ADVERTISEMENT

ಮಹದಾಯಿ ಯೋಜನೆ: ಕರ್ನಾಟಕದ ವಿರುದ್ಧ ಒಂದಾಗಿ ಹೋರಾಡಲು ಸಾವಂತ್‌ –ಶಿಂದೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 15:44 IST
Last Updated 17 ಜೂನ್ 2023, 15:44 IST
ಗೋವಾ ರಾಜಧಾನಿ ಪಣಜಿಯಲ್ಲಿ ಶನಿವಾರ ನಡೆದ, ತಿಲಾರಿ ಅಣೆಕಟ್ಟೆಯ  ಅಂತರರಾಜ್ಯ ಅಂತರರಾಜ್ಯ ನಿಯಂತ್ರಣ ಮಂಡಳಿಯ ಸಭೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಮಾತನಾಡಿದರು. ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಕೂಡ ಇದ್ದಾರೆ
ಗೋವಾ ರಾಜಧಾನಿ ಪಣಜಿಯಲ್ಲಿ ಶನಿವಾರ ನಡೆದ, ತಿಲಾರಿ ಅಣೆಕಟ್ಟೆಯ ಅಂತರರಾಜ್ಯ ಅಂತರರಾಜ್ಯ ನಿಯಂತ್ರಣ ಮಂಡಳಿಯ ಸಭೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಮಾತನಾಡಿದರು. ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಕೂಡ ಇದ್ದಾರೆ   

ಬೆಳಗಾವಿ: ‘ಮಹದಾಯಿ ವಿಚಾರದಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳು ಒಂದಾಗಿ ಹೋರಾಟ ಮಾಡಲಿವೆ. ಎರಡೂ ರಾಜ್ಯಗಳು ಅಣ್ಣ– ತಮ್ಮ ಇದ್ದಂತೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ನೀಡಿದ ಹೇಳಿಕೆ ಗಡಿ ಭಾಗದ ಕನ್ನಡಿಗರನ್ನು ಕೆಣಕಿದೆ.

ಮಹಾರಾಷ್ಟ್ರದ ತಿಲಾರಿ ಅಣೆಕಟ್ಟೆ ಯೋಜನೆ ಕುರಿತು ಚರ್ಚಿಸಲು, ಪಣಜಿಯಲ್ಲಿ ಶನಿವಾರ ಕರೆದಿದ್ದ ಅಂತರರಾಜ್ಯ ನಿಯಂತ್ರಣ ಮಂಡಳಿಯ ಸಭೆಯಲ್ಲಿಯೇ ಅವರು ಈ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಜಲಸಂಪನ್ಮೂಲ ಸಚಿವ ಸುಭಾಷ್‌ ಶೀರೋಡ್ಕರ್‌ ಸೇರಿದಂತೆ ಎರಡೂ ರಾಜ್ಯಗಳ ಹಿರಿಯ ಅಧಿಕಾರಿಗಳು ಇದ್ದರು.

ADVERTISEMENT

‘ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಮಧ್ಯೆ ತಂಟೆ ಇದೆ. ಅದೇ ರೀತಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಮಧ್ಯೆ ಗಡಿ ವಿವಾದವಿದೆ. ಜಲ– ನೆಲದ ವಿಚಾರವಾಗಿ ರಾಜ್ಯದ ವಿರುದ್ಧ ಸೆಡ್ಡು ಹೊಡೆದ ಎರಡೂ ರಾಜ್ಯಗಳು ಈಗ ಒಂದಾಗಿವೆ. ಮೇಲಾಗಿ, ಮಹದಾಯಿ ಜಲ ವಿವಾದವು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಕ್ಕೂ ಸಂಬಂಧಿಸಿದೆ. ಹೀಗಾಗಿ, ಏಕನಾಥ ಶಿಂಧೆ ಅವರ ಈ ಹೇಳಿಕೆಯನ್ನು ಕರ್ನಾಟಕ ಸರ್ಕಾರ ಹಗುರವಾಗಿ ತೆಗೆದುಕೊಳ್ಳಬಾರದು’ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದ್ದಾರೆ.

‘ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಬರುತ್ತಿದ್ದಂತೆಯೇ ಮಹಾರಾಷ್ಟ್ರ ಹಾಗೂ ಗೋವಾ ಸರ್ಕಾರಗಳು ಒಂದಾಗಿದ್ದು ಗಮನಾರ್ಹ. ಎರಡೂ ರಾಜ್ಯದ ಮುಖ್ಯಮಂತ್ರಿಗಳು ಸೇರಿ ಪಿತೂರಿ ಹೂಡಿದ್ದು ಎದ್ದು ಕಾಣುತ್ತದೆ. ಈಗ ನಮ್ಮ ರಾಜ್ಯ ಸರ್ಕಾರ ಮಾತ್ರವಲ್ಲ; ವಿರೋಧ ಪಕ್ಷವಾದ ಬಿಜೆಪಿ ಕೂಡ ತನ್ನ ನಿಲುವು ಸ್ಪಷ್ಟ ಮಾಡಬೇಕು. ಮೇಲಾಗಿ, ಮಹದಾಯಿ ‍ಪರಿಷ್ಕೃತ ಡಿಪಿಆರ್‌ಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರದ ಮುಂದಿನ ಹೆಜ್ಜೆ ಏನು ಎಂಬುದೂ ಇಲ್ಲಿ ಕುತೂಹಲಕಾರಿ’ ಎಂದೂ ಅವರು ಹೇಳಿದ್ದಾರೆ.

‘ರಾಜ್ಯದ ನೆಲ– ಜಲದ ವಿಚಾರದಲ್ಲಿ ಹಿಂದೆ ಕೂಡ ಎಲ್ಲ ಪಕ್ಷಗಳೂ ಒಗ್ಗಟ್ಟು ಪ್ರದರ್ಶಿಸಿದ್ದವು. ನೆರೆರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಸ್ಥಳೀಯ ಬಿಜೆಪಿ ನಾಯಕರು ಈಗ ರಾಜ್ಯದ ಪರವಾಗಿ ಒಗ್ಗಟ್ಟು ಪ್ರದರ್ಶಿಸಬೇಕು. ಏಕನಾಥ ಶಿಂಧೆ ಅವರ ಎಲ್ಲ ಪಿತೂರಿಗಳಿಗೂ ಜವಾಬ್ದಾರಿಯುತ ಪ್ರತಿಕ್ರಿಯೆ ನೀಡಬೇಕು’ ಎಂದೂ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.