ADVERTISEMENT

500 ವರ್ಷಗಳ ಕನಸು ನನಸಾಗಿಸಿದ ಮೋದಿ- ಅಣ್ಣಾಸಾಹೇಬ ಜೊಲ್ಲೆ

ಪ್ರಚಾರ ಸಮಾವೇಶ: ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 13:56 IST
Last Updated 12 ಏಪ್ರಿಲ್ 2024, 13:56 IST
ಅಥಣಿಯಲ್ಲಿ ನಡೆದ ಅಣ್ಣಾಸಾಹೇಬ ಜೊಲ್ಲೆ ಪರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಅವರೊಂದಿಗೆ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು
ಅಥಣಿಯಲ್ಲಿ ನಡೆದ ಅಣ್ಣಾಸಾಹೇಬ ಜೊಲ್ಲೆ ಪರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಅವರೊಂದಿಗೆ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು   

ಅಥಣಿ: ‘ಜಾತಿ– ಮತದ ವಿಷಬೀಜ ಬಿತ್ತುವ ಮೂಲಕ ಕಾಂಗ್ರೆಸ್ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಇದಕ್ಕೆ ಈ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು’ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಪವಾಡ ಪುರುಷ ಇದ್ದಂತೆ. 500 ವರ್ಷಗಳಿಂದ ಲಕ್ಷಾಂತರ ಕರಸೇವಕರು ಪ್ರಾಣ ಬಿಟ್ಟಿದ್ದು ರಾಮ ಮಂದಿರಕ್ಕಾಗಿ. ಎಲ್ಲ ಅಡೆತಡೆಗಳನ್ನು ಮೀರಿ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದರು’ ಎಂದರು.

‘ಕಳೆದ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ ನನಗೆ 1.11 ಲಕ್ಷ ಮತಗಳ ಲೀಡ್‌ ಸಿಕ್ಕಿದೆ. ಈ ಚುನಾವಣೆಯಲ್ಲಿಯೂ ಆಶೀರ್ವಾದ ಮಾಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಅಥಣಿ ಕ್ಷೇತ್ರದಲ್ಲಿ ಪಿ.ಎಂ.ಜಿ.ಎಸ್.ವೈ ಯೋಜನೆಯಡಿ ₹25 ಕೋಟಿ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆ ನಿರ್ಮಾಣಕ್ಕೆ ಅನುದಾನ, ₹2.97 ಕೋಟಿ ಅನುದಾನದಲ್ಲಿ ಆಂಬುಲೆನ್ಸ್, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಬಸ್ ಶೆಲ್ಟರ್, ಸಮುದಾಯ ಭವನ ನಿರ್ಮಾಣ ಮಾಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ₹4,480 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಝುಂಜರವಾಡದಲ್ಲಿ ₹1 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿ ಕೈಗೊಂಡಿದ್ದೇನೆ’ ಎಂದು ವಿವರಿಸಿದರು.

ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ‘ಅಣ್ಣಾಸಾಹೇಬ ಜೊಲ್ಲೆ ಅವರು ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮ ಅನುಷ್ಠಾನ ಗೊಳಿಸಿದ್ದಾರೆ. ಶಾಸಕ ರಮೇಶ ಜಾರಕಿಹೊಳಿ ಸಹಕಾರದಿಂದ ಸುಮಾರು ₹1,400 ಕೋಟಿ ಅನುದಾನದ ಅಮ್ಮಾಜೇಶ್ವರಿ ನೀರಾವರಿ ಯೋಜನೆ ನನ್ನ ಅಧಿಕಾರ ಅವಧಿಯಲ್ಲಿಯೇ ಮಂಜೂರಾಗಿದೆ. ಅಥಣಿ ಮತಕ್ಷೇತ್ರದಲ್ಲಿ ಎಲ್ಲ ಗ್ರಾಮಗಳಿಗೂ ರಸ್ತೆ, ಬಾಂದಾರ, ತಡೆಗೋಡೆ ನಿರ್ಮಿಸಲಾಗಿದೆ. ಈ ಅಭಿವೃದ್ಧಿ ನೋಡಿ ಮತ ನೀಡಿ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಅಪ್ಪಾಜಿಗೊಳ, ಜಿಲ್ಲಾ ಸಂಚಾಲಕ ರಾಜೇಶ ನೇರ್ಲಿ, ಜಿಲ್ಲಾ ವಿಭಾಗೀಯ ಪ್ರಭಾರಿ ಚಂದ್ರಶೇಖರ ಕವಟಗಿ, ಮಂಡಳ ಅಧ್ಯಕ್ಷ ರವಿ ಸಂಕ, ಜಿಲ್ಲಾ ಕಾರ್ಯದರ್ಶಿ ಪ್ರಭಾಕರ ಚವ್ಹಾಣ , ಮುಖಂಡರಾದ ಧರೆಪ್ಪ ಠಕ್ಕಣ್ಣವರ, ಸಿದ್ದಪ್ಪ ಮುದಕಣ್ಣವರ, ಅಪ್ಪಾಸಾಬ್‌ ಅವತಾಡೆ, ಸತ್ಯಪ್ಪ ಬಾಗೆನ್ನವರ, ಜಿನಗೌಡ ಪಾಟೀಲ, ಗಿರೀಶ ಬುಟಾಳಿ, ರವಿ ಪೂಜಾರಿ, ಅಭಜೀತ್‌ ಕೊಡಗ ಇತರರು ಇದ್ದರು.

ಅಥಣಿಯಲ್ಲಿ ನಡೆದ ಅಣ್ಣಾಸಾಹೇಬ ಜೊಲ್ಲೆ ಪರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡ ಜನ

ಬಿಜೆಪಿಯಲ್ಲಿದ್ದಾಗ ಲಕ್ಷ್ಮಣ ಸವದಿ ಅವರು ಡಿ.ಕೆ.ಶಿವಕುಮಾರ್‌ಗೆ ‘ಕರೆಂಟ್‌ ನೀಡಿ ಇಲ್ಲವೇ ಶೋಭಕ್ಕನ ಬಳೆ ಹಾಕೊಂಡು ಯಲ್ಲಮ್ಮನ ಜಾತ್ರೆಗೆ ಬನ್ನಿ’ ಎಂದಿದ್ದರು. ಈಗ ಅವರ ಪಕ್ಷದಲ್ಲೇ ಇದ್ದು ಬಳೆ ತೊಡಿಸುತ್ತಾರಾ? -ಮಹೇಶ ಕುಮಠಳ್ಳಿ ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.