ADVERTISEMENT

ಬೆಳಗಾವಿ: ಕಾಂಗ್ರೆಸ್‌– ಬಿಜೆಪಿಗೆ ‘ಎಂಇಎಸ್‌’ ಬಿಸಿತುಪ್ಪ

ಬೆಳಗಾವಿ, ಉತ್ತರಕನ್ನಡ ಕ್ಷೇತ್ರಗಳಲ್ಲಿ ಸ್ಪರ್ಧೆ, ಭಾವನಾತ್ಮಕವಾಗಿ ಒಂದಾದ ಮರಾಠಿಗರು

ಸಂತೋಷ ಈ.ಚಿನಗುಡಿ
Published 26 ಏಪ್ರಿಲ್ 2024, 6:58 IST
Last Updated 26 ಏಪ್ರಿಲ್ 2024, 6:58 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಬೆಳಗಾವಿ: ಬೆಳಗಾವಿ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರಿಂದ ಮರಾಠಿ ಮತಗಳು ಒಡೆಯುವುದು ನಿಚ್ಚಳವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಇದು ತಲೆನೋವು ತಂದಿದೆ.

ಬೆಳಗಾವಿಯಲ್ಲಿ ಎಂಇಎಸ್‌ ಅಭ್ಯರ್ಥಿ ಮಹಾದೇವ ಪಾಟೀಲ, ಉತ್ತರ ಕನ್ನಡದಲ್ಲಿ ನಿರಂಜನ್ ಸರದೇಸಾಯಿ ರಾಷ್ಟ್ರೀಯ ಪಕ್ಷಗಳಿಗೆ ಅಡ್ಡಗಾಲು ಹಾಕಿದ್ದಾರೆ. ಖಾನಾಪುರದವರೇ ಆದ ಕೃಷ್ಣಾಜಿ ಪಾಟೀಲ ಪಕ್ಷೇತರರಾಗಿ ನಿಂತಿದ್ದು, ಇವರೂ ಮರಾಠಿಗರು. 

2021ರಲ್ಲಿ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಂಇಎಸ್‌ನಿಂದ ಸ್ಪರ್ಧಿಸಿದ್ದ ಶುಭಂ ಶೆಳಕೆ 1.17 ಲಕ್ಷಕ್ಕೂ ಹೆಚ್ಚು ಮತ ಪಡೆದರು. ಒಟ್ಟು ಮತದಾನ ಶೇ 56.15ರಷ್ಟಾಗಿತ್ತು. ಶೇ 11.46ರಷ್ಟು ಮತಗಳನ್ನು ಎಂಇಎಸ್‌ ಪಡೆದುಕೊಂಡಿತ್ತು. ಮಂಗಲಾ ಅಂಗಡಿ 4,40,327 ಹಾಗೂ ಸತೀಶ ಜಾರಕಿಹೊಳಿ 4,35,087 ಮತ ಪಡೆದಿದ್ದರು. ಗೆಲುವಿನ ಅಂತರ ಕೇವಲ 5,240 ಮತಗಳಿಗೆ ಬಂದು ನಿಂತಿತ್ತು.

ADVERTISEMENT

‘ಎಂಇಎಸ್‌ ಅಭ್ಯರ್ಥಿ ಈ ಬಾರಿ ಕೂಡ ಅಷ್ಟೇ ಪ್ರಮಾಣದ ಮತ ಪಡೆದರೆ ಎರಡೂ ಪಕ್ಷಗಳಿಗೆ ‘ಬಿಸಿತುಪ್ಪ’ ಆಗಲಿದ್ದಾರೆ’ ಎಂಬುದು ರಾಜಕೀಯ ಪರಿಣತರ ಲೆಕ್ಕಾಚಾರ.

ಕಟ್ಟಾ ಹಿಂದುತ್ವ ವಾದಿಗಳಾದ ಮರಾಠರು ಬಿಜೆಪಿಯ ಇನ್ನೊಂದು ಮುಖ ಎಂಬುದು ಜನಜನಿತ. ಬೆಳಗಾವಿ ಲೋಕಸಭೆ ವ್ಯಾಪ್ತಿಯ ಎಂಟು ವಿಧಾನಸಭೆಗಳ ಪೈಕಿ ನಾಲ್ಕರಲ್ಲಿ ಮರಾಠರ ಮತಗಳು ಎರಡನೇ ಸ್ಥಾನದಲ್ಲಿವೆ. ಇದುವರೆಗಿನ ಚುನಾವಣೆಗಳಲ್ಲಿ ಬಹುಪಾಲು ಮತ ಬಿಜೆಪಿ ಪಾಲಾಗಿದ್ದೂ ಇದೆ. ಆದರೆ, ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಪದೇಪದೇ ಭುಗಿಲೆದ್ದ ಗಡಿ ವಿವಾದ, ಮಹಾರಾಷ್ಟ್ರ ಸರ್ಕಾರದ ಜನಪರ ಯೋಜನೆಗಳಿಂದ ಮರಾಠರಲ್ಲಿ ಒಗ್ಗಟ್ಟು ಮೂಡಿದೆ. ಮತಗಳು ಎಂಇಎಸ್‌ ಬುಟ್ಟಿ ಸೇರಿದರೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ಗೆ ಕೊರತೆ ಕಾಡಲಿದೆ ಎನ್ನುವ ಮಾತು ಕೇಳಿಬಂದಿದೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕೂಡ ಮರಾಠಾ ಜಾತಿಯ ಹಾಗೂ ಮರಾಠಿ ಭಾಷಿಗ ಮತದಾರರ ಮೇಲೆ ಹಿಡಿತ ಹೊಂದಿದ್ದಾರೆ. ಅವರ ಪುತ್ರ ಮೃಣಾಲ್‌ ಈಗ ಕಾಂಗ್ರೆಸ್‌ ಅಭ್ಯರ್ಥಿ. ಮತಗಳು ಹಂಚಿಹೋದರೆ ಕಾಂಗ್ರೆಸ್‌ ಅಭ್ಯರ್ಥಿ ಮುನ್ನಡೆ ಪಡೆಯುವುದು ಸವಾಲು.

ಮೊದಲಬಾರಿ ಎಂಇಎಸ್‌ ಹೆಜ್ಜೆ:

ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಅಂಜಲಿ ನಿಂಬಾಳಕರ ಮಹಾರಾಷ್ಟ್ರ ಮೂಲದವರು. ಭಾಷೆಯಿಂದಲೂ, ಜಾತಿಯಿಂದಲೂ ಮರಾಠರು. ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರವು ಉತ್ತರಕನ್ನಡ ಲೋಕಸಭೆಗೆ ಸೇರಿದೆ. ಹೀಗಾಗಿ, ಮೊದಲ ಬಾರಿಗೆ ಸ್ಪರ್ಧಿಸಿರುವ ಎಂಇಎಸ್‌ ಅಂಜಲಿ ಅವರಿಗೂ ತಲೆನೋವಾಗದೇ ಇರಲಾರದು.

ಆರು ಬಾರಿ ಸಂಸದರಾದ ಅನಂತಕುಮಾರ ಹೆಗಡೆ ಅವರಿಗೆ ಖಾನಾಪುರದಲ್ಲೇ ಹೆಚ್ಚು ಲೀಡ್‌ ಸಿಕ್ಕಿತ್ತು. ಪ್ರತಿ ಬಾರಿ ಶೇ 70ರಷ್ಟು ಮತಗಳನ್ನು ಅವರು ಖಾನಾಪುರ– ಕಿತ್ತೂರು ಕ್ಷೇತ್ರಗಳಲ್ಲಿ ಪಡೆದಿದ್ದಾರೆ. ಇಷ್ಟು ವರ್ಷ ಬಿಜೆಪಿಗೆ ಹೋಗುತ್ತಿದ್ದ ಮರಾಠರ ಮತಗಳು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಕೈತಪ್ಪುವ ಸಾಧ್ಯತೆ ಇದೆ.

‘ನಾವು ಗೆಲ್ಲಬೇಕು ಎಂದು ಸ್ಪರ್ಧಿಸುತ್ತಿಲ್ಲ. ಇದು ನಮ್ಮ ‘ಅಸ್ತಿತ್ವ’‌ದ ಪ್ರಶ್ನೆ’ ಎಂಬ ಎಂಇಎಸ್‌ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ ಅವರ ಹೇಳಿಕೆ; ಮರಾಠಿಗರನ್ನು ಭಾವನಾತ್ಮಕವಾಗಿ ಸೆಳೆಯುತ್ತಿದೆ.

ಎಲ್ಲಿ ಎಷ್ಟು ಮತದಾರರು?
ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮರಾಠಿ ಮತದಾರರು ಇದ್ದಾರೆ. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತರ ನಂತರ ಮರಾಠಾ ಮತದಾರರೇ ಹೆಚ್ಚು. ಅಂದಾಜು 51 ಸಾವಿರ ಮತದಾರರು ಇಲ್ಲಿದ್ದಾರೆ. ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 82 ಸಾವಿರ ಮತದಾರರು ಕಳೆದಬಾರಿ ಪಟ್ಟಿಯಲ್ಲಿದ್ದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ 90 ಸಾವಿರಕ್ಕೂ ಅಧಿಕ ಮತಗಳಿವೆ. ಜೋಯಿಡಾ ಹಳಿಯಾಳ ದಾಂಡೇಲಿ ಭಾಗದಲ್ಲೂ ಗಮನಾರ್ಹ ಸಂಖ್ಯೆ ಹೊಂದಿದ್ದಾರೆ. ಆದರೆ ಅಲ್ಲಿ ಇದೇ ಮೊದಲಬಾರಿಗೆ ಎಂಇಎಸ್‌ ಹೆಜ್ಜೆ ಇಟ್ಟಿದೆ. ಅಲ್ಲಿನ ಮತದಾರರನ್ನು ಎಷ್ಟರಮಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳಲಿದೆ ಎಂಬುದೂ ಮುಖ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.