ADVERTISEMENT

ಮಹಾರಾಷ್ಟ್ರದಲ್ಲಿ ಗಟ್ಟಿಯಾದ ಕನ್ನಡ ಅಸ್ಮಿತೆ

ಮಹಾರಾಷ್ಟ್ರ ಚುನಾವಣೆ: ನೇಪಥ್ಯಕ್ಕೆ ಸರಿದ ಗಡಿ ವಿವಾದ

ಸಂತೋಷ ಈ.ಚಿನಗುಡಿ
Published 17 ನವೆಂಬರ್ 2024, 20:00 IST
Last Updated 17 ನವೆಂಬರ್ 2024, 20:00 IST
<div class="paragraphs"><p>ಕನ್ನಡದಲ್ಲೇ ‍ಪ್ರಚಾರ ನಡೆಸಿದ ಮಹಾರಾಷ್ಟ್ರದ ವಿಕ್ರಮಸಿಂಹ ಬಾಳಾಸೊ ಸಾವಂತ ಅವರ ಕರಪತ್ರ</p></div>

ಕನ್ನಡದಲ್ಲೇ ‍ಪ್ರಚಾರ ನಡೆಸಿದ ಮಹಾರಾಷ್ಟ್ರದ ವಿಕ್ರಮಸಿಂಹ ಬಾಳಾಸೊ ಸಾವಂತ ಅವರ ಕರಪತ್ರ

   

ಬೆಳಗಾವಿ: ಕರ್ನಾಟಕ– ಮಹಾರಾಷ್ಟ್ರ ಗಡಿ ವಿಷಯವು ಈ ಸಲದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸದ್ದೇ ಮಾಡಲಿಲ್ಲ. ಗಡಿ ವಿವಾದದ ಬಗ್ಗೆ ಯಾವ ಪಕ್ಷವೂ ಪ್ರಸ್ತಾಪಿಸಿಲ್ಲ. 

ಶಿವಸೇನಾ ಸೇರಿ ಕಾಂಗ್ರೆಸ್‌, ಬಿಜೆಪಿ, ಎನ್‌ಸಿಪಿ ಹಾಗೂ ಮಹಾ ವಿಕಾಸ ಅಘಾಡಿಯಲ್ಲಿರುವ ಯಾವುದೇ ಪಕ್ಷ ಈ ಬಾರಿ ಗಡಿ ವಿವಾದವನ್ನು ಪ್ರಣಾಳಿಕೆಯಲ್ಲಿ ಸೇರಿಸಿಲ್ಲ.

ADVERTISEMENT

‘ಗಡಿ ವಿವಾದವನ್ನೇ ಪ್ರಣಾಳಿಕೆಯಲ್ಲಿ ಮುಖ್ಯ ವಿಷಯ ಮಾಡಬೇಕು’ ಎಂದು ಬೆಳಗಾವಿಯ ಎಂಇಎಸ್‌ ಮುಖಂಡರು ಕೋರಿದ್ದರು. ಶರದ್‌ ಪವಾರ್‌, ಉದ್ಧವ್‌ ಠಾಕ್ರೆ, ಏಕನಾಥ ಶಿಂದೆ ಸೇರಿದಂತೆ ಎಲ್ಲ ನಾಯಕರ ಮನೆ ಮುಂದೆ ವಾರಗಟ್ಟಲೇ ಠಿಕಾಣೆ ಹೂಡಿ, ಬಾಗಿಲು ಕಾದಿದ್ದರು. ಆದರೆ, ಅವರಿಗೆ ಸ್ಪಂದನೆ ಸಿಗಲಿಲ್ಲ.

ಕನ್ನಡ ಅನುರಣನ:

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ 35 ಕ್ಷೇತ್ರಗಳಲ್ಲಿ ಕನ್ನಡಿಗರ ಮತಗಳು ನಿರ್ಣಾಯಕ. ಅದರಲ್ಲೂ ಗಡಿಗೆ ಹೊಂದಿಕೊಂಡ 15 ಕ್ಷೇತ್ರಗಳಲ್ಲಿ ಶೇ 60ಕ್ಕೂ ಹೆಚ್ಚು ಕನ್ನಡಿಗ ಮತದಾರರು ಇದ್ದಾರೆ.

ಎಲ್ಲ 35 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಕನ್ನಡದಲ್ಲೇ ಭಾಷಣ ಮಾಡುತ್ತಿದ್ದಾರೆ. ಬ್ಯಾನರ್‌, ಪೋಸ್ಟರ್‌, ಕರಪತ್ರಗಳನ್ನು ಕನ್ನಡದಲ್ಲೇ ಹಂಚುತ್ತಿದ್ದಾರೆ. ಮತಯಂತ್ರದ ಮೇಲೂ ಮರಾಠಿ ಜೊತೆ ಕನ್ನಡ ಬಳಕೆಗೂ ಆದ್ಯತೆ ಸಿಕ್ಕಿದೆ.

ಜತ್ತ, ಮಂಗಳವೇಡೆ, ಅಕ್ಕಲಕೋಟ, ಲಾಥೂರ್, ಸೊಲ್ಲಾಪುರ, ದಕ್ಷಿಣ ಸೊಲ್ಲಾಪುರ, ಕೊಲ್ಹಾಪುರ, ಸಾಂಗ್ಲಿ, ಮೀರಜ್‌, ಮುಂತಾದ ಕ್ಷೇತ್ರಗಳಲ್ಲಿ ಕನ್ನಡದ್ದೇ ಅಬ್ಬರ ಕಾಣಿಸುತ್ತಿದೆ. ಮೇಲಾಗಿ, ಮುಂಬೈ ಪರಿಸರದಲ್ಲಿ ಬರುವ ರಾಯಗಡ, ಠಾಣೆ ಹಾಗೂ ಪಾಲ್ಘರ್‌ ಮೂರೂ ಜಿಲ್ಲೆಗಳಲ್ಲಿ 20 ಲಕ್ಷಕ್ಕೂ ಅಧಿಕ ಕನ್ನಡಿಗರು ಇದ್ದಾರೆ. ಇದರಲ್ಲಿ ಅಂದಾಜು 8 ಲಕ್ಷಕ್ಕೂ ಹೆಚ್ಚು ಮತದಾರರಾಗಿದ್ದಾರೆ. ಬಹುಪಾಲು ಶೆಟ್ಟಿ ಸಮುದಾಯವೇ ದೊಡ್ಡ ಸಂಖ್ಯೆಯಲ್ಲಿದೆ. ಅಲ್ಲಿಯೂ ಈಗ ಕನ್ನಡ ಕಂಪು ಸೂಸುತ್ತಿದೆ.

‘1980ರಿಂದ ಎಲ್ಲ ಚುನಾವಣೆಗಳಲ್ಲಿ ಗಡಿ ವಿವಾದವೇ ಪ್ರಮುಖ ಅಸ್ತ್ರವಾಗಿತ್ತು. ಕನ್ನಡಿಗರು ಮತದಾನ ಮಾಡುವುದಕ್ಕೂ ಹಿಂಸೆ ಆಗುತ್ತಿತ್ತು. ಬೆಳಗಾವಿಯಲ್ಲಿ ಎಂಇಎಸ್‌ ಗಲಾಟೆ ಶುರು ಮಾಡಿದರೆ ಇಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿತ್ತು. ಈಗ ಚಿತ್ರಣ ತಿಳಿಯಾಗಿದೆ. ಕನ್ನಡಿಗರ ಹೊರತಾಗಿ ಸರ್ಕಾರ ರಚನೆ ಕಷ್ಟ ಎಂಬುದು ಇಲ್ಲಿನ ಎಲ್ಲ ನಾಯಕರಿಗೂ ಗೊತ್ತಾಗಿದೆ’ ಎಂದು ಮಹಾರಾಷ್ಟ್ರದ ಸಂಗನಬಸವ ಪೊಲೀಸ್‌ ಪಾಟೀಲ ತಿಳಿಸಿದರು.

‘ಕನ್ನಡಿಗರಿಗೆ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕು, ಗಡಿ ಭಾಗಕ್ಕೆ ಸಮರ್ಪಕ ನೀರು ಪೂರೈಸಬೇಕು ಎಂಬುದು ಸೇರಿ ಕನ್ನಡಿಗರ ಬೇಡಿಕೆಗಳಿಗೂ ಈಗ ಕಸುವು ಬಂದಿದೆ’ ಎಂದು ಅವರು ಹೇಳಿದರು.

‘ಒಡೆದಾಳುವ, ಉಂಡ ಮನೆಗೆ ಎರಡು ಬಗೆಯುವ ಮಹಾರಾಷ್ಟ್ರ ಏಕೀಕರಣ ಸಮಿತಿ ಈಗ ಬೋರಲು ಬಿದ್ದಿದೆ. ಮಹಾರಾಷ್ಟ್ರದಲ್ಲೂ ಸಮಷ್ಠಿ ಪ್ರಜ್ಞೆ ಬೆಳೆಯುತ್ತಿರುವುದು ಆಶಾದಾಯಕ ಸಂಗತಿ’ ಎಂದು ಹೋರಾಟಗಾರ ಅಶೋಕ ಚಂದರಗಿ ತಿಳಿಸಿದರು.

ಇದೆಲ್ಲದರ ಮಧ್ಯೆ ‘ಕನ್ನಡ ಮಾತನಾಡುವವರಿಗೆ, ಕನ್ನಡಿಗರಿಗೆ ಗೌರವ ಕೊಡುವವರಿಗೆ, ಬೇಡಿಕೆ ಈಡೇರಿಸುವವರಿಗೆ ಮಾತ್ರ ನಮ್ಮ ಮತ ನೀಡಬೇಕು. ಇದರಿಂದ ‘ಮಹಾ’ ವಿಧಾನಸಭೆಯಲ್ಲಿ ಕನ್ನಡ ಪ್ರತಿಧ್ವನಿ ಕೇಳಲಿದೆ’ ಎಂಬ ಸಾಮಾಜಿಕ ಜಾಲತಾಣ ಆಂದೋಲನವನ್ನು ಜತ್ತ ಕನ್ನಡಿಗರ ವೇದಿಕೆ ಜೋರಾಗಿಯೇ ನಡೆಸಿದೆ.

ಕನ್ನಡದಲ್ಲೇ ‍ಪ್ರಚಾರ ನಡೆಸಿದ ಮಹಾರಾಷ್ಟ್ರದ ವಿಕ್ರಮಸಿಂಹ ಬಾಳಾಸೊ ಸಾವಂತ ಅವರ ಕರಪತ್ರ
ಮಹಾರಾಷ್ಟ್ರ ವಿಧಾನಸಭೆಯ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡದಲ್ಲೇ ಪ್ರಕಟಿಸಿದ ಕರಪತ್ರಗಳನ್ನು ಈಚೆಗೆ ಬಿಡುಗಡೆ ಮಾಡಿದರು
ಮಲ್ಲೇಶಪ್ಪ ತೇಲಿ
ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರದ್ದೇ ಸದ್ದು ಮರಾಠಿ ನಾಯಕರ ಬಾಯಲ್ಲಿ ಕನ್ನಡಿ.ಗರ ಔದಾರ್ಯ ಸ್ತುತಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿ ಹಲವರ ಪ್ರಚಾರ
ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದಕ್ಕೆ ಕಾಲವೇ ಉತ್ತರ ಕಂಡುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಗಡಿ ತಂಟೆ ನೇಪಥ್ಯಕ್ಕೆ ಸರಿದಿದ್ದು ಕನ್ನಡ ಅಸ್ಮಿತೆ ಗಟ್ಟಿಕೊಳ್ಳುತ್ತ ಸಾಗಿದೆ
ಅಶೋಕ ಚಂದರಗಿ ಸದಸ್ಯ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
ಇದೇ ಮೊದಲ ಬಾರಿಗೆ ಪ್ರಣಾಳಿಕೆಯಿಂದ ಇವಿಎಂ ಯಂತ್ರದವರೆಗೆ ಎಲ್ಲ ಕಡೆಯೂ ಮರಾಠಿ ಜೊತೆಗೆ ಕನ್ನಡ ಬಳಸಲಾಗಿದೆ. ಮತದಾನದಲ್ಲಿ ಪಾಲ್ಗೊಳ್ಳಲು ಹೊಸ ಹುಮ್ಮಸ್ಸು ಬಂದಿದೆ
ಮಲ್ಲೇಶಪ್ಪ ತೇಲಿ ಕನ್ನಡ ಹೋರಾಟಗಾರ ಜತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.