ADVERTISEMENT

ಬೆಳಗಾವಿ: ಸಕ್ಕರೆ ಕಾರ್ಖಾನೆ ಅಧ್ಯಕ್ಷ ರೈತರನ್ನು ನಿಂದಿಸಿರುವುದು ಖಂಡನೀಯ -ಮೋದಗಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 6:58 IST
Last Updated 13 ಆಗಸ್ಟ್ 2021, 6:58 IST
ಸಿದಗೌಡ ಮೋದಗಿ
ಸಿದಗೌಡ ಮೋದಗಿ   

ಬೆಳಗಾವಿ: ‘ಎಂ.ಕೆ. ಹುಬ್ಬಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಾಸೀರ ಬಾಗವಾನ ಅವರು ರೈತರೊಬ್ಬರೊಂದಿಗೆ ಅವಾಚ್ಯ ಶಬ್ದ ಬಳಸಿರುವುದು ಮತ್ತು ನಿಂದಿಸಿರುವುದು ಖಂಡನೀಯ’ ಎಂದು ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ ಹೇಳಿದ್ದಾರೆ.

‘ಕಾರ್ಖಾನೆಗೆ ಕಬ್ಬು ಪೂರೈಸಿದ ಬೆಳಗಾವಿ ತಾಲ್ಲೂಕಿನ ಗಜಪತಿ ಗ್ರಾಮದ ಹರೀಶ ಲಂಗೋಟಿ ಅವರು ಬಾಕಿ ಹಣ ಪಾವತಿಸುವಂತೆ ಕೇಳಿದಾಗ, ಸರಿಯಾಗಿ ಪ್ರತಿಕ್ರಿಯೆ ನೀಡದೆ ಅಪಮಾನ ಮಾಡಿದ್ದಾರೆ. ಇದರೊಂದಿಗೆ ಇಡೀ ರೈತ ಸಮುದಾಯವನ್ನು ಅವಮಾನಿಸಿದ್ದಾರೆ. ಅವರ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು’ ಎಂದು ತಾಲ್ಲೂಕು ಆಡಳಿತ ಮತ್ತು ಪೋಲಿಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

‘ರೈತರಿಗೆ ಬರಬೇಕಾದ ಕಬ್ಬು ಬಾಕಿ ಹಣ ಪಾವತಿಸದೆ ಸಕ್ಕರೆ ಕಾರ್ಖಾನೆಯವರು ರೈತರಿಗೆ ಮಾಡುವಂತಹ ಶೋಷಣೆ ಸಾಕ್ಷಿ ಸಹಿತ ಬಹಿರಂಗವಾಗಿದೆ’ ಎಂದು ದೂರಿದ್ದಾರೆ.

ADVERTISEMENT

‘ನೊಂದ ಹಾಗೂ ಅವಮಾನಕ್ಕೆ ಒಳಗಾದ ರೈತ ಹರೀಶ ಲಂಗೋಟಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು. 5 ದಿನಗಳಲ್ಲಿ ಕ್ರಮ ಜರುಗಿಸದಿದ್ದರೆ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಪ್ರಸ್ತುತ ಕಾರ್ಖಾನೆಯಲ್ಲಿ ಅವ್ಯವಹಾರ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧ್ಯಕ್ಷರು, ಚುನಾವಣೆಯಲ್ಲಿ ರೈತ ಮತದಾರರಿಗೆ ನೀಡಿದ ಭರವಸೆಗಳನ್ನುಈಡೇರಿಸದೆ, ಕಮಿಷನ್ ವ್ಯವಹಾರದಲ್ಲಿ ತೊಡಗಿರುವುದು ಮೇಲ್ನೋಟ್ಟಕ್ಕೆ ಕಂಡುಬಂದಿದೆ. ಹೀಗಾಗಿ, ಕಾರ್ಖಾನೆಯ ಎಲ್ಲ ವ್ಯವಹಾರವನ್ನೂ ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.