ಚನ್ನಮ್ಮನ ಕಿತ್ತೂರು: ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನಲುಗಿರುವ ಖೋದಾನಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸವಟಗಿ ಗ್ರಾಮವು ರಸ್ತೆ, ಚರಂಡಿ ಸೌಲಭ್ಯಗಳಿಂದ ವಂಚಿತವಾಗಿದೆ. ರಸ್ತೆಯ ಮೇಲೆ ಮತ್ತು ರಸ್ತೆಗೆ ಅಡ್ಡವಾಗಿ ಹರಿಯುವ ಗಟಾರು ನೀರು ಇಡೀ ಆಡಳಿತ ವ್ಯವಸ್ಥೆಯನ್ನೆ ಅಣಕಿಸುವಂತಿದೆ.
‘ಸುಮಾರು ಎಂಟ್ಹತ್ತು ಓಣಿಗಳು, ಮೂರು ಸಾವಿರ ಆಸುಪಾಸಿನ ಜನಸಂಖ್ಯೆ ಹೊಂದಿರುವ ಈ ಪುಟ್ಟ ಗ್ರಾಮ ಕಿತ್ತೂರು ತಾಲ್ಲೂಕಿನ ಕೊನೆಯ ಗ್ರಾಮವಾಗಿದೆ. ಕಡೇ ಹಳ್ಳಿಯಾಗಿದ್ದರಿಂದಲೊ ಏನೋ, ಕೊನೆ ಮಗನ ಮೇಲೆ ಕಾಳಜಿ ಕಡಿಮೆ’ ಎನ್ನುವಂತೆ ಆಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಸಿಗದ ಸರ್ಕಾರದ ಸೌಲಭ್ಯ:ಗ್ರಾಮವು ನರೇಗಾ ಯೋಜನೆಯಲ್ಲಿ ಸಮರ್ಪಕ ಕೆಲಸ ತೆಗೆದುಕೊಳ್ಳದೆ ಇರುವುದು ಗಮನಕ್ಕೆ ಬರುತ್ತದೆ. ಕೆಲವು ಓಣಿಗಳು ಸಿಮೆಂಟ್ ಕಾಂಕ್ರೀಟ್ ರಸ್ತೆ ಭಾಗ್ಯ ಕಂಡಿದ್ದರೂ ಕೆಲವು ಓಣಿಗಳು ಹಾಗೆ ಇವೆ ಎಂದು ಸಾರ್ವಜನಿಕರು ದೂರುತ್ತಾರೆ.
ಊರಿನ ಚರಂಡಿ ವ್ಯವಸ್ಥೆಯಂತೂ ಆಯೋಮಯ ಎನ್ನುವಂತಾಗಿದೆ. ಮನೆಯ ಗೋಡೆಗೆ ಹೊಂದಿಕೊಂಡು ರಸ್ತೆ ಮೇಲೆಯೇ ಗಟಾರು ನೀರು ಹೋಗುವ (ಅ)ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಗ್ಗೆ ಗ್ರಾಮಸ್ಥರನ್ನು ಕೇಳಿದರೆ, ಓಣಿ ಚಿಕ್ಕದಾಗಿದ್ದರಿಂದ ಮತ್ತು ಗಟಾರು ಸ್ವಚ್ಛ ಮಾಡುವವರ ಕೊರತೆ ಮನಗಂಡು ಹೀಗೆ ಮಾಡಿದ್ದಾರೆ ಎಂದು ಉತ್ತರಿಸುತ್ತಾರೆ! ‘ನೆಗಡಿ ಬರಬಾರದು ಎಂದು ಮೂಗನ್ನೆ ಕತ್ತರಿಸಿಕೊಂಡಂಥ ದುಸ್ಸಾಸಹಕ್ಕೆ ಹೋಗಿರುವುದು ಎಷ್ಟು ಸರಿ’ ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೊಬ್ಬರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.
ಪರಿಹಾರ ಮರೀಚಿಕೆ:ಊರಿನ ಪರಿಸ್ಥಿತಿ ಹೀಗಿದ್ದರೆ, ಕೆಲವರ ಮನೆಯೊಳಗೆ ಕಾಲಿಟ್ಟರೆ ಸಾಕು ಬಡತನದ ಪರಿಸ್ಥಿತಿ ಕಣ್ಣಿಗೆ ರಾಚುತ್ತದೆ. ಮಲ್ಲಿಕಾರ್ಜುನ ಕಲಬಸನ್ನವರ ಎಂಬುವರ ಮನೆಯಲ್ಲಿ ಏಳು ಕುಟುಂಬಗಳು ವಾಸಿಸುತ್ತವೆ ಎಂದು ಮನೆ ಯುವಕ ಮಹಾಂತೇಶ ಕಲಬಸನ್ನವರ ಮಾಹಿತಿ ನೀಡಿದರು. ಬಿದ್ದ ಮನೆಯ ಒಂದು ಬದಿಗೆ ಪ್ಲಾಸ್ಟಿಕ್ ಚೀಲ ಕಟ್ಟಿ ಮರೆಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅದೇ ಅವರ ಅರಮನೆ. ಅಡುಗೆ ಮನೆ ಪಕ್ಕದಲ್ಲಿಯೇ ಮಗುವೊಂದನ್ನು ಮಲಗಿಸಿದ್ದರು.
‘ಮಳೆಗಾಲದಲ್ಲಿ ಮನೆ ಬಿದ್ದಿದೆ. ಸಮೀಕ್ಷೆಯನ್ನೂ ಮಾಡಿಕೊಂಡು ಹೋಗಲಾಗಿದೆ. ಆದರೆ ಸರ್ಕಾರದ ಪರಿಹಾರ ಎಂಬುದು ಇನ್ನೂ ಮರೀಚಿಕೆ ಆಗಿಯೇ ಉಳಿದಿದೆ’ ಎಂದು ಮಹಾಂತೇಶ ಅಳಲು ತೋಡಿಕೊಂಡರು.
‘ಅತಿವೃಷ್ಟಿಗೆ ಸವಟಗಿ ಗ್ರಾಮದಲ್ಲಿ 11 ಮನೆಗಳು ಬಿದ್ದಿವೆ. ಇವುಗಳಲ್ಲಿ ಎರಡು ಸಂತ್ರಸ್ತ ಕುಟುಂಬಗಳಿಗೆ ಮಾತ್ರ ಸರ್ಕಾರದಿಂದ ಪರಿಹಾರ ಸಿಕ್ಕಿದೆ. ಉಳಿದ ಕುಟುಂಬಗಳಿಗೆ ಪರಿಹಾರವನ್ನು ಸರ್ಕಾರದವರು ಈವರೆಗೂ ನೀಡಿಲ್ಲ. ವಿಠ್ಠಲ ಯಡಳ್ಳಿ ಎಂಬುವರ ಬಲ ಮುಂಗೈ ಇಲ್ಲ. ದುಡಿದು ಉಣ್ಣದೇ ಗತಿಯಿಲ್ಲ. ಮಳೆಗಾಲದಲ್ಲಿ ಇವರ ಮನೆ ಬಿತ್ತು. ಬೇರೆ ಕಡೆಗೆ ಅವರು ವಾಸಿಸುತ್ತಿದ್ದಾರೆ’ ಎಂದು ಖೋದಾನಪುರ ಗ್ರಾಮ ಪಂಚಾಯ್ತಿ ಸದಸ್ಯ ರಮ್ಜಾನ್ ಮುಲ್ಲಾ ಮಾಹಿತಿ ನೀಡಿದರು.
ಕಟ್ಟಡವೂ ಅನಾಥ:ಸರ್ಕಾರಿ ಪ್ರಾಥಮಿಕ ಉರ್ದು ಶಾಲೆಯೂ ಇಲ್ಲಿದೆ. ಇಕ್ಕಟ್ಟಾದ ದಾರಿಯಲ್ಲಿ ಇದನ್ನು ನಿರ್ಮಿಸಿದ್ದಾರೆ. ಈ ಶಾಲೆಯ ಸುತ್ತಲಿನ ಪರಿಸರ ಆರೋಗ್ಯದಾಯಕವಾಗಿಲ್ಲ. ಇದನ್ನು ಗಮನಿಸಿದ ಊರ ಹಿರಿಯರು ಮತ್ತೊಂದು ಕಡೆಗೆ ಬೇರೆ ಕಟ್ಟಡ ನಿರ್ಮಿಸಿದರು. ಅಲ್ಲಿ ಉರ್ದು ಶಾಲೆ ಸ್ಥಳಾಂತರಗೊಂಡಿತು. ಈಗ ಹಳೆಯ ಸರ್ಕಾರೀ ಕಟ್ಟಡವೂ ಅನಾಥವಾಗಿದೆ. ಯಾವುದಕ್ಕೂ ಇದನ್ನು ಉಪಯೋಗಿಸದ್ದರಿಂದ ಪಾಳು ಬಿದ್ದಿದೆ ಎನ್ನುತ್ತಾರೆ ಗ್ರಾಮಸ್ಥರು.
₹ 10 ಲಕ್ಷ ಮಂಜೂರು
ಮುಲ್ಲಾ ಓಣಿ ರಸ್ತೆ ಅಭಿವೃದ್ಧಿಪಡಿಸಲು ₹ 10 ಲಕ್ಷ ಮಂಜೂರಾಗಿದ್ದು, ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಬೇಕಿದೆ.
–ರಮ್ಜಾನ್ ಮುಲ್ಲಾ, ಸದಸ್ಯ, ಗ್ರಾಮ ಪಂಚಾಯ್ತಿ
ನಿರ್ಮಾಣಕ್ಕೆ ಕ್ರಮ
ಇತ್ತೀಚಿಗೆ ಖೋದಾನಪುರ ಗ್ರಾಮ ಪಂಚಾಯ್ತಿಗೆ ಸೇರ್ಪಡೆಯಾಗಿರುವ ಸವಟಗಿ ಗ್ರಾಮದ ಓಣಿಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆ (ಎಲ್ ಡಬ್ಲ್ಯುಎಂ) ಯೋಜನೆಯಡಿ ಚರಂಡಿ ನಿರ್ಮಿಸಲು ಸರ್ವೇ ಮಾಡಲಾಗಿದೆ.
–ಈಶ್ವರ ಹಡಪದ, ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.