ADVERTISEMENT

ಪ್ರವರ್ಗ 2ಎ ಮೀಸಲಾತಿ: ಮರಾಠಾ ಸಮಾಜ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 14:14 IST
Last Updated 12 ಸೆಪ್ಟೆಂಬರ್ 2021, 14:14 IST
ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿಯಲ್ಲಿ ಭಾನುವಾರ ನಡೆದ ಮರಾಠಾ ಚಿಂತನೆ ಸಭೆಯನ್ನು ಶಾಸಕ ಶ್ರೀಮಂತ ಪಾಟೀಲ ಮತ್ತು ಗುರುಪುತ್ರ ಮಹಾರಾಜರು ಉದ್ಘಾಟಿಸಿದರು. ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಹಾಗೂ ಮುಖಂಡರು ಇದ್ದಾರೆ
ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿಯಲ್ಲಿ ಭಾನುವಾರ ನಡೆದ ಮರಾಠಾ ಚಿಂತನೆ ಸಭೆಯನ್ನು ಶಾಸಕ ಶ್ರೀಮಂತ ಪಾಟೀಲ ಮತ್ತು ಗುರುಪುತ್ರ ಮಹಾರಾಜರು ಉದ್ಘಾಟಿಸಿದರು. ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಹಾಗೂ ಮುಖಂಡರು ಇದ್ದಾರೆ   

ಚನ್ನಮ್ಮನ ಕಿತ್ತೂರು: ‘ಮರಾಠಾ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಬೇಕು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಛತ್ರಪತಿ ಶಿವಾಜಿ ಅಧ್ಯಯನ ಪೀಠ ಸ್ಥಾಪಿಸಬೇಕು. ಈಗಾಗಲೇ ಘೋಷಣೆ ಮಾಡಲಾಗಿರುವ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಅ.2ರೊಳಗೆ ಕಾರ್ಯಾರಂಭಿಸುವಂತೆ ಕ್ರಮ ಕೈಗೊಳ್ಳಬೇಕು. ಸಮಾಜದ ಶಾಸಕರೊಬ್ಬರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು’ ಎಂದು ಮರಾಠಾ ಸಮಾಜ ಆಗ್ರಹಿಸಿದೆ.

ತಾಲ್ಲೂಕಿನ ಅಂಬಡಗಟ್ಟಿಯಲ್ಲಿ ಭಾನುವಾರ ಆಯೋಜಿಸಿದ್ದ ಮರಾಠಾ ಸಮಾಜದ ಚಿಂತನಾ ಸಭೆಯಲ್ಲಿ ಮೇಲಿನ ನಾಲ್ಕು ನಿರ್ಣಯಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು.

ಸಮಾಜದ ಮುಖಂಡ ಪುಂಡಲೀಕ ನೀರಲಕಟ್ಟಿ ಮಂಡಿಸಿದರು. ನೆರೆದಿದ್ದವರು ಚಪ್ಪಾಳೆ ಮೂಲಕ ಸಹಮತ ವ್ಯಕ್ತ‍ಪಡಿಸಿದರು.

ADVERTISEMENT

ಇದಕ್ಕೂ ಮುನ್ನ ಮಾತನಾಡಿದ ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ, ‘ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಮಾಜದವರಿಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ. ಚುನಾವಣೆ ಸಂದರ್ಭದಲ್ಲಿ ಮತ ಹಾಕಲು ಬಳಸುವ ಪಕ್ಷಗಳು ನಂತರ ಸಮಾಜನದವರನ್ನು ಕಡೆಗಣಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿ ಸರ್ಕಾರಕ್ಕೆ ಬದ್ಧತೆ ಇಲ್ಲ. ಕೇವಲ ಮಾತನಾಡಿ ಹೋಗುತ್ತಾರೆ. ಪ್ರವಾಹ, ಕೊರೊನಾ ಸಂದರ್ಭದಲ್ಲಿ ಮಾಡಿದ ಕಳಪೆ ನಿರ್ವಹಣೆಯೇ ಇದಕ್ಕೆ ಉದಾಹರಣೆ ಆಗಿದೆ. ಜನಪರ ಕಾಳಜಿ ಇಲ್ಲದ ಸರ್ಕಾರ ಇದಾಗಿದೆ’ ಎಂದು ಟೀಕಿಸಿದರು.

‘ಮರಾಠಾ ಅಭಿವೃದ್ಧಿ ಪ್ರಾಧಿಕಾರ ಕೇವಲ ಘೋಷಣೆಯಾಗಿದೆ. ಅದು ಅನುಷ್ಠಾನಕ್ಕೆ ಬಂದಿಲ್ಲ. ಸಮಾಜದ ಜನರೆಲ್ಲ ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಬೇಕು’ ಎಂದು ಹೇಳಿದರು.

ಬಿಜೆಪಿ ಶಾಸಕ ಶ್ರೀಮಂತ ಪಾಟೀಲ, ‘ಮರಾಠಾ ಸಮಾಜದ ಬೇಡಿಕೆಗಳನ್ನು ಅನೇಕ ವರ್ಷಗಳಿಂದ ಮಂಡಿಸುತ್ತಲೇ ಬಂದಿದ್ದೇವೆ. ಸರಿಯಾದ ನ್ಯಾಯ ಸಿಕ್ಕಿಲ್ಲ. ಈಗ ಕಾಲ ಕೂಡಿ ಬಂದಿದೆ ಅನಿಸುತ್ತಿದೆ. ಮರಾಠಾ ಸಮಾಜ ಒಂದಾಗಿ, ಶಕ್ತಿಯಾಗಿ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮಾಡಲಿದೆ’ ಎಂದರು.

ಧಾರವಾಡ ಮರಾಠಾ ಪ್ರಾಂತ ಸಂಯೋಜಕ ಭೀಮಪ್ಪ ಕಸಾಯಿ, ಮುಖಂಡರಾದ ಶಿವಾಜಿ ಘಾಟಗೆ, ಶಿವು ಶಾವನ್ನವರ, ಈರಣ್ಣ ಕಮ್ಮಾರ ಇದ್ದರು.

ಗುರುಪುತ್ರ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ವಿಜಯಕುಮಾರ ಶಿಂಧೆ ಸ್ವಾಗತಿಸಿದರು. ಪುಂಡಲೀಕ ನೀರಲಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.