ADVERTISEMENT

ಬೆಳಗಾವಿ: ಗ್ರಾ.ಪಂ ಕಟ್ಟಡಕ್ಕೆ ಪೆಟ್ರೋಲ್‌ ಬಾಂಬ್ ಎಸೆದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 6:37 IST
Last Updated 9 ನವೆಂಬರ್ 2024, 6:37 IST
<div class="paragraphs"><p>ಬಾಂಬ್‌ ದಾಳಿಯಿಂದ ಹಾನಿಗೀಡಾಗಿರುವುದು</p></div>

ಬಾಂಬ್‌ ದಾಳಿಯಿಂದ ಹಾನಿಗೀಡಾಗಿರುವುದು

   

–ಪ್ರಜಾವಾಣಿ ಚಿತ್ರ

ಬೆಳಗಾವಿ: ತಾಲ್ಲೂಕಿನ ಕಲಕಾಂಬ ಗ್ರಾಮ ಪಂಚಾಯಿತಿ ಕಟ್ಟಡದೊಳಗೆ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಎಸೆದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಕಚೇರಿಯೊಳಗಿನ ಕೆಲ ಪೀಠೋಪಕರಣಗಳಿಗೆ ಹಾನಿಯಾಗಿದೆ. ಸಿಸಿಟಿವಿ ಕ್ಯಾಮೆರಾ ಕೂಡ ಕಿತ್ತುಕೊಂಡು ಹೋಗಿದ್ದಾರೆ.

ADVERTISEMENT

ಘಟನೆ ಶನಿವಾರ ಬೆಳಿಗ್ಗೆಯೇ ಜನರಿಗೆ ಗೊತ್ತಾಗಿದೆ. ಬಿಯರ್‌ ಬಾಟಲಿಯಲ್ಲಿ ಪೆಟ್ರೋಲ್‌ ತುಂಬಿ, ಅದಕ್ಕೆ ಬೆಂಕಿ ಹಚ್ಚಿ ಗ್ರಾಮ ಪಂಚಾಯಿತಿ ಕಟ್ಟಡದ ಕಿಟಕಿಗೆ ಎಸೆಯಲಾಗಿದೆ. ಕಿಟಕಿಗೆ ಹೊತ್ತಿಕೊಂಡ ಬೆಂಕಿ ಕೆಲ ನಿಮಿಷಗಳ ಬಳಿಕ ತಾನಾಗಿಯೇ ನಂದಿದೆ. ಅದರ ಪಕ್ಕದಲ್ಲಿ ಟೇಬಲ್‌, ಕುರ್ಚಿಗಳೊಗೆ ಹಾನಿಯಾಗಿದೆ. ಯಾವುದೇ ದಾಖಲೆಗಳು ಸುಟ್ಟಿಲ್ಲ.

ಈ ಗ್ರಾಮ ಸಚಿವ ಸತೀಶ ಜಾರಕಿಹೊಳಿ ಅವರು ಪ್ರತಿನಿಧಿಸುವ ಯಮಕನಮರಡಿ ವಿಧಾನಸಭಾ ಕ್ಷೇತ್ರ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಅವರ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ.

ಸಂಸದೆ ಪ್ರಿಯಾಂಕಾ ಅವರು ಶುಕ್ರವಾರ ಗ್ರಾಮಕ್ಕೆ ಬಂದು ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಗ್ರಾಮದ ಒಂದು ಗುಂಪು ಅವರನ್ನು ಆಹ್ವಾನಿಸಿತ್ತು. ಸಂಸದೆಯನ್ನು ಗ್ರಾಮದ ವಾಲ್ಮೀಕಿ ಗಲ್ಲಿಗೂ ಕರೆದುಕೊಂಡು ಬರಬೇಕು ಎಂದು ಇನ್ನೊಂದು ಗುಂಪು ಒತ್ತಾಯ ಮಾಡಿತ್ತು. ಈ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಗಲಾಟೆ ಕೂಡ ನಡೆದಿತ್ತು. ಗ್ರಾಮ ಪಂಚಾಯಿತಿಗೆ ಪೆಟ್ರೋಲ್‌ ಬಾಂಬ್‌ ಎಸೆದ ಘಟನೆಗೂ ಇದಕ್ಕೂ ಸಂಬಂಧವಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮಾರಿಹಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.