ಬೆಳಗಾವಿ: ಮಹಾರಾಷ್ಟ್ರದ ಗಡಿ ಭಾಗದ ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮರಾಠಿ ಮಾಧ್ಯಮದ ಶಿಕ್ಷಕರ ನೇಮಕ ಮಾಡಿ, ಆದೇಶ ಹೊರಡಿಸಿದೆ. ಇದರ ಪರಿಣಾಮ 40 ಸಾವಿರಕ್ಕೂ ಹೆಚ್ಚು ಕನ್ನಡದ ಮಕ್ಕಳು ಅನಿವಾರ್ಯವಾಗಿ ಮರಾಠಿ ಮಾಧ್ಯಮದಲ್ಲಿ ಪಾಠ ಆಲಿಸಬೇಕಿದೆ.
‘ಈ ರೀತಿ ಭಾಷಾ ಅಲ್ಪಸಂಖ್ಯಾತ ಮಕ್ಕಳ ಮೇಲೆ ಬೇರೊಂದು ಭಾಷೆ ಹೇರುವುದು ಭಾರತೀಯ ಸಂವಿಧಾನದ ಅನುಚ್ಚೇದ 350–ಎ ಉಲ್ಲಂಘನೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಿಡಿ ಕಾರಿದೆ.
ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಿಲ್ಲಾ ಪರಿಷತ್ ನಡೆಸುವ 300ಕ್ಕೂ ಹೆಚ್ಚು ಕನ್ನಡ ಪ್ರಾಥಮಿಕ ಶಾಲೆಗಳಿವೆ. ಇದರಲ್ಲಿ 120ಕ್ಕೂ ಹೆಚ್ಚು ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರೇ ಇರಲಿಲ್ಲ. ದಶಕದ ಬಳಿಕ ಸರ್ಕಾರ ಶಿಕ್ಷಕರ ನೇಮಕಾತಿ ಮಾಡುತ್ತಿದೆ. ಆದರೆ, ಎಲ್ಲ ಶಾಲೆಗಳಿಗೂ ಮರಾಠಿ ಮಾಧ್ಯಮದಲ್ಲಿ ಪದವಿ ಪಡೆದವರನ್ನೇ ನೇಮಿಸಿದೆ.
‘ಸದ್ಯ 120 ಶಿಕ್ಷಕರ ನೇಮಕಾತಿ ನಡೆದಿದೆ. 24 ಮಂದಿಗೆ ನೇಮಕಾತಿಗೆ ಆದೇಶ ಪತ್ರ ನೀಡಲಾಗಿದೆ. ಇನ್ನೂ 96 ಶಿಕ್ಷಕರಿಗೆ ಮುಂದಿನ ವಾರ ಆದೇಶ ಪತ್ರ ಸಿಗಲಿದೆ. ಇವರಲ್ಲಿ ಕನ್ನಡದಲ್ಲಿ ಪದವಿ ಪಡೆದವರು ಕೇವಲ ಏಳು ಮಂದಿ. ಉಳಿದವರಿಗೆ ಕನ್ನಡ ಅಕ್ಷರಜ್ಞಾನ, ಭಾಷಾಜ್ಞಾನ ಇಲ್ಲ’ ಎಂದು ಜತ್ತ ಕನ್ನಡ ಹೋರಾಟಗಾರ ಮಲ್ಲೇಶಪ್ಪ ತೇಲಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕನ್ನಡ ಮಾಧ್ಯಮದಲ್ಲಿ ಬಿ.ಇಡಿ, ಡಿ.ಇಡಿ ಪದವಿ ಪಡೆದ ಹಲವರು ಇದ್ದಾರೆ. ಟಿಇಟಿ ಉತ್ತೀರ್ಣರಾಗಿ ಅರ್ಹತೆ ಪಡೆದಿದ್ದಾರೆ. ಆದರೆ, ಅವರನ್ನು ಮಹಾರಾಷ್ಟ್ರ ಸರ್ಕಾರ ನೇಮಕಾತಿಗೆ ಪರಿಗಣಿಸಿಲ್ಲ. ಕನ್ನಡ ಕಲಿಯುವ ಮಕ್ಕಳ ಸಂಖ್ಯೆ ಕ್ರಮೇಣ ಕಡಿಮೆ ಆಗುತ್ತಿದೆ. ಈಗ ಅಧಿಕೃತವಾಗಿ ಎಲ್ಲ ಶಾಲೆಗಳನ್ನೂ ಮರಾಠಿಮಯ ಮಾಡುವ ಪ್ರಯತ್ನ ನಡೆದಿದೆ’ ಎಂದರು.
‘ನನಗೆ ಕನ್ನಡ– ಮರಾಠಿ ಭಾಷಾ ಬಾಂಧವ್ಯ ಮುಖ್ಯ. ಮರಾಠಿ ಪ್ರೀತಿಸುಷ್ಟೇ ನಾನು ಕನ್ನಡವನ್ನೂ ಪ್ರೀತಿಸುತ್ತೇನೆ. ಕನ್ನಡ ಶಾಲೆಗಳ ರಕ್ಷಣೆಗೆ ಪ್ರಯತ್ನಿಸುವೆ’ ಎಂದು ಜತ್ತ ಶಾಸಕ ವಿಕ್ರಮ ಸಾವಂತ ಗಡಿಕನ್ನಡಿಗರಿಗೆ ಭರವಸೆ ನೀಡಿದ್ದಾರೆ.
ಪರಿಣಾಮ ಏನು?
ಗಡಿ ಪ್ರದೇಶ ಕನ್ನಡ ಮಕ್ಕಳು ಮರಾಠಿ ಅಥವಾ ಇತರೆ ಮಾಧ್ಯಮ ಸೇರಬೇಕು ಇಲ್ಲವೇ ಕಲಿಕೆಯಿಂದ ದೂರ ಉಳಿಯಬೇಕು
ಕನ್ನಡ ಮಾಧ್ಯಮದವರಿಗೆ ಉದ್ಯೋಗದ ಭರವಸೆಯೇ ಇಲ್ಲವಾಗುತ್ತದೆ
ರಾಜ್ಯ ಪುನರ್ ವಿಂಗಡಣೆಗೂ ಮುನ್ನ ಮಹಾರಾಷ್ಟ್ರದಲ್ಲಿ ನೆಲೆ ಕಂಡುಕೊಂಡ ಅಪಾರ ಸಂಖ್ಯೆಯ ಕನ್ನಡಿಗರಿಗೆ ಅಸ್ತಿತ್ವವೇ ಇಲ್ಲವಾಗುತ್ತದೆ
ವರ್ಷಗಳು ಕಳೆದಂತೆ ಕನ್ನಡ ಶಾಲೆಗಳನ್ನು ಕ್ರಮೇಣ ಮುಚ್ಚಲಾಗುತ್ತದೆ
ಕನ್ನಡ ಶಾಲೆಯಲ್ಲಿರುವ ಮಕ್ಕಳಿಗೆ ಮರಾಠಿ ಶಿಕ್ಷಕರು ಹೇಗೆ ಕಲಿಸಲು ಸಾಧ್ಯ? ಇದರಿಂದ ಕನ್ನಡ ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದಕ್ಕೆ ನನ್ನ ವಿರೋಧವಿದೆ.ವಿಕ್ರಮ ಸಾವಂತ, ಶಾಸಕ, ಜತ್ತ, ಮಹಾರಾಷ್ಟ್ರ
ನಾನು ಕನ್ನಡ ಮಾಧ್ಯಮದಲ್ಲಿ ಡಿ.ಇಡಿ ಪದವಿ ಪಡೆದಿದ್ದು, ಟಿಇಟಿ ಉತ್ತೀರ್ಣನಾಗಿದ್ದೇನೆ. ಆದರೆ, ನಮ್ಮ ಅರ್ಜಿಗಳನ್ನೇ ಸ್ವೀಕರಿಸಿಲ್ಲ. ಮರಾಠಿ ಮಾಧ್ಯಮದವರನ್ನು ನೇಮಕ ಮಾಡಲಾಗಿದೆ.ಅನಿಲ ಚೌಗುಲೆ, ಕನ್ನಡ ಮಾಧ್ಯಮ ಶಿಕ್ಷಕ ಅಭ್ಯರ್ಥಿ, ಜತ್ತ
ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳು ಅವನತಿಯತ್ತ ಸಾಗಿವೆ. ಭಾಷಾ ಅಲ್ಪಸಂಖ್ಯಾತರ ಹಕ್ಕು ಕಸಿದುಕೊಂಡ ಬಗ್ಗೆ ಆಯೋಗಕ್ಕೆ ದೂರು ನೀಡಿದ್ದೇವೆ. ಕನ್ನಡವನ್ನು ಮುಗಿಸುವ ತಂತ್ರ ನಡೆದಿದೆ.ಮಲ್ಲೇಶಪ್ಪ ತೇಲಿ, ಕನ್ನಡ ಹೋರಾಟಗಾರ, ಜತ್ತ
ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರ ತಂಡವು ಮಹಾರಾಷ್ಟ್ರಕ್ಕೆ ನಿಯೋಗ ಹೋಗಿ ನ್ಯಾಯ ಕೇಳಬೇಕು.ಅಶೋಕ ಚಂದರಗಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.