ಬೆಳಗಾವಿ: ‘ಬಿಜೆಪಿಯವರಂತೆ ನಾವ್ಯಾರೂ ದ್ವೇಷ ರಾಜಕಾರಣ ಮಾಡಿಲ್ಲ. ಅವರು ಎಷ್ಟು ಜನರಿಗೆ, ಎಷ್ಟು ಹಿಂಸೆ ಕೊಟ್ಟಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಇದಕ್ಕೆ ನಾನೇ ದೊಡ್ಡ ಸಾಕ್ಷಿ’ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
‘ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂಬ ಸಂಸದ ಜಗದೀಶ ಶೆಟ್ಟರ್ ಹೇಳಿಕೆಗೆ, ಪ್ರತಿಕ್ರಿಯಿಸಿದ ಅವರು, ‘ಇಡೀ ದೇಶದಲ್ಲಿ ವಿರೋಧ ಪಕ್ಷದವರ ವಿರುದ್ಧ ಬಿಜೆಪಿಯವರು ದ್ವೇಷದ ರಾಜಕಾರಣ ನಡೆಸಿದ್ದಾರೆ. ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕನಾದರೂ ನಾಲ್ಕು ವರ್ಷಗಳಿಂದ ನನ್ನೂರು ಮತ್ತು ಕ್ಷೇತ್ರಕ್ಕೆ ಹೋಗಿಲ್ಲ. ಯಾವುದೇ ಕೆಲಸಕ್ಕಾಗಿ ಕ್ಷೇತ್ರದ ಜನ ಬೆಳಗಾವಿಗೆ ಬಂದು ನಿಲ್ಲುವ ಪರಿಸ್ಥಿತಿ ಇದೆ. ಇದು ದ್ವೇಷ ರಾಜಕಾರಣದ ಫಲ’ ಎಂದರು.
‘ಶಾಸಕ ಮುನಿರತ್ನ ಅವರ ವಿಚಾರದಲ್ಲಿ ನಾವೇನು ದ್ವೇಷದ ರಾಜಕಾರಣ ಮಾಡಿದ್ದೇವೆ. ಅವರು ಸ್ವತಃ ಕೀಳಾಗಿ ಮಾತನಾಡಿ, ಈ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಅವರು ಮಾಡಿದ್ದು ತಪ್ಪು’ ಎಂದು ತಿಳಿಸಿದರು.
ಮುನಿರತ್ನ ವಿರುದ್ಧ ಎಚ್‌ಐವಿ ಚುಚ್ಚುಮದ್ದಿನ ಆರೋಪ ಕೇಳಿಬಂದಿರುವ ಕುರಿತು ಪ್ರತಿಕ್ರಿಯಿಸಿದ ವಿನಯ, ‘ಈಗ ರಾಜಕೀಯ ವ್ಯವಸ್ಥೆ ಸಂಪೂರ್ಣ ವ್ಯಾಪಾರ ಆಗಿದೆ. ರಾಜಕಾರಣಿಗಳ ಜತೆಗೆ, ಜನರೂ ವ್ಯಾಪಾರಿ ಭಾವ ಬೆಳೆಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮರ್ಯಾದೆಗೆ ಹೆದರಿ, ಜನರು ಬದುಕುತ್ತಾರೆ. ಆದರೆ, ಬೆಂಗಳೂರಿನಂಥ ಮಹಾನಗರಗಳಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಒಳ್ಳೆಯವರು ಮತ್ತು ಕೆಟ್ಟವರು ಯಾರು ಎಂಬುದನ್ನು ನೋಡಿ, ಜನ ಆಯ್ಕೆ ಮಾಡಬೇಕು’ ಎಂದರು.
‘ಪಂಚಮಸಾಲಿಗರ ಮೀಸಲಾತಿ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿಗಳ ಬಳಿ ನಾಲ್ಕೈದು ಬಾರಿ ಸಮಯ ಕೇಳಿದ್ದೆವು. ಗದ್ದಲ ನಡೆದಿದ್ದರಿಂದ ಸಮಯ ಸಿಕ್ಕಿಲ್ಲ. ವಾರದ ನಂತರ ಬಸವಜಯ ಮೃತ್ಯುಂಜಯ ಶ್ರೀಗಳ ಜತೆ ಭೇಟಿ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.