರ್ಧಿಸಿದ್ದ ಲೋಕಸಭೆ ಚುನಾವಣೆಗೂ ಹಾಗೂ 2024ರಲ್ಲಿ ನನ್ನ ಮಗ ಸ್ಪರ್ಧಿಸಿದ ಚುನಾವಣೆಗೂ ಬಹಳಷ್ಟು ವ್ಯತ್ಯಾಸವಾಗಿದೆ. ಜಯ ನಮ್ಮದಾಗಲಿದೆ' ಎಂದರು.

ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಮಾತನಾಡಿ, 'ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದ್ದು, ಈ ಬಾರಿ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ. ಬೆಳಗಾವಿ ಕ್ಷೇತ್ರದಲ್ಲಿ ಇತಿಹಾಸ ನಿರ್ಮಾಣವಾಗುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, 'ಸುಳೇಭಾವಿಯ ಮಹಾಲಕ್ಷ್ಮಿ ದೇವಿ, ಉಚಗಾವಿಯ ಮಳೆಕರಣಿ ದೇವಿ ಆಶೀರ್ವಾದ ಪಡೆದ ಮತ ಹಾಕಿದ್ದೇವೆ. ಈ ಬಾರಿ ಬೆಳಗಾವಿಯಲ್ಲಿ ಸ್ವಾಭಿಮಾನ‌ ಗೆಲ್ಲುತ್ತದೆ. ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ ಒಳಗೊಂಡು ಎಲ್ಲ ಕಾಂಗ್ರೆಸ್ ಮುಖಂಡರು, ಶಾಸಕರು ಒಗ್ಗಟ್ಟು ಪ್ತದರ್ಶಿಸಿದ್ದೇವೆ. ಹಾಗಾಗಿ, ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಗೆದ್ದೇ ಗೆಲ್ಲುತ್ತೇವೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.