ಅಕ್ಕ ಮಹಾದೇವಿ ವೇದಿಕೆ (ಬೆಳಗಾವಿ): ‘ಜಗತ್ತಿನಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಜಗದ್ಗುರು ಸ್ಥಾನ ನೀಡಿದ್ದು ಲಿಂಗಾಯತ ಧರ್ಮ ಮಾತ್ರ. ಬೇರೆ ಯಾವ ಧರ್ಮದಲ್ಲೂ ಹೆಣ್ಣುಮಕ್ಕಳಿಗೆ ಈ ಮಟ್ಟದ ಸಮಾನತೆ, ಗೌರವಗಳು ಸಿಕ್ಕಿಲ್ಲ’ ಎಂದು ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭೆಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ ಉದ್ಘಾಟನಾ ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕೂಡಲಸಂಗಮ ಪೀಠಾಧ್ಯಕ್ಷೆ ಆಗಿ ಮಾತೆ ಮಹಾದೇವಿ ಅವರನ್ನು 50 ವರ್ಷಗಳ ಹಿಂದೆಯೇ ಮಾಡಲಾಯಿತು. ಆಗ ಸಮಾಜ ಇದನ್ನು ಅರಿಗಿಸಿಕೊಳ್ಳಲಿಲ್ಲ. ಧೈರ್ಯ ತುಂಬಿ ಬೆನ್ನೆಲುಬಾಗಿ ನಿಂತವರು ಲಿಂಗಾನಂದ ಸ್ವಾಮೀಜಿ. ಶರಣ ಧರ್ಮ ನೆಚ್ಚಿಕೊಂಡವರು ಮಾತ್ರ ಇಂಥ ಕ್ರಾಂತಿ ಮಾಡಲು ಸಾಧ್ಯ’ ಎಂದರು.
‘1970ರಲ್ಲಿ ಮಾತೆ ಮಹಾದೇವಿ ಲಂಡನ್ನಿಗೆ ಹೋಗಿದ್ದರು. ಅವರನ್ನು ಕಂಡ ಕ್ರಿಶ್ಚಿಯನ್ ಮಹಿಳೆಯರು ಬೆರಗಾಗಿದ್ದರು. ನಮ್ಮ ದೇಶದಲ್ಲಿ ಇದೂವರೆಗೆ ಹೆಣ್ಣುಮಕ್ಕಳಿಗೆ ‘ಪೋಪ್’ ಸ್ಥಾನವನ್ನೇ ನೀಡಿಲ್ಲ. ಶರಣ ಧರ್ಮದಲ್ಲಿ ನಿಮ್ಮನ್ನು ‘ಪೋಪ್’ ಹಂತಕ್ಕೆ ನಿಲ್ಲಿಸಿದ್ದಾರಲ್ಲ ಎಂದಿದ್ದರು’ ಎಂದೂ ಸ್ಮರಿಸಿದರು.
ಇದಕ್ಕೂ ಮುನ್ನ ಪ್ರಾಸ್ತಾವಿಕ ಭಾಷಣ ಮಾಡಿದ ಮಹಾಸಭೆಯ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ, ‘ಈವರೆಗೆ ಲಿಂಗಾಯತ ಸಮುದಾಯಕ್ಕೆ ಸೇರಿದ 10 ಜನ ಮುಖ್ಯಮಂತ್ರಿ ಆಗಿದ್ದಾರೆ. ಯಾರೊಬ್ಬರೂ ಧರ್ಮಕ್ಕೆ ಬೇಕಾದ ಕೆಲಸ ಮಾಡಲಿಲ್ಲ. ಸಿದ್ದರಾಮಯ್ಯ ಅವರು ವಿಜಯಪುರದ ವಿಶ್ವವಿದ್ಯಾಲಯಕ್ಕೆ ಅಕ್ಕ ಮಹಾದೇವಿ ಹೆಸರಿಟ್ಟರು. ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವಂತೆ ಆದೇಶ ಹೊರಡಿಸಿದ್ದೂ ಸಿದ್ದರಾಮಯ್ಯ ಅವರೇ. ಈಗ ಅವರೇ ಬಸವಣ್ಣನನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದರು. ನಮ್ಮವರಲ್ಲದವರೇ ನಮಗೆ ಬೇಕಾಗಿದ್ದಾರೆ. ಈ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.
ಆಡಿ–ಹಂದಿಗುದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಟಿ.ಆರ್. ಚಂದ್ರಶೇಖರ್ ಮತ್ತು ಮುಕ್ತಾ ಭಿ. ಕಾಗಲಿ ಅವರ ಸಂಪಾದಕತ್ವದ ‘ಮಹಿಳಾ ಜಾಗೃತಿ’ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು. ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಚಂದ್ರಶೇಖರ್ ವಿರಚಿತ ‘ಲಿಂಗಾಯತ ಧರ್ಮ ಮತ್ತು ಲಿಂಗ ಸಮಾನತೆ ತತ್ವ’ ಕೃತಿ ಲೋಕಾರ್ಪಣೆಗೊಳಿಸಿದರು. ಅತ್ತಿವೇರಿ ಬಸವಧಾಮ ಪೀಠದ ಬಸವೇಶ್ವರಿ ತಾಯಿ ಅವರು ಪ್ರಭಾ ಪಾಟೀಲ ವಿರಚಿತ ‘ವಚನ ಸನ್ನಿಧಿ’ ಕೃತಿ ಬಿಡುಗಡೆ ಮಾಡಿದರು. ಬೀದರಿನ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಅವರು ಜಯಶ್ರೀ ಸಬರದ ವಿರಚಿತ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’ ಹಾಗೂ ‘ಲಿಂಗಾಯತ ಧರ್ಮ’ ಕೃತಿ ಲೋಕಾರ್ಪಣೆ ಗೊಳಿಸಿದರು. ಶಿಕಾರಿಪುರ ಬಸವಾಶ್ರಮದ ಶರಣಾಂಬಿಕಾ ತಾಯಿ ಸಮ್ಮುಖ ವಹಿಸಿದ್ದರು.
ವಿದುಷಿ ನಯನಾ ಗಿರಿಗೌಡರ ಮತ್ತು 111 ಶರಣೆಯರು ವಚನ ಪ್ರಾರ್ಥನೆ ಹಾಡಿದರು. ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷೆ ಪ್ರೇಮಕ್ಕ ಅಂಗಡಿ ನಿರೂಪಿಸಿದರು. ಬೆಂಗಳೂರು ಜಿಲ್ಲಾ ಉಪಾಧ್ಯಕ್ಷೆ ಸುಜಾತಾ ಮೇಲೆ ಗೌಡ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.