ಬೆಳಗಾವಿ: 2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಸೂರ್ಯಕಾಂತಿ ಹಾಗೂ ಹೆಸರುಕಾಳು ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರೈತರ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
‘ಎಫ್‍ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಹಾಗೂ ಹೆಸರು ಖರೀದಿಸುವ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಾಫೆಡ್ ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿಯಾಗಿ ಹಾಗೂ ಬೆಂಗಳೂರಿನ ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತವನ್ನು (ಕೆಒಎಫ್) ರಾಜ್ಯ ಮಟ್ಟದ ಖರೀದಿ ಏಜೆನ್ಸಿಯನ್ನಾಗಿ ಗುರುತಿಸಲಾಗಿದೆ. ರಾಮದುರ್ಗ ಹಾಗೂ ಸವದತ್ತಿ ಟಿಎಪಿಸಿಎಂಎಸ್ ಲಿಮಿಟೆಡ್ 2 ಸೂರ್ಯಕಾಂತಿ ಖರೀದಿ ಕೇಂದ್ರ ಹಾಗೂ ರಾಮದುರ್ಗ, ಹುಲಕುಂದ, ಸವದತ್ತಿ, ಮುರಗೋಡ, ಯರಗಟ್ಟಿ, ಬೈಲಹೊಂಗಲ, ದೊಡವಾಡ ಸೇರಿ 7 ಹೆಸರು ಖರೀದಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ’ ಎಂದರು.
‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅಂದಾಜು 2,350 ಹೆಕ್ಟೇರ್ ಕ್ಷೇತ್ರದಲ್ಲಿ ಸೂರ್ಯಕಾಂತಿ ಹಾಗೂ ಅಂದಾಜು 39,500 ಹೆಕ್ಟೇರ್ ಕ್ಷೇತ್ರದಲ್ಲಿ ಹೆಸರು ಬಿತ್ತನೆಯಾಗಿದೆ. ಸೂರ್ಯಕಾಂತಿ ಅಂದಾಜು 47,000 ಹಾಗೂ ಹೆಸರು ಕಾಳು 2.48 ಲಕ್ಷ ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದೆ. ಅದೇ ಪ್ರಕಾರ ರಾಮದುರ್ಗ, ಸವದತ್ತಿ, ಯರಗಟ್ಟಿ ಹಾಗೂ ಬೈಲಹೊಂಗಲ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಆಗಿರುವುದರಿಂದ ಸದರಿ ಭಾಗಗಳಲ್ಲಿ ಹೆಚ್ಚಿನ ಆವಕ ಸಾಧ್ಯತೆ ಇದೆ’ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.
‘ರೈತರ ನೋಂದಣಿ ಕಾಲಾವಧಿಯನ್ನು 45 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿದೆ. ನೋಂದಣಿ ಕಾರ್ಯದ ಜೊತೆಗೇ ಖರೀದಿ ಪ್ರಕ್ರಿಯೆ ಸಹ ಪ್ರಾರಂಭಿಸಬೇಕು. ಪ್ರತಿ ರೈತರಿಂದ ಪ್ರತಿ ಎಕರೆಗೆ ಗರಿಷ್ಠ 3 ಕ್ವಿಂಟಲ್ ಹಾಗೂ ಗರಿಷ್ಠ 15 ಕ್ವಿಂಟಲ್ ಸೂರ್ಯಕಾಂತಿ ಹಾಗೂ ಪ್ರತಿ ಎಕರೆಗೆ ಕನಿಷ್ಠ 2 ಕ್ವಿಂಟಲ್ ಹಾಗೂ ಗರಿಷ್ಠ 10 ಕ್ವಿಂಟಲ್ ಹೆಸರುಕಾಳು ಖರೀದಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
‘ಖರೀದಿ ಸಂಸ್ಥೆಗಳು ಸುಭದ್ರವಾದ, ವ್ಯವಸ್ಥಿತ ಗೋದಾಮು ಹೊಂದಿರಬೇಕು. ನೋಂದಣಿ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಬಂದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಮತ್ತಿತರ ಇಲಾಖೆಗಳಲ್ಲಿ ಲಭ್ಯವಿರುವ ಸಿಬ್ಬಂದಿ ಬಳಸಿಕೊಳ್ಳಬೇಕು’ ಎಂದೂ ಸೂಚಿಸಿದರು.
‘ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಸೂರ್ಯಕಾಂತಿ ಹಾಗೂ ಹೆಸರು ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿ ಹಾಗೂ ಆವರ್ತ ನಿಧಿ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಪ್ರತಿದಿನ ವಿವರಗಳನ್ನು ಸರ್ಕಾರಕ್ಕೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಸಲ್ಲಿಸಬೇಕು’ ಎಂದು ತಾಕೀತು ಮಾಡಿದರು.
ಹೆಸರು ದರ ಕುಸಿತ ಹಾಗೂ ಖರೀದಿ ಕೇಂದ್ರದ ಅವಶ್ಯಕತೆ ಕುರಿತು ‘ಪ್ರಜಾವಾಣಿ’ ಆ.26ರಂದು ಬೆಳಕು ಚೆಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.