ಗೋಕಾಕ (ಬೆಳಗಾವಿ ಜಿಲ್ಲೆ): ‘ಇಲ್ಲಿನ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಮೋಸಹೋದವರಿಗೆ ಹಣ ಮರಳಿ ಕೊಡಿಸುವ ಯತ್ನ ಮಾಡಲಾಗುವುದು. ಆರ್.ಬಿ.ಐ. ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಭರವಸೆ ನೀಡಿದರು.
₹74.87 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧೀಸಿದಂತೆ ಇಲ್ಲಿನ ಮಹಾಲಕ್ಷ್ಮಿ ಸಭಾಭವನದಲ್ಲಿ ನಡೆದ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಠೇವಣಿದಾರರ ಸಭೆಯಲ್ಲಿ ಮಾತನಾಡಿದ ಅವರು, ‘ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೂಡಿ ಸಭೆ ಮಾಡಿ ಬಡವರಿಗೆ ನ್ಯಾಯ ದೊರಕಿಸುವ ಮೊದಲ ಯತ್ನ ಇದು. ಜನ ಧೈರ್ಯಗೆಡಬಾರದು’ ಎಂದರು.
‘ಬಾಳಾಸಾಹೇಬ ಮಾಂಗಳೇಕರ ಅವರು ಕಷ್ಟಪಟ್ಟು ಬ್ಯಾಂಕ್ ಕಟ್ಟಿ, ಬೆಳೆಸಿದ್ದಾರೆ. ಆಡಳಿತ ಮಂಡಳಿ ಈ ಹಗರಣದಲ್ಲಿ ಭಾಗಿಯಾಗಿಲ್ಲ. ಪೊಲೀಸರು ಹಂತ ಹಂತವಾಗಿ ತನಿಖೆ ನಡೆಯಿಸುತ್ತಿದ್ದಾರೆ. ಮುಂಬರುವ 3ರಿಂದ 6 ತಿಂಗಳಲ್ಲಿ ಇದನ್ನು ಸರಿಪಡಿಸುತ್ತೇನೆ. ಹಗರಣ ಮಾಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ಹರಾಜು ಮಾಡಿ ನಿಮ್ಮ ಹಣವನ್ನು ವಾಪಸ್ ಮಾಡುತ್ತೇವೆ. ನನ್ನ ಹಿರಿಯ ಮಗನ ಹಣ ಸಹ ಇದೇ ಬ್ಯಾಂಕಿನಲ್ಲಿದೆ. ಎಲ್ಲರೂ ತಾಳ್ಮೆಯಿಂದ ವರ್ತಿಸಿ’ ಎಂದು ಮನವಿ ಮಾಡಿದರು.
ತಹಶೀಲ್ದಾರ್ ಡಾ.ಮೋಹನ ಭಸ್ಮೆ, ಸಿಪಿಐ ಗೋಪಾಲ ರಾಠೋಡ, ಇನ್‌ಸ್ಪೆಕ್ಟರ್ ಕೆ.ವಾಲಿಕಾರ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.