ಬೆಳಗಾವಿ: ಸಾರ್ವಜನಿಕ ಸ್ಥಳಗಳು ಹಾಗೂ ಅಂಗಡಿ–ಮುಂಗಟ್ಟುಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಸಬೇಕೆಂಬ ರಾಜ್ಯ ಸರ್ಕಾರದ ಆದೇಶ ವಿರೋಧಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.
‘ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ, ಖಾನಾಪುರ ಮಹಾರಾಷ್ಟ್ರಕ್ಕೆ ಸೇರಲೇಬೇಕು’ ಎಂದು ಘೋಷಣೆ ಕೂಗಿದ ಪ್ರತಿಭಟನಕಾರರು, ‘ಗಡಿಭಾಗದಲ್ಲಿ ಮರಾಠಿ ಭಾಷಿಕರ ಮೇಲೆ ಸರ್ಕಾರ ಮಾಡುತ್ತಿರುವ ಅನ್ಯಾಯ ನಿಲ್ಲಿಸಬೇಕು. ನಾಮಫಲಕದಲ್ಲಿ ಕನ್ನಡ ಕಡ್ಡಾಯ ಆದೇಶ ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.
ಮಾಜಿ ಶಾಸಕ ಮನೋಹರ ಕಿಣೇಕರ, ‘ಬೆಳಗಾವಿಯು ಕರ್ನಾಟಕದ ಭಾಗವಲ್ಲ. ನಾವು ಈ ರಾಜ್ಯದಲ್ಲಿ ಇರುವುದಕ್ಕೆ ಬಯಸುವುದಿಲ್ಲ. ಬೆಳಗಾವಿ ಸೇರಿದಂತೆ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು 2004ರಲ್ಲಿ ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ವಿಚಾರಣೆ ಹಂತದಲ್ಲಿರುವ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ಇತ್ಯರ್ಥವಾಗುವವರೆಗೆ ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕೆಂಬ ಆದೇಶ ಅನುಷ್ಠಾನಗೊಳಿಸಬಾರದು. ಮರಾಠಿಗರಿಗೆ ತೊಂದರೆ ಕೊಡುತ್ತಿರುವ ಕನ್ನಡ ಸಂಘಟನೆಗಳ ವಿರುದ್ಧ ಜ.25ರೊಳಗೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಉಗ್ರಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ಕೊಟ್ಟರು.
ರಮಾಕಾಂತ ಕೊಂಡೂಸ್ಕರ್, ಮಾಲೋಜಿ ಅಷ್ಟೇಕರ್, ರಂಜೀತ್ ಚವ್ಹಾಣಪಾಟೀಲ, ಶಿವಾಜಿ ಸುಂಠಕರ, ರವಿ ಸಾಳುಂಕೆ, ವಿಕಾಸ ಕಲಘಟಗಿ ಇತರರಿದ್ದರು.
‘ಕನ್ನಡ ಕಡ್ಡಾಯ ಮಾಡಲು ಎಂಇಎಸ್‌ನ ಅನುಮತಿ ಪಡೆಯಬೇಕೇ?’
ಎಂಇಎಸ್‌ನವರು ಪ್ರತಿಭಟನೆ ನಡೆಸುತ್ತಿರುವಾಗಲೇ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿದ ಕರುನಾಡು ವಿಜಯಸೇನೆ ಕಾರ್ಯಕರ್ತರು, ಎಂಇಎಸ್ ವಿರುದ್ಧ ಹರಿಹಾಯ್ದರು.
ಮುಖಂಡ ಸಂಪತಕುಮಾರ ದೇಸಾಯಿ, ‘ಇಷ್ಟು ದಿನ ಸುಮ್ಮನಿದ್ದ ಎಂಇಎಸ್‌ನವರು ಮತ್ತೆ ಈಗ ಕ್ಯಾತೆ ತೆಗೆದಿದ್ದಾರೆ. ನಾಮಫಲಕದಲ್ಲಿ ಆದ್ಯತೆ ಮೇಲೆ ಕನ್ನಡ ಬಳಸಬೇಕೆಂಬ ನಿಯಮ ವಿರೋಧಿಸುತ್ತಿದ್ದಾರೆ. ಕನ್ನಡ ನಾಮಫಲಕಗಳಿರುವ ಅಂಗಡಿಗಳಲ್ಲಿ ಮರಾಠಿಗರು ಏನೂ ಖರೀದಿಸಬಾರದೆಂದು ಹೇಳುತ್ತಿದ್ದಾರೆ. ಅವರ ವಿರುದ್ಧ ಕ್ರಮವಾಗಬೇಕು’ ಎಂದು ಒತ್ತಾಯಿಸಿದರು.
‘ನಾವು ಮರಾಠಿ ವಿರೋಧಿಗಳಲ್ಲ. ಆದರೆ, ಎಂಇಎಸ್‌ನವರ ಪುಂಡಾಟವನ್ನು ಇನ್ನೂ ಸಹಿಸುವುದಿಲ್ಲ’ ಎಂದು ಎಚ್ಚರಿಕೆ ಕೊಟ್ಟರು.
‘ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಮಾಡಲು ಎಂಇಎಸ್‌ನ ಅನುಮತಿ ಪಡೆಯಬೇಕೇ? ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.