ADVERTISEMENT

ಬೆಳಗಾವಿ | ಫಲ ನೀಡಿದ ಸಂಘಟಿತ ಪ್ರಯತ್ನ: ಮತದಾನ ಹೆಚ್ಚಳ

ಇಮಾಮ್‌ಹುಸೇನ್‌ ಗೂಡುನವರ
Published 9 ಮೇ 2024, 6:48 IST
Last Updated 9 ಮೇ 2024, 6:48 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಳಗಾವಿ: ಸ್ವೀಪ್(ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಸಮಿತಿ ಚಟುವಟಿಕೆಗಳು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಮನವಿ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಂಘಟಿತ ಪ್ರಯತ್ನದಿಂದ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಈ ಬಾರಿ ಮತದಾನ ಪ್ರಮಾಣ ಹೆಚ್ಚಳವಾಗಿದೆ.

2014 ಮತ್ತು 2019ರ ಲೋಕಸಭೆ ಚುನಾವಣೆಗಳು ಬೇಸಿಗೆಯಲ್ಲೇ ನಡೆದಿದ್ದವು. ಆದರೆ, ಆಗ ಬಿಸಿಲಿನ ಅಬ್ಬರ ಹೆಚ್ಚಿರಲಿಲ್ಲ. ಈ ಬಾರಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ದಾಟಿದ್ದರಿಂದ ಮತದಾನ ಪ್ರಮಾಣ ಕುಗ್ಗಬಹುದು ಎಂಬ ಆತಂಕ ಅಧಿಕಾರಿಗಳನ್ನು ಕಾಡಿತ್ತು. ಆದರೆ, ಹಿಂದಿನ ಎರಡು ಚುನಾವಣೆಗಳಿಗಿಂತ ಹೆಚ್ಚಿನ ಮತದಾನವಾಗಿದೆ. ಬಿಸಿಲಿಗೆ ಬೆದರದ ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು, ತಮ್ಮಿಷ್ಟದ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ.

ADVERTISEMENT

2014ರ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಶೇ 68.25, ಚಿಕ್ಕೋಡಿಯಲ್ಲಿ ಶೇ 74.30 ಮತದಾನವಾಗಿದ್ದರೆ, 2019ರ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಶೇ 67.70, ಚಿಕ್ಕೋಡಿಯಲ್ಲಿ ಶೇ 75.53ರಷ್ಟು ಮತದಾನವಾಗಿತ್ತು. ಈ ಬಾರಿ ಬೆಳಗಾವಿ ಕ್ಷೇತ್ರದಲ್ಲಿ ಶೇ 71.49 ಮತ್ತು ಚಿಕ್ಕೋಡಿಯಲ್ಲಿ ಶೇ 78.66ರಷ್ಟು ಮತದಾನವಾಗಿದೆ. ಕಳೆದ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಬೆಳಗಾವಿಯಲ್ಲಿ ಶೇ 3.79ರಷ್ಟು ಮತ್ತು ಚಿಕ್ಕೋಡಿಯಲ್ಲಿ ಶೇ 3.13ರಷ್ಟು ಮತದಾನ ಹೆಚ್ಚಳವಾಗಿದೆ. ಇದರಿಂದಾಗಿ ಯಾರಿಗೆ ಲಾಭ ಮತ್ತು ನಷ್ಟವಾಗಲಿದೆ ಎಂಬ ಲೆಕ್ಕಾಚಾರವೂ ಶುರುವಾಗಿದೆ.

ಹಲವು ಕಾರ್ಯಕ್ರಮ: ಮತದಾನದ ಕುರಿತು ಅರಿವು ಮೂಡಿಸಲು ಸ್ವೀಪ್ ಸಮಿತಿಯು ಅಂತರರಾಷ್ಟ್ರೀಯ ಅಂಗವಿಕಲ ಈಜುಪಟು ರಾಘವೇಂದ್ರ ಅಣ್ವೇಕರ್‌, ಲಿಂಗತ್ವ ಅಲ್ಪಸಂಖ್ಯಾತರಾದ ಈಶ್ವರ ತಳವಾರ ಮತ್ತು ರಾಷ್ಟ್ರೀಯ ಜುಡೋಪಟು ಸಹನಾ ಎಸ್‌.ಆರ್‌. ಅವರನ್ನು ರಾಯಭಾರಿಗಳಾಗಿ ನೇಮಿಸಿತ್ತು. ಬೈಕ್ ರ್‍ಯಾಲಿ, ಅಂಗವಿಕಲರಿಂದ ಟ್ರೈಸೈಕಲ್‌ ರ್‍ಯಾಲಿ, ಬೋಟಿಂಗ್‌ ಮೂಲಕ ರ್‍ಯಾಲಿ, ಕ್ರಿಕೆಟ್‌ ಟೂರ್ನಿ, ಮ್ಯಾರಥಾನ್‌, ಪ್ರೌಢಶಾಲೆ ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ರಂಗೋಲಿ, ಪ್ರಬಂಧ ಸ್ಪರ್ಧೆ ಆಯೋಜನೆ ಮೊದಲಾದ ಚಟುವಟಿಕೆಗಳನ್ನು ಕೈಗೊಂಡಿತ್ತು. ಇವೆಲ್ಲ ಮತದಾನ ಪ್ರಮಾಣ ವೃದ್ಧಿಗೆ ‘ಫಲ’ ಕೊಟ್ಟಿವೆ.

ಪ್ರಬಲ ಅಭ್ಯರ್ಥಿಗಳೂ ಕಾರಣ: ‘ಯಾವುದೇ ಚುನಾವಣೆಯಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳು ಪ್ರಬಲರಿದ್ದಾಗ, ರಾಜಕೀಯ ಪಕ್ಷದವರು ಮತದಾನಕ್ಕೆ ಜನರನ್ನು ಪ್ರೇರೇಪಿಸುತ್ತಾರೆ. ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರ ಮೂಲಕ ಜನರನ್ನು ಮತಗಟ್ಟೆಗಳತ್ತ ಕರೆತರಲು ಯತ್ನಿಸುತ್ತಾರೆ. ಈ ಸಲ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳ ಮಧ್ಯೆ ತುರುಸಿನ ಸ್ಪರ್ಧೆ ಇತ್ತು. ಅವರು ಮತದಾರರನ್ನು ಸೆಳೆಯಲು ಯತ್ನಿಸಿದರು. ಇದರಿಂದಾಗಿಯೂ ಮತದಾನ ಹೆಚ್ಚಳವಾಗಿದೆ’ ಎಂಬ ಮಾತು ಕೇಳಿಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.