ADVERTISEMENT

ಸಮಸ್ಯೆಗೆ ಸ್ಪಂದಿಸಲು ಶಿಕ್ಷಕನೇ ಆಗಬೇಕಿಲ್ಲ: ಪ್ರಕಾಶ ಹುಕ್ಕೇರಿ ಅಭಿಮತ

ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ

ಇಮಾಮ್‌ಹುಸೇನ್‌ ಗೂಡುನವರ
Published 9 ಜೂನ್ 2022, 12:51 IST
Last Updated 9 ಜೂನ್ 2022, 12:51 IST
ಪ್ರಕಾಶ ಹುಕ್ಕೇರಿ
ಪ್ರಕಾಶ ಹುಕ್ಕೇರಿ   

ಬೆಳಗಾವಿ: ಶಿಕ್ಷಕರ ಸಮಸ್ಯೆಗಳು ಸಾಕಷ್ಟಿವೆ. ನಾನು ಆಯ್ಕೆಯಾದರೆ ಅವುಗಳನ್ನೆಲ್ಲ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಶಿಕ್ಷಕರ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುತ್ತೇನೆ...

ವಿಧಾನ ಪರಿಷತ್‌ ಚುನಾವಣೆಯ ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡ ಮಾತುಗಳಿವು. ಶಿಕ್ಷಕರ ಸಮಸ್ಯೆ ನೀಗಿಸಲು ಶಿಕ್ಷಕನೇ ಆಗಬೇಕೆಂದೇನಿಲ್ಲ. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವವರು ಬೇಕು ಎಂದರು. ಅವರ ಸಂದರ್ಶನದ ಆಯ್ದ ಪ್ರಶ್ನೋತ್ತರಗಳು ಇಲ್ಲಿವೆ.

* ನಿಮ್ಮ ಪಕ್ಷದಲ್ಲಿ ಒಗ್ಗಟ್ಟು ಹೇಗಿದೆ?
–ವಿಧಾನ ಪರಿಷತ್‌ ಚುನಾವಣೆಯನ್ನು ಕಾಂಗ್ರೆಸ್‌ನ ಎಲ್ಲ ನಾಯಕರೂ ಒಗ್ಗಟ್ಟಿನಿಂದಲೇ ಎದುರಿಸುತ್ತಿದ್ದೇವೆ. ಎಲ್ಲರೂ ಸೇರಿ ಟಿಕೆಟ್‌ ಕೊಟ್ಟಿದ್ದಾರೆ. ಎಲ್ಲರೂ ಗೆಲ್ಲಿಸಲುಪ್ರಯತ್ನಿಸುತ್ತಿದ್ದಾರೆ. ಯಾವುದೇ ಗೊಂದಲವಿಲ್ಲ.

* ಪಕ್ಷೇತರ ಅಭ್ಯರ್ಥಿ ಎನ್‌.ಬಿ.ಬನ್ನೂರ ಸ್ಪರ್ಧೆಯಿಂದ ಕಾಂಗ್ರೆಸ್‌ ಮತಗಳು ವಿಭಜನೆಯಾಗುತ್ತವೆಯೇ?
–ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್‌ ಮತಗಳು ಗಟ್ಟಿಯಾಗಿರುತ್ತವೆ. ಈ ಹಿಂದೆಯೂ ವಿಭಜನೆ ಆಗಿಲ್ಲ, ಈಗಲೂ ಆಗುವುದಿಲ್ಲ, ಮುಂದಿನ ಚುನಾವಣೆಗಳಲ್ಲೂ ಮತಗಳು ಹಂಚಿಹೋಗುವ ಭಯ ನಮಗೆ ಇಲ್ಲ. ಹಾಗಾಗಿ, ಬನ್ನೂರ ಸ್ಪರ್ಧೆಯಿಂದ ನಮಗೇನೂ ಹಿನ್ನಡೆ ಆಗುವುದಿಲ್ಲ.

* ನೀವು ಶಿಕ್ಷಕರೇ ಅಲ್ಲ, ಹೆಚ್ಚು ಓದಿದವರಲ್ಲ...ಎಂದು ವಿರೋಧ ಪಕ್ಷದವರು ಟೀಕಿಸುತ್ತಿದ್ದಾರಲ್ಲ?
– ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದವರ ಪೈಕಿ ಬಹುತೇಕರು ಶಿಕ್ಷಕರೇ ಅಲ್ಲ. ನನಗಿರುವ ಮಾಹಿತಿ ಪ್ರಕಾರ,ಹಾಲಿ ಸದಸ್ಯ ಬಸವರಾಜ ಹೊರಟ್ಟಿ ಸೇರಿ ಒಂದಿಬ್ಬರು ಶಿಕ್ಷಕರಷ್ಟೇ ಚುನಾಯಿತರಾಗಿದ್ದಾರೆ. ಹಾಗಾಗಿ, ವಿರೋಧ ಪಕ್ಷದವರು ಮಾಡಿದ ಆರೋಪಕ್ಕೆ ತಲೆಬಾಗಲು ಆಗುವುದಿಲ್ಲ. ಇಷ್ಟಕ್ಕೂ, ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಯಾವ ಶಾಲೆಯಲ್ಲಿ ಕೆಲಸ ಮಾಡಿದ್ದಾರೆ? ಅವರೇನು ಶಿಕ್ಷಕರಾ? ನಾನು ಶಿಕ್ಷಕನಲ್ಲದಿರಬಹುದು. ಆದರೆ, ಅವರ ಸಮಸ್ಯೆಗೆ ಧ್ವನಿಯಾಗುತ್ತೇನೆ. ಈ ಹಿಂದೆ ಶಾಸಕ ಹಾಗೂ ಸಂಸದನಿದ್ದಾಗ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಈಗ ಶಿಕ್ಷಕರ ಸೇವೆ ಮಾಡುವುದಕ್ಕಾಗಿಯೇ ಮೇಲ್ಮನೆ ಚುನಾವಣೆಗೆ ಸ್ಪರ್ಧಿಸಿದ್ದೇನೆ.

*ಶಿಕ್ಷಕರ ಕ್ಷೇತ್ರ ನಿಮಗೆ ಹೊಸದು, ಮತದಾರರನ್ನು ಹೇಗೆ ಸೆಳೆಯುತ್ತೀರಿ?
– ರಾಜಕಾರಣದಲ್ಲಿ ದಶಕಗಳ ಅನುಭವವಿದೆ. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಚಾರ ಕೈಗೊಂಡ ವೇಳೆ ಮತದಾರರು ನನ್ನನ್ನು ಕಂಡು ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನ ಮತದಾರರಂತೂ ನನ್ನ ಬೆನ್ನಿಗೇ ಇದ್ದಾರೆ.

* ಶಿಕ್ಷಕರಿಗೆ ನಿಮ್ಮ ಭರವಸೆಗಳೇನು?‌‌
–ನನ್ನನ್ನು ಆಯ್ಕೆ ಮಾಡಿದರೆ ಶಿಕ್ಷಕರನ್ನು ಎಂದೂ ಕೈಬಿಡುವುದಿಲ್ಲ. ಪ್ರತಿಯೊಬ್ಬರ ಸಂಕಷ್ಟಕ್ಕೂ ಸ್ಪಂದಿಸುತ್ತೇನೆ. ಎನ್‌ಪಿಎಸ್‌ ರದ್ದು ಮಾಡಿ ಒ‍ಪಿಎಸ್‌ ಜಾರಿ ಮಾಡಬೇಕು ಎಂಬುದು ಶಿಕ್ಷಕರ ಮುಖ್ಯ ಬೇಡಿಕೆ. ಇದಕ್ಕೆ ಶ್ರಮಿಸುತ್ತೇನೆ. ಕೇಂದ್ರದ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಶ್ರೇಣಿ ಜಾರಿ ಮಾಡಲು ಸರ್ಕಾರದ ಮಟ್ಟದಲ್ಲಿ ಹೋರಾಡುತ್ತೇನೆ. ಪ್ರತಿ ತಾಲ್ಲೂಕಿಗೂ ಒಂದು ಶಿಕ್ಷಕರ ಭವನ ನಿರ್ಮಿಸುವುದು ನನ್ನ ಕನಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.