ADVERTISEMENT

ಹೆಣ್ಣು ಸಿಗದವರಿಗೆ ಮದುವೆ ಮಾಡಿಸುತ್ತೇವೆ: ಪಕ್ಷೇತರ ಅಭ್ಯರ್ಥಿಗಳಿಂದ ಪ್ರಣಾಳಿಕೆ

ಪಕ್ಷೇತರರಾಗಿ ಸ್ಪರ್ಧಿಸಿರುವ ಕುಳ್ಳೂರ ಸಹೋದರರ ಪ್ರಣಾಳಿಕೆ

ಪ್ರಜಾವಾಣಿ ವಿಶೇಷ
Published 4 ಮೇ 2023, 18:39 IST
Last Updated 4 ಮೇ 2023, 18:39 IST
ಅರಭಾವಿ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿರುವ ಗುರುಪುತ್ರ ಕುಳ್ಳೂರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಅಂಶಗಳನ್ನು ಹೊಂದಿರುವ ಕರಪತ್ರ
ಅರಭಾವಿ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿರುವ ಗುರುಪುತ್ರ ಕುಳ್ಳೂರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಅಂಶಗಳನ್ನು ಹೊಂದಿರುವ ಕರಪತ್ರ   

ಇಮಾಮಹುಸೇನ್‌ ಗೂಡುನವರ

ಬೆಳಗಾವಿ: ರಾಷ್ಟ್ರೀಯ ಪಕ್ಷಗಳು ಮತದಾರರ ಓಲೈಕೆಗಾಗಿ ಭರವಸೆಗಳ ಮಹಾಪೂರವನ್ನೇ ಹರಿಸುತ್ತಿವೆ. ಜಿಲ್ಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವ ಇಬ್ಬರು ಸಹೋದರರು, ‘ನಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ, ವಿವಾಹವಾಗದ ಮತ್ತು ಹೆಣ್ಣು ಸಿಗದವರಿಗೆ ಮದುವೆ ಮಾಡಿಸುತ್ತೇವೆ’ ಎಂಬ ಭರವಸೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಿರುವುದು ಎಲ್ಲರ ಗಮನ ಸೆಳೆದಿದೆ.

ಅರಭಾವಿ ಕ್ಷೇತ್ರದಿಂದ ಗುರುಪುತ್ರ ಕುಳ್ಳೂರ, ಗೋಕಾಕ ಮತ್ತು ಹುಕ್ಕೇರಿ ಕ್ಷೇತ್ರಗಳಿಂದ ಅವರ ಸಹೋದರ ಪುಂಡಲಿಕ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಅವರು ತಮ್ಮ ಚುನಾವಣೆಯ ಪ್ರಣಾಳಿಕೆಯಲ್ಲಿ ‘ವಧು–ವರರಿಗೆ ಮದುವೆ ಭಾಗ್ಯ ಯೋಜನೆ–2023 ಗ್ಯಾರಂಟಿ’ ಎಂದು ಘೋಷಿಸಿದ್ದಾರೆ. ಈ ಪ್ರಣಾಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ADVERTISEMENT

ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ

‘ನಾನು ಚುನಾವಣೆಗೆ ಸ್ಪರ್ಧಿಸುವ ಮುನ್ನ, ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿದ್ದೆ. ಆಗ, ಬಡವರು, ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದರು. ಹಾಗಾಗಿ, ನನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅದನ್ನೇ ಮೊದಲ ಭರವಸೆಯನ್ನಾಗಿಸಿದ್ದೇನೆ’ ಎಂದು ಬಿ.ಎಸ್‌ಸಿ ಪದವೀಧರ ಗುರುಪುತ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಅವರಿಗೆ ವಿವಾಹವಾಗಿದೆ. 9ನೇ ತರಗತಿ ಓದಿರುವ ಸಹೋದರ ಪುಂಡಲಿಕ ಅವರ ವಿವಾಹ ಆಗಬೇಕಿದೆ.

‘ಹೆಣ್ಣು ಸಿಗದೆ ಪರದಾಡುತ್ತಿದ್ದ ಹಲವರ ವಿವಾಹವನ್ನು ಈ ಹಿಂದೆಯೂ ಮಾಡಿಸಿದ್ದೇನೆ. ನಾನು ಆಯ್ಕೆಯಾದ ನಂತರ, ಎಲ್ಲ ಸಮುದಾಯದ ವಧು–ವರರ ಸಮಾವೇಶ ಆಯೋಜಿಸುತ್ತೇನೆ. ಸಡಗರದಿಂದ ಮದುವೆಯನ್ನೂ ಮಾಡಿಸುತ್ತೇನೆ. ಮತದಾರರು, ವಿಶೇಷವಾಗಿ ಯುವಕರು ನನಗೆ ಮತ ನೀಡಬೇಕು’ ಎಂದು ಕೋರಿದರು.

‘ಚಹಾ ಮಾರುತ್ತಿದ್ದ ವ್ಯಕ್ತಿ (ನರೇಂದ್ರ ಮೋದಿ) ಪ್ರಧಾನಿಯಾಗಿದ್ದಾರೆ. ಬಾಲ್ಯದಲ್ಲಿ ಕುರಿ ಕಾದಿದ್ದ ವ್ಯಕ್ತಿ (ಸಿದ್ದರಾಮಯ್ಯ) ಮುಖ್ಯಮಂತ್ರಿಯಾಗಿದ್ದಾರೆ. ಹೀಗಿರುವಾಗ, ಪದವೀಧರನಾದ ನಾನೇಕೆ ಶಾಸಕನಾಗಬಾರದು? ಹಾಗಾಗಿ, ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎನ್ನುತ್ತಾರೆ.

ಯುವಕರಿಗೆ ಕಂಕಣ ಭಾಗ್ಯದ ಜತೆಗೆ, ಒಂಬತ್ತು ಅಂಶಗಳು ಈ ಸಹೋದರರ ಪ್ರಣಾಳಿಕೆಯಲ್ಲಿವೆ. ರೈತರಿಗೆ ಉಚಿತವಾಗಿ ಕೊಳವೆಬಾವಿ ಕೊರೆಯಿಸಿಕೊಡುವುದು, ನಿರುದ್ಯೋಗಿ ಯುವಕ–ಯುವತಿಯರಿಗೆ ಉದ್ಯೋಗ, ವಸತಿರಹಿತರಿಗೆ ಸ್ವಂತ ಸೂರು, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಭರವಸೆಗಳಿಂದ ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ.

ಭರವಸೆಗಳೇನು?

ರೈತರಿಗೆ ಉಚಿತ ಕೊಳವೆ ಬಾವಿ ಸೌಲಭ್ಯ ಯುವಕ–ಯುವತಿಯರಿಗೆ ಉದ್ಯೋಗದ ಭರವಸೆ ವಸತಿರಹಿತರಿಗೆ ಸ್ವಂತ ಸೂರು ಕಲ್ಪಿಸಲು ಒತ್ತು

ನಾನು ಮತ್ತು ಸಹೋದರ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೇವೆ. ನಮಗೆ ಉತ್ತಮ ಸ್ಪಂದನೆಯಿದೆ. ವಿವಾಹವಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ
ಗುರುಪುತ್ರ ಕುಳ್ಳೂರ ಪಕ್ಷೇತರ ಅಭ್ಯರ್ಥಿ ಅರಭಾವಿ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.