ಚನ್ನಮ್ಮನ ಕಿತ್ತೂರು: ತಾಲ್ಲೂಕಿನಲ್ಲಿ ಹೆಚ್ಚು ಪ್ರದೇಶ ವ್ಯಾಪಿಸಿಕೊಂಡಿದ್ದ ಪ್ರಮುಖ ವಾಣಿಜ್ಯ ಬೆಳೆ ಕಬ್ಬು ಈ ಬಾರಿ ಕಡಿಮೆಯಾಗಿದ್ದು, ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಸೋಯಾಬೀನ್ ಹೆಚ್ಚು ಬಿತ್ತನೆ ಮಾಡಲಾಗಿದೆ.
‘ಕಳೆದ ವರ್ಷ ಮಳೆ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕಡಿಮೆಯಾದ ಪರಿಣಾಮ ಕೊಳವೆಬಾವಿಗಳಲ್ಲಿ ನೀರು ಹೊರಗೆ ಎಸೆಯುವುದು ಕಡಿಮೆಯಾಯಿತು. ಕೆಲವು ಕೊಳವೆ ಬಾವಿಗಳು ನೀರು ಹೊರಚೆಲ್ಲವುದನ್ನು ನಿಲ್ಲಿಸಿದವು. ಹೀಗಾಗಿ ಕಬ್ಬು ಬೆಳೆಯ ಪ್ರದೇಶ ಕುಂಠಿತವಾಗಲು ಕಾರಣವಾಗಿದೆ’ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸುತ್ತವೆ.
ಕಬ್ಬು ಕಡಿಮೆಯಾಗಿದ್ದರಿಂದ ಸೋಯಾಬೀನ್, ಗೋವಿನಜೋಳ ಆ ಪ್ರದೇಶವನ್ನು ಆಕ್ರಮಿಸಿಕೊಂಡಿವೆ. ಸಕಾಲಕ್ಕೆ ಸರಿಯಾಗಿ ಮಳೆಯಾದರೆ ಬಂಪರ್ ಬೆಳೆ ಬರುವ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ.
ಹೆಚ್ಚಾದ ಸೋಯಾಬೀನ್
‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮುಂಗಾರು ಹಂಗಾಮಿನಲ್ಲಿ 2000 ಹೆಕ್ಟೇರ್ ಹೆಚ್ಚುವರಿ ಪ್ರದೇಶದಲ್ಲಿ ಸೋಯಾಬೀನ್ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ 5000 ಹೆಕ್ಟೇರ್ ಜಮೀನಿನಲ್ಲಿ ಸೋಯಾಬೀನ್ ಬಿತ್ತನೆ ಮಾಡಲಾಗಿತ್ತು’ ಎಂದು ಕಿತ್ತೂರು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಂಜುನಾಥ್ ಕೆಂಚರಾಹುತ ಮಾಹಿತಿ ನೀಡಿದರು.
‘ಸೋಯಾಬೀನ್ ನಂತರದ ಸ್ಥಾನವನ್ನು ಗೋವಿನಜೋಳ ಪಡೆದುಕೊಂಡಿದೆ. ಗೋವಿನಜೋಳದ ಕ್ಷೇತ್ರವೂ ಈ ಬಾರಿ ಹೆಚ್ಚಾಗಿದೆ. 4,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ’ ಎಂದು ತಿಳಿಸಿದರು.
ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ ಈ ಸಲ 2,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ. ಕಳೆದ ಸಲಕ್ಕೆ ಹೋಲಿಸಿದರೆ, ಸುಮಾರು 600 ರಿಂದ 700 ಹೆಕ್ಟೇರ್ ಪ್ರದೇಶ ಕಡಿಮೆಯಾದಂತಾಗಿದೆ.
ಕಡಿಮೆಯಾದ ಭತ್ತ
‘ಕಬ್ಬು ಮತ್ತು ಭತ್ತದ ನಾಡು ಎಂದು ಕರೆಯಿಸಿಕೊಂಡಿದ್ದ ಈ ಪ್ರದೇಶದಲ್ಲಿ ಭತ್ತ ಬೆಳೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕಡಿಮೆಯಾಗುತ್ತ ಬಂದಿದೆ. ಕಣ್ಣು ಹಾಯಿಸಿದೆಡೆ ಭತ್ತ ಬೆಳೆದ ಒಂದು ಕಾಲಕ್ಕೆ ನೋಡ ಸಿಗುತ್ತಿತ್ತು. ಆದರೆ ಈಗ ತೀರಾ ಕಡಿಮೆಯಾಗಿದೆ. ದೊಡಗ್ಯಾ ಸಾಳಿ ಇಂಟಾನ್ ದಂತಹ ಜವಾರಿ (ನಾಟಿ) ಬೀಜಗಳು ಬಹುತೇಕ ಮಾಯವಾಗಿವೆ’ ಎಂದು ರೈತ ನಿಂಗಪ್ಪ ದಾಮಣ್ಣವರ ತಿಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.