ಬೆಳಗಾವಿ: ‘ಮೊಘಲರ ಆಡಳಿತದಲ್ಲಿ ಹಿಂದೂ ಸಮುದಾಯದ ಹೆಣ್ಣು ಮಕ್ಕಳಿಗೆ ರಕ್ಷಣೆ ಇರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಆ ಪರಿಸ್ಥಿತಿ ತಲೆದೋರಿದೆ. ನೇಹಾ ಕೊಲೆ ಘಟನೆ ಖಂಡಿಸಿ, ನಗರದಲ್ಲಿ ಏಪ್ರಿಲ್ 22ರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಘಟನೆ ಬಗ್ಗೆ ಮುಕ್ತವಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಬೇಕಿತ್ತು. ಆದರೆ, ವೈಯಕ್ತಿಕ ಕಾರಣಕ್ಕೆ ನಡೆದಿದೆ ಎಂದು ಹೇಳಿಕೆ ನೀಡಿ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿರುವುದು ತಪ್ಪು? ಇನ್ನೂ ಈ ಘಟನೆಯನ್ನು ಕಾಂಗ್ರೆಸ್‌ನ ನಾಯಕರು ಖಂಡಿಸದಿರುವುದು ಸರಿಯಲ್ಲ’ ಎಂದು ದೂರಿದರು.
ಬಿಜೆಪಿ ವಕ್ತಾರ ಎಂ.ಬಿ. ಝಿರಲಿ, ‘ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ಕೊಲೆಯಿಂದ ರಾಜ್ಯದ ಎಲ್ಲ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ನಮ್ಮ ಮಕ್ಕಳ ಸುರಕ್ಷತೆ ಹೇಗೆಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಈ ಘಟನೆ ಬಗ್ಗೆ ಮುಕ್ತವಾಗಿ ತನಿಖೆ ಕೈಗೊಂಡು, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.
‘ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದ ನಂತರ, ಇಂಥ ಘಟನೆ ಹೆಚ್ಚುತ್ತಿವೆ. ವಿಧಾನಸಭೆಯಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆ ಮೊಳಗುತ್ತಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಕೆ.ಸುರೇಶ ಅವರ ಪ್ರಚಾರ ರ್‍ಯಾಲಿಯಲ್ಲೂ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೇಳಿಬಂದಿದೆ. ಮುಂದೆ ಇಂಥ ಘಟನೆ ಆಗಬಾರದು’ ಎಂದ ಅವರು, ‘ಹುಬ್ಬಳ್ಳಿಯ ಘಟನೆಯೊಂದೇ ಅಲ್ಲ. ರಾಜ್ಯದಲ್ಲಿ ಸಮಾಜಘಾತುಕ ಶಕ್ತಿಗಳು ಅಟ್ಟಹಾಸ ಮೆರೆದಾಗಲೆಲ್ಲ ನಾವು ವಿರೋಧಿಸಿದ್ದೇವೆ. ಪಕ್ಷದ ನಾಯಕರೆಲ್ಲ ಒತ್ತಡ ತಂದು, ಆರೋಪಿಗಳಿಗೆ ಶಿಕ್ಷೆ ಕೊಡಿಸಿದ್ದೇವೆ’ ಎಂದರು.
ಸಂಸದೆ ಮಂಗಲಾ ಅಂಗಡಿ, ಮೇಯರ್ ಸವಿತಾ ಕಾಂಬಳೆ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಸಂಜಯ ಪಾಟೀಲ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.