ಬೆಳಗಾವಿ: ದಾಖಲೆಗಳಿಲ್ಲದೇ ಸರಕು ಸಾಗಣೆ ವಾಹನದಲ್ಲಿ ಸಾಗಿಸುತ್ತಿದ್ದ ₹2.73 ಕೋಟಿ ಹಣವನ್ನು ಬೆಳಗಾವಿ ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳನ್ನೂ ಬಂಧಿಸಿದ್ದಾರೆ.
ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ವಾಹನದಲ್ಲಿ ಈ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ನಗರ ಪೊಲೀಸ್ ಆಯುಕ್ತಾಲಯಕ್ಕೆ ದೊರೆತಿತ್ತು. ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾರ್ಗದರ್ಶನದಲ್ಲಿ, ಸಿಸಿಬಿ ಇನ್‌ಸ್ಪೆಕ್ಟರ್ ನಂದೀಶ್ವರ ಕುಂಬಾರ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾದು ನಿಂತರು.
ಗೂಡ್ಸ್ ವಾಹನದ ಕ್ಯಾಬಿನ್ ಭಾಗವನ್ನು ತುಸು ಮಾರ್ಪಾಡು ಮಾಡಿ, ಅದರಡಿ ಹಣ ಬಚ್ಚಿ ಇಡಲಾಗಿತ್ತು. ವಾಹನದ ಒಳಭಾಗ ಪರಿವರ್ತನೆ ಮಾಡಿದ್ದರಿಂದ ಅನುಮಾನ ಬಂದು ತಪಾಸಣೆ ಮಾಡಿದ ಪೊಲೀಸರಿಗೆ ₹500 ಮುಖಬೆಲೆಯ ಕಂತೆಕಂತೆ ಹಣ ಸಿಕ್ಕಿತು.
ವಾಹನವನ್ನು ಮಹಾರಾಷ್ಟ್ರದ ಸಾಂಗಲಿ ನಗರದಿಂದ ಹುಬ್ಬಳ್ಳಿ ಕಡೆಗೆ ಸಾಗಿಸಲಾಗುತ್ತಿತ್ತು ಎಂದು ಬಂಧಿತರು ಬಾಯಿ ಬಿಟ್ಟಿದ್ದಾರೆ. ವಾಹನ ಚಾಲಕ ಸಾಂಗಲಿಯ ಸಚಿನ್ ಮೇಬಕುದಳಿ, ಕ್ಲೀನರ್ ಮಾರುತಿ ಮಾರಗುಡೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಈಗ ವಿಧಾನಸಭಾ ಚುನಾವಣೆ ನಡೆದ ಹಿನ್ನೆಲೆಯಲ್ಲಿ, ಅಕ್ರಮ ಹಣ ಸಾಗಣೆ ತಡೆಗೆ ಬೆಳಗಾವಿ ಜಿಲ್ಲೆಯ ಗಡಿಯುದ್ದಕ್ಕೂ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.