ಬೆಳಗಾವಿ: ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿ, ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಅವರ ಮನೆಗೆ ಬೆಂಕಿ ಹಚ್ಚಲಾಗಿದೆ.
ಹೊಸ ವಂಟಮೂರಿಯ ಸಂತ್ರಸ್ತ ಮಹಿಳೆಯ ಪುತ್ರ ಯುವತಿಯನ್ನು ಪ್ರೀತಿಸಿ ಓಡಿಹೋಗಿದ್ದೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸಂತ್ರಸ್ತೆಯ ಪುತ್ರ ದುಂಡಪ್ಪ ಹಾಗೂ ಇದೇ ಊರಿನ ಪ್ರಿಯಾಂಕ ಪ್ರೀತಿಸುತ್ತಿದ್ದರು. ಪ್ರಿಯಾಂಕ ಮನೆಯವರು ಇದಕ್ಕೆ ಒಪ್ಪದೇ, ಬೇರೊಬ್ಬ ವರನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಸೋಮವಾರ (ಡಿ.11) ಪ್ರಿಯಾಂಕ ಮದುವೆ ಕೂಡ ಗೊತ್ತಾಗಿತ್ತು. ಆದರೆ, ಭಾನುವಾರ ರಾತ್ರಿಯೇ ದುಂಡಪ್ಪ– ಪ್ರಿಯಾಂಕ ಮನೆ ಬಿಟ್ಟು ಓಡಿಹೋದರು.
ಇದರಿಂದ ರೊಚ್ಚಿಗೆದ್ದ ಯುವತಿ ಮನೆಯವರು ಯುವಕನ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದರು. ಬೆತ್ತಲೆ ಮಾಡಿ ಊರಿನ ಬೀದಿಗಳಲ್ಲಿ ಓಡಾಡಿಸಿದರು. ಕಂಬಕ್ಕೆ ಕಟ್ಟಿ ಮತ್ತೆ ಹೊಡೆದರು. ಅವರ ಮನೆಗೆ ಬೆಂಕಿ ಹಚ್ಚಿ ಅಪಾರ ಹಾನಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ವಿಷಯ ತಿಳಿದ ಕಾಕತಿ ಪೊಲೀಸರು ತಡರಾತ್ರಿ ಗ್ರಾಮಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಪ್ರಕರಣದ ಸಂಬಂಧ ಏಳು ಆರೋಪಿಗಳನ್ನು ಸೋಮವಾರ ಬೆಳಿಗ್ಗೆ ವಶಕ್ಕೆ ಪಡೆದರು.
ಓಡಿಹೋದ ಪ್ರೇಮಿಗಳಿಗೆ ಹುಡುಕಾಟ ನಡೆದಿದೆ. ಈ ಇಬ್ಬರೂ ಒಂದೇ ಜಾತಿಗೆ ಸೇರಿದವರಾಗಿದ್ದಾರೆ. ಇದು ಜಾತಿ ಸಂಘರ್ಷವಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದಲ್ಲಿ ಕೆಎಸ್‌ಆರ್‌ಪಿಯ ಎರಡು ತುಕಟಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.