ಎಂ.ಕೆ.ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಅನೇಕ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಜನ– ಜಾನುವಾರುಗಳ ಜೀವನಾಡಿ ಮಲಪ್ರಭೆ. ಪಶ್ಚಿಮಘಟ್ಟ ಅರಣ್ಯದ ಅಸಂಖ್ಯಾತ ಜೀವಸಂಕುಲಗಳ ತೊಟ್ಟಿಲು ಈ ನದಿ. ಆದರೆ, ನಾಗರಿಕರ ‘ಅನಾಗರಿಕ’ ನಡೆಯ ಕಾರಣ ಇಂದು ತಾಯೊಡಲಿಗೆ ಆತಂಕ ಎದುರಾಗಿದೆ. ಅಮೃತ ನೀಡಿದ ನದಿಗೆ ಮನುಷ್ಯರು ವಿಷಪ್ರಾಶನ ಮಾಡುತ್ತಿದ್ದಾರೆ.
ಖಾನಾಪೂರ ತಾಲ್ಲೂಕಿನ ಕಣಕುಂಬಿಯಲ್ಲಿ ತೊರೆಯಾಗಿ ಹುಟ್ಟಿ ಪೂರ್ವಾಭಿಮುಖವಾಗಿ ಅಚ್ಚಹಸಿರಿನ ಅರಣ್ಯದೊಳಗೆ ಶಾಂತಳಾಗಿ ಹರಿದು ಬರುವ ಮಲಪ್ರಭೆ, ಜೀವ ಸಂಕುಲದ ದಾಹ ನೀಗಿಸುವ ಜೊತೆಗೆ ಕೃಷಿ ಭೂಮಿಗಳಿಗೆ ನೀರಿನ ಆಸರೆಯಾಗಿದ್ದಾಳೆ.
ಈ ನದಿಯು, ಜಾಂಬೋಟಿ, ಖಾನಾಪುರ, ಪಾರಿಶ್ವಾಡ ಮಾರ್ಗವಾಗಿ ಖಾನಾಪುರ ತಾಲ್ಲೂಕಿನಲ್ಲಿ ಸುಮಾರು 68 ಕಿ.ಮೀ ಕ್ರಮಿಸಿ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಪ್ರವೇಶಿಸುತ್ತದೆ.
ಉಗಮ ಸ್ಥಾನದಿಂದ ಖಾನಾಪುರ ಪಟ್ಟಣದ ವರೆಗೆ ಸುಮಾರು 40 ಕಿ.ಮೀ ದೂರ ಕ್ರಮೀಸುವ ಈ ನದಿ, ಬಹುಪಾಲು ಅರಣ್ಯ ಪ್ರದೇಶದಲ್ಲೇ ಸಾಗುತ್ತದೆ. ಹೀಗಾಗಿ ನದಿ ನೀರು ಔಷಧೀಯ ಗುಣಗಳು ಹಾಗೂ ಖನಿಜಾಂಶಗಳನ್ನು ಒಳಗೊಂಡಿರುತ್ತದೆ.
ಅರಣ್ಯದಲ್ಲಿ ಹರಿಯುವವರೆಗೂ ಮಲಪ್ರಭೆಗೆ ಯಾವುದೇ ಆತಂಕ ಇಲ್ಲ. ಆದರೆ, ಖಾನಾಪುರ ಪಟ್ಟಣದಿಂದ ಎಂ.ಕೆ.ಹುಬ್ಬಳ್ಳಿ ಪಟ್ಟಣದವರೆಗೆ ಅರಣ್ಯೇತರ ಪ್ರದೇಶದಲ್ಲಿ ನದಿ ಸಾಗುವ ಕಾರಣ, ಇಲ್ಲಿ ಮಾನವ ತ್ಯಾಜ್ಯ, ಪ್ಲಾಸ್ಟಿಕ್, ಚರಂಡಿ ನೀರು, ಸತ್ತ ಪ್ರಾಣಿಗಳ ಕಳೆಬರ, ಕಾರ್ಖಾನೆಗಳ ತ್ಯಾಜ್ಯ ನೀರು ಸೇರಿದಂತೆ ಹಾನಿಕಾರಕ ಪದಾರ್ಥಗಳು ನದಿಯಲ್ಲಿ ಮಿಶ್ರಣಗೊಳ್ಳುತ್ತಿವೆ. ಪರಿಣಾಮ ನದಿ ನೀರು ಕುಡಿಯಲು ಯೋಗ್ಯವಲ್ಲದ ಮಟ್ಟಿಗೆ ಮಲಿನಗೊಳ್ಳುತ್ತಿದೆ. ಹೀಗಾಗಿ ನದಿಯಲ್ಲಿರುವ ಮೀನು ಮತ್ತಿತರ ಜಲಚರಗಳು ಉಸಿರುಗಟ್ಟಿ ಸಾಯುವುದು ಸಾಮಾನ್ಯವಾಗಿದೆ.
ಮಲಿನ ನೀರನ್ನೇ ಕುಡಿಯುವ ಅನಿವಾರ್ಯ: ಮಲಪ್ರಭೆ ಖಾನಪುರಿಂದ ಬಂದು ಕಿತ್ತೂರು ಹಾಗೂ ಬೈಲಹೊಂಗಲ ತಾಲ್ಲೂಕಿನಲ್ಲಿ ಸಾಗಿ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಆಣೆಕಟ್ಟಿಗೆ ಹೋಗಿ ಸೇರುತ್ತದೆ. ಅಲ್ಲಿಂದ ಮತ್ತೆ ನೂರಾರು ಕಿ.ಮೀ ಹರಿದು ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ ಸಂಗಮವಾಗುತ್ತದೆ.
ಕಲ್ಮಷಗೊಳ್ಳುತ್ತಿರುವ ನದಿಯ ನೀರನ್ನೇ ಬೈಲಹೊಂಗಲ, ಸವದತ್ತಿ ಸೇರಿದಂತೆ ಹುಬ್ಬಳ್ಳಿ– ಧಾರವಾಡ ಅವಳಿ ನಗರಗಳ ಜನತೆ ಕುಡಿಯಲು ಬಳಸುತ್ತಿದ್ದಾರೆ.
ಎಂ.ಕೆ.ಹುಬ್ಬಳ್ಳಿ ಪಟ್ಟಣದ ಬಳಿ ಹರಿಯುವ ಮಲಪ್ರಭಾ ನದಿಗೆ ಪಟ್ಟಣದ ಕೊಳಚೆ ನೀರು ಸೇರ್ಪಡೆ ಒಂದೆಡೆಯಾದರೆ, ನದಿ ತೀರದ ಶರಣೆ ಗಂಗಾಂಬಿಕಾ ಐಕ್ಯಮಂಟಪ, ಅಶ್ವತ್ಥ ಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿ ನದಿ ದಡದಲ್ಲಿ ಸಂಗ್ರಹಗೊಳ್ಳುತ್ತಿರುವ ತ್ಯಾಜ್ಯ ವಸ್ತುಗಳು ಇಲ್ಲಿಗೆ ಬಂದ ಜನರಿಗೆ ವಾಕರಿಕೆ ತರಿಸುತ್ತಿವೆ.
ಪೂಜೆ ಮತ್ತು ಅಂತಿಮ ವಿಧಿವಿಧಾನದ ಹೆಸರಲ್ಲಿ ನದಿ ಒಡಲಿಗೆ ಎಸೆಯುವ ಬಟ್ಟೆ, ವಸ್ತ್ರ, ಮಡಿಕೆ, ಮಾನವನ ಸುಟ್ಟ ಬೂದಿ ಮಿಶ್ರಿತ ಎಲುಬಿನ ತುಕಡಿಗಳು, ದೇವರ ಹಳೆಯ ಫೋಟೊಗಳು ನದಿ ದಡದಲ್ಲಿ ಎಲ್ಲೆಂದರಲ್ಲಿ ಬಿದ್ದಿವೆ. ಪ್ರೇಕ್ಷಣೀಯ ಸ್ಥಳವಾಗಿರುವ ಇಲ್ಲಿ ಬರುವ ಪ್ರವಾಸಿಗಳ ಬೇಸರಕ್ಕೂ ಇದು ಕಾರಣವಾಗಿದೆ.
ನಿರ್ಲಕ್ಷ್ಯ ಮತ್ತು ಅಸ್ವಚ್ಛತೆ ಕಂಡು ಜನರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ನದಿ ದಡದ ಎಲ್ಲ ಊರಿನ ಬಳಿಯಲ್ಲೂ ಇದೇ ಪರಿಸ್ಥಿತಿ ಇರುವುದರಿಂದ ನದಿ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.