ಬೆಳಗಾವಿ: ಇಡೀ ಗಡಿನಾಡು ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ತೇಲುತ್ತಿದ್ದರೆ; ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕೆಲ ಸದಸ್ಯರು ಕರಾಳ ದಿನಾಚರಣೆ ಮಾಡಿದರು. ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ಪ್ರತಿಭಟನಾ ರೂಪದಲ್ಲಿ ಮೆರವಣಿಗೆ ನಡೆಸಿದರು. ಆದರೆ, ಗೋಗರೆದು ಕರೆದ ಮೇಲೂ ಮಹಾರಾಷ್ಟ್ರದ ಯಾವೊಬ್ಬ ನಾಯಕ ಕೂಡ ಬರುವ ಧೈರ್ಯ ಮಾಡಲಿಲ್ಲ. ಇದರಿಂದ ಎಂಇಎಸ್ ಮುಖಂಡರು ಮುಖಭಂಗ ಅನುಭವಿಸಿದರು.
ಇಲ್ಲಿನ ಧರ್ಮವೀರ ಸಂಭಾಜಿ ಮಹಾರಾಜ ಉದ್ಯಾನ ಬಳಿ, ಎಂಇಎಸ್ ಸದಸ್ಯರು ಕಪ್ಪುಬಟ್ಟೆ ಧರಿಸಿ ಸೈಕಲ್‌ಗಳನ್ನು ಏರಿ ಬಂದರು. ‘ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಕಾರವಾರ ಸಗಳ ಸಯುಂಕ್ತ ಮಹಾರಾಷ್ಟ್ರ ಝಾಲಾಚ್ ಪಾಹಿಜೆ (ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು)’ ಎಂದು ಘೋಷಣೆ ಕೂಗಿದರು.
‘ರಹೇಂಗೆ ತೋ ಮಹಾರಾಷ್ಟ್ರ ಮೇ ನಹಿ ತೋ ಜೈಲ್ ಮೇ (ಇದ್ದರೆ ಮಹಾರಾಷ್ಟ್ರದಲ್ಲಿ ಇಲ್ಲದಿದ್ದರೆ ಜೈಲಿನಲ್ಲಿ)’, ಬೆಳಗಾಂವ ಹಮ್ಚಾ ಹಕ್ಕಾಚಾ (ಬೆಳಗಾವಿ ನಮ್ಮ ಹಕ್ಕು) ಮುಂತಾದ ಘೋಷಣೆಗಳನ್ನು ನಿರಂತರ ಕೂಗಿದರು. ಪುಟಾಣಿ ಮಕ್ಕಳಿಗೂ ಕಪ್ಪು ಬಟ್ಟೆ ಹಾಕಿ ಮೆರವಣಿಗೆಯಲ್ಲಿ ಕರೆತಂದರು.
ಸಂಭಾಜಿ ಉದ್ಯಾನದಿಂದ ಆರಂಭವಾದ ಮೆರವಣಿಗೆ ತಹಶೀಲ್ ಗಲ್ಲಿ, ಬಾಂಧೂರ ಗಲ್ಲಿ, ಪಾಟೀಲ ಗಲ್ಲಿ, ಎಸ್‌ಪಿಎಂ ರಸ್ತೆ, ಹೊಸೂರು, ಶಾಸ್ತ್ರೀ ನಗರ, ಶಹಾಪುರದ ಕಚೇರಿ ಗಲ್ಲಿ, ಮೀರಾಪುರ ಗಲ್ಲಿ, ಶಹಾಪುರದ ಖಡೇಬಜಾರ್, ರೈಲ್ವೆ ಮೇಲ್ಸೇತುವೆ ಮೂಲಕ ಸಾಗಿ ಮರಾಠ ಮಂದಿರ ಬಳಿ ಮುಕ್ತಾಯವಾಯಿತು.
ಮರಾಠ ಮಂದಿರದಲ್ಲಿ ಸಮಾವೇಶ ನಡೆಸಿದ ಎಂಇಎಸ್ ಮುಖಂಡರು, ಕರ್ನಾಟಕದ ವಿರುದ್ಧ ಘೋಷಣೆ ಮೊಳಗಿಸಿದರು. ಉಸಿರು ಇರುವವರೆಗೂ ಹೋರಾಟ ಜೀವಂತ ಇಡುವುದಾಗಿ ಪ್ರತಿಜ್ಞೆ ಮಾಡಿದರು.
ಮಾರ್ಗದುದ್ದಕ್ಕೂ ಪೊಲೀಸರು ಸರ್ಪಗಾವಲು ಮಾಡಿದರು. ಇಡೀ ದಿನ ಕರಾಳ ದಿನ ಮಾಡುವುದಾಗಿ ಘೋಷಣೆ ಮಾಡಿದ್ದ ಮುಖಂಡರು; ಕನ್ನಡಿಗರ ಮೆರವಣಿಗೆಯ ಆರ್ಭಟ ನೋಡಿ ಒಂದೇ ತಾಸಿನಲ್ಲಿ ಮನೆಯತ್ತ ಕಾಲ್ಕಿತ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.