ADVERTISEMENT

ಒಂದೇ ಕಾರ್ಯಕ್ರಮ: ಜಾರಕಿಹೊಳಿ ಸಹೋದರರಿಂದ ಪ್ರತ್ಯೇಕ ಉದ್ಘಾಟನೆ!

ಪ್ರತ್ಯೇಕವಾಗಿ ಉದ್ಘಾಟಿಸಿದ ಜಾರಕಿಹೊಳಿ ಸಹೋದರರು

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 12:48 IST
Last Updated 27 ಜನವರಿ 2022, 12:48 IST
ಗೋಕಾಕದಲ್ಲಿ ನಿರ್ಮಿಸಿರುವ ಮಹಾಲಕ್ಷ್ಮಿ ಸಭಾಭವನವನ್ನು ಶಾಸಕ ರಮೇಶ ಜಾರಕಿಹೊಳಿ ಗುರುವಾರ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಮತ್ತು ಜಾತ್ರಾ ಸಮಿತಿ ಮುಖಂಡರು ಇದ್ದಾರೆ
ಗೋಕಾಕದಲ್ಲಿ ನಿರ್ಮಿಸಿರುವ ಮಹಾಲಕ್ಷ್ಮಿ ಸಭಾಭವನವನ್ನು ಶಾಸಕ ರಮೇಶ ಜಾರಕಿಹೊಳಿ ಗುರುವಾರ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಮತ್ತು ಜಾತ್ರಾ ಸಮಿತಿ ಮುಖಂಡರು ಇದ್ದಾರೆ   

ಗೋಕಾಕ: ‘ಜನಸಾಮಾನ್ಯರ ಅನುಕೂಲಕ್ಕಾಗಿ ನಗರದಲ್ಲಿ ಅತ್ಯಾಧುನಿಕವಾಗಿ ಮಹಾಲಕ್ಷ್ಮಿ ಸಭಾಭವನ ನಿರ್ಮಿಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ₹ 4.50 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ ಮಹಾಲಕ್ಷ್ಮಿ ಸಭಾಭವನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಗರದ ಜನತೆಯ ಬಹು ದಿನಗಳ ಬೇಡಿಕೆಯಂತೆ ಸಭಾಭವನ ಲೋಕಾರ್ಪಣೆ ಮಾಡಲಾಗಿದೆ. ಮದುವೆ ಸೇರಿದಂತೆ ಇತರ ಎಲ್ಲ ಕಾರ್ಯಕ್ರಮಗಳಿಗೆ ಬಳಕೆಯಾಗಲಿದೆ. ಅತ್ಯಾಧುನಿಕವಾಗಿ ನಿರ್ಮಿಸಿದ್ದು ಸಕಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಇದು ಇಲ್ಲಿನವರ ಕನಸು ಕೂಡ ಆಗಿತ್ತು. ಸಾರ್ವಜನಿಕರ ಸಹಕಾರದೊಂದಿಗೆ ನಿರ್ಮಾಣವಾಗಿದೆ. ನನ್ನ ಸಹೋದರರು ಕೂಡ ಆರ್ಥಿಕ ನೆರವು ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಜ್ಯೋತಿ ಪ್ರಜ್ವಲಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ವಸತಿ ಕೊಠಡಿಗಳನ್ನು ಉದ್ಘಾಟಿಸಿದರು. ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭೋಜನಾಲಯವನ್ನು ಜಂಟಿಯಾಗಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಬಾಲಚಂದ್ರ, ‘ಪ್ರತಿ 5 ವರ್ಷಕ್ಕೊಮ್ಮೆ ಅಂದರೆ 2020ರಲ್ಲಿ ನಡೆಯಬೇಕಾಗಿದ್ದ ಗ್ರಾಮದೇವತೆ ಜಾತ್ರೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಈ ವರ್ಷವೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಯುಗಾದಿಗೆ ಜಾತ್ರಾ ಸಮಿತಿಯವರು ಸಭೆ ಸೇರಿ ಜಾತ್ರೆಯ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಭವನ ಅಚ್ಚುಕಟ್ಟಾಗಿ, ಸುಂದರವಾಗಿ ನಿರ್ಮಾಣವಾಗಿದೆ. ಇದಕ್ಕಾಗಿ ಶ್ರಮಿಸಿದ ಜಾತ್ರಾ ಸಮಿತಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ಮಹಾಲಕ್ಷ್ಮಿ ದೇವಸ್ಥಾನ ಜಾತ್ರಾ ಸಮಿತಿ ಉಪಾಧ್ಯಕ್ಷ ಅಶೋಕ ಬಿ. ಪಾಟೀಲ, ಕಾರ್ಯದರ್ಶಿ ಪ್ರಭಾಕರ ಚವ್ಹಾಣ, ಸದಸ್ಯರಾದ ಶಿದ್ಲಿಂಗಪ್ಪ ದಳವಾಯಿ, ಬಸವಣ್ಣೆಪ್ಪ ಬನ್ನಿಶೆಟ್ಟಿ, ನಾಗರಾಜ ದೇಶಪಾಂಡೆ, ಅಶೋಕ ತುಕ್ಕಾರ, ಅಶೋಕ ಹೆಗ್ಗಣ್ಣವರ, ರಾಯಪ್ಪ ಭಂಡಾರಿ, ರಾಜು ಪವಾರ, ಅರ್ಜುನ ಪವಾರ, ಸುಬ್ಬಣ್ಣ ಸಂಕಪಾಳ, ಮಹ್ಮದಸುಲ್ತಾನ ಕೋತವಾಲ, ಚಂದ್ರು ಜೋಗೋಜಿ, ಅಡಿವೆಪ್ಪ ಕಿತ್ತೂರ, ಆನಂದ ಉಳ್ಳಾಗಡ್ಡಿ, ಬಾಗಪ್ಪ ಉಳ್ಳಾಗಡ್ಡಿ, ಬೀರಪ್ಪ ಉಳ್ಳಾಗಡ್ಡಿ, ಸಿದ್ದಪ್ಪ ಮುತ್ತೆಪ್ಪಗೋಳ, ಪರಸಪ್ಪ ಮಲ್ಲಾಡದವರ, ನಾಗಪ್ಪ ಉಳ್ಳಾಗಡ್ಡಿ, ಮಾರುತಿ ಬಾಗೋಜಿ, ರವಿ ಮಾಲದಿನ್ನಿ, ಲಕ್ಕಪ್ಪ ಪೂಜೇರಿ, ಶಿವಾನಂದ ಬನ್ನಿಶೆಟ್ಟಿ, ಮಲ್ಲು ವಾಲಿಕಾರ, ಲಕ್ಕಪ್ಪ ಕೊಡತಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.