ADVERTISEMENT

ಮಡಿವಾಳೇಶ್ವರ ಶಿವಯೋಗಿ ಮಠದ ಸ್ವಾಮೀಜಿ ಅಂತಿಮ ದರ್ಶನಕ್ಕೆ ಭಕ್ತಸಾಗರ

ನೇಗಿನಹಾಳ ಮಠದ ಆವರಣದಲ್ಲೇ ಬಸವಸಿದ್ಧಲಿಂಗ ಶ್ರೀ ಅಂತ್ಯಸಂಸ್ಕಾರಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 4:24 IST
Last Updated 6 ಸೆಪ್ಟೆಂಬರ್ 2022, 4:24 IST
ಅಂತಿಮ ದರ್ಶನ ಪಡೆದ ಬೇಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ
ಅಂತಿಮ ದರ್ಶನ ಪಡೆದ ಬೇಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ   

ಬೈಲಹೊಂಗಲ: ತಾಲ್ಲೂಕಿನ ನೇಗಿನಹಾಳದಲ್ಲಿ ನೇಣಿಗೆ ಶರಣಾದ ಗುರು ಮಡಿವಾಳೇಶ್ವರ ಶಿವಯೋಗಿ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ ಅವರ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಬಸವ ತತ್ವದ ಅಡಿಯಲ್ಲಿ ಮಠದ ಆವರಣದಲ್ಲೇ ಸಕಲ ವಿಧಿ, ವಿಧಾನಗಳಿಂದ ಪೂಜ್ಯರ ಅಂತ್ಯಕ್ರಿಯೆ ನೆರವೇರಲಿದೆ.

ಮರಣೋತ್ತರ ಪರೀಕ್ಷೆ ಬಳಿಕ ಸ್ವಾಮೀಜಿ ಅವರ ಕಳೇಬರವನ್ನು ಸೋಮವಾರ ರಾತ್ರಿ ಮಠಕ್ಕೆ ತರಲಾಯಿತು.

ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದ ವರೆಗೆ ಅಪಾರ ಸಂಖ್ಯೆಯ ಜನ ದರ್ಶನ ಪಡೆದರು. ವಿವಿಧ ಮಠಗಳ ಪೀಠಾಧೀಶರು, ಗಣ್ಯರು, ಜನಪ್ರತಿನಿಧಿಗಳು, ವಿವಿಧ ಕನ್ನಡಪರ ಹೋರಾಟದ ಸಂಘಟನೆ, ಬಸವ ಸಂಘಟನೆಗಳ ಮುಖಂಡರು ಅಂತಿಮ ದರ್ಶನಕ್ಕೆ ಸರದಿಯಲ್ಲಿ ನಿಂತರು.

ADVERTISEMENT

ಊರು ತಬ್ಬಲಿ ಮಾಡಿದ್ಯಾ ಯಪ್ಪಾ:
ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀಗಳ ಮರಣೋತ್ತರ ಪರೀಕ್ಷೆ ನಡೆಸಿ ಶರೀರ ಹೊತ್ತು ತಂದಿದ್ದ ಆಂಬುಲೆನ್ಸ್ ವಾಹನ ಮಠವನ್ನು ಪ್ರವೇಶಿಸುತ್ತಿದ್ದಂತೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿತು. ಕಣ್ಣೀರು ಕವಲೊಡೆದು ದುಃಖ ಇಮ್ಮಡಿಯಾಯಿತು.

ಮಠದ ಹಿರಿಯರು, ಯುವ ಸಮೂಹ ಅಂತಿಮ‌ ದರ್ಶನಕ್ಕೆ ಎಲ್ಲ ತಯಾರಿ ಮಾಡಿಕೊಂಡು ಸಿದ್ಧತೆ ಮಾಡಿದ್ದರು. ಕಿಕ್ಕಿರಿದ ಜನಸಮೂಹ ಕಣ್ಣೀರಾಯಿತು.

"ಅಜ್ಜಾರ ನೀವು ಜೀವ ಕೊಡುವಷ್ಟು ನೋವು ಅನುಭವಿಸುತ್ತಿದ್ದರೂ ನಮಗೆ ಅರ್ಥವಾಗಲಿಲ್ಲ. ನಿಮ್ಮನ್ನ ಕಸಗೊಂಡ ಹೋದವರ ಹಾಳಾಗಲಿ. ನಿಮ್ಮ ಬಗ್ಗೆ ಸುತ್ತ ಆರೋಪ ಮಾಡಿದ ಆ ಹೆಂಗಸೂರನ್ನ ದೇವರ ನೋಡ್ಕೊಳ್ಳಿ" ಎಂದು ಮಹಿಳೆಯರು ಶವದ ಮುಂದೆ ಗೋಗರೆದರು.

"ಊರು ತಬ್ಬಲಿ ಮಾಡಿದ್ಯಾ ಯಪ್ಪಾ..." ಎಂದು ಮತ್ತೆ ಕೆಲವರು ನೋವು ತೋಡಿಕೊಂಡರು.

ಮಾತು ಸಾಧ್ಯವಾಗದೇ ಅವರ ಶಿಷ್ಯ ಬಳಗ ಮೌನಕ್ಕೆ ಶರಣಾಯಿತು.

ಮೆರವಣಿಗೆ ಓಣಿಗೆ ತರಲು ಮನವಿ:
ಪೂಜ್ಯರ ಪ್ರಾರ್ಥಿವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿಸಲು ನಿರ್ಧರಿಸಲಾಗಿದೆ. ಇದು ಶ್ರೀಗಳ ಕೊನೆಯ ಯಾತ್ರೆ, ಹಾಗಾಗಿ, ತಮ್ಮ ಓಣಿಗೂ ಕರೆತರಬೇಕು ಎಂದು ಊರಿನ ಎಲ್ಲ ಜನ ಕೈಮುಗಿದು ಪ್ರಾರ್ಥಿಸುತ್ತಿರುವುದು ಸಾಮಾನ್ಯವಾಗಿದೆ.

ಭಕ್ತರ ಸಂಘಟನೆಗಳು ರಾತ್ರಿಯಿಂದಲೇ ಭಜನೆಯಲ್ಲಿ ತೊಡಗಿವೆ. ಬಸವೇಶ್ವರ ಮಹಾರಾಜ್ ಕಿ ಜೈ, ಬಸವಸಿದ್ಧಲಿಂಗ ಮಹಾರಾಜ್ ಕಿ ಜೈ ಘೋಷಣೆ ಮೊಳಗುತ್ತಿವೆ.

ಗದಗ ಡಂಬಳದ ಡಾ.ಸಿದ್ಧರಾಮ ಸ್ವಾಮೀಜಿ, ಬೈಲೂರಿನ ನಿಜಗುಣಾನಂದ ಸ್ವಾಮೀಜಿ, ಉಳವಿ ಬಸವಪೀಠದ ಬಸವಪ್ರಕಾಶ ಸ್ವಾಮೀಜಿ, ದಾವಣಗೆರೆ ಸ್ವಾಮೀಜಿ, ಹೊಸೂರು ಗಂಗಾಧರ ಸ್ವಾಮೀಜಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಪೂಜ್ಯರು, ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಡಿ.ಬಿ.ಇನಾಮದಾರ ಅಂತಿಮ ದರ್ಶನ ಪಡೆದುಕೊಂಡರು.

ಮುಖಂಡರಾದ ಬಾಬಾಸಾಹೇಬ ಪಾಟೀಲ, ರೋಹಿಣಿ ಪಾಟೀಲ, ಲಿಂಗಾಯತ ಬಸವ ಸೇನೆ ಅಧ್ಯಕ್ಷ ಶಂಕರ ಗುಡಸ, ವಿಕ್ರಂ ಇನಾಮದಾರ, ಅಡಿಷನಲ್ ಎಸ್ಪಿ ನಂದಗಾವಿ, ಡಿವೈಎಸ್ಪಿ ಶಿವಾನಂದ ಕಟಗಿ, ರಾಮನಗೌಡ ಹಟ್ಟಿ ಅವರು ಮಠದ ಆವರಣದಲ್ಲೇ ಬೀಡು ಬಿಟ್ಟಿದ್ದಾರೆ.

ಮಠದ ಆವರಣದಲ್ಲಿ ಅಂತ್ಯಸಂಸ್ಕಾರಕ್ಕಾಗಿ ಕುಣಿ ತೋಡಿದ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.