ADVERTISEMENT

ಕಬ್ಬು ಬೆಳೆಗೆ ಈ ವರ್ಷವೂ ಸಿಗದ ಸೂಕ್ತ ದರ: ಮಣ್ಣುಪಾಲಾದ ‘ಮಣ್ಣಿನ ಮಕ್ಕಳ’ ಕನಸು

ಇಮಾಮ್‌ಹುಸೇನ್‌ ಗೂಡುನವರ
Published 18 ನವೆಂಬರ್ 2024, 5:55 IST
Last Updated 18 ನವೆಂಬರ್ 2024, 5:55 IST
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಕಬ್ಬು ಕಟಾವು ಮಾಡುತ್ತಿರುವುದು    ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಕಬ್ಬು ಕಟಾವು ಮಾಡುತ್ತಿರುವುದು    ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಸಕ್ಕರೆ ಜಿಲ್ಲೆ’ಯ ರೈತರ ಬದುಕು ಮಾತ್ರ ಇನ್ನೂ ಸಿಹಿಯಾಗಿಲ್ಲ. ಎರಡು ದಶಕಗಳಿಂದಲೂ ಗೋಗರೆಯುತ್ತಲೇ ಬಂದಿರುವ ಬೇಡಿಕೆಗಳು ಇನ್ನೂ ಈಡೇರಿಲ್ಲ. ಕಬ್ಬಿಗೆ ರೋಗಬಾಧೆ, ಕೀಟಬಾಧೆ, ಕಟಾವು ಸಮಸ್ಯೆ, ಕಾರ್ಮಿಕರ ಕೊರತೆ, ಸಾಲದ ಭಾರ, ಹಂಗಾಮು ವಿಳಂಬ, ಸಂಚಾರ ತೊಂದರೆ, ಕಬ್ಬು ಒಣಗುವ ಚಿಂತೆ... ಹೀಗೆ ವರ್ಷವಿಡೀ ಚಿಂತೆಗಳಲ್ಲೇ ಮುಳುಗುವುದು ಅನಿವಾರ್ಯವಾಗಿದೆ. ಇದೆಲ್ಲ ಮುಗಿಸಿ ಹೇಗೋ ಬೆಳೆಯನ್ನು ಕಾರ್ಖಾನೆಗಳಿಗೆ ಸಾಗಿಸಿದ ಬಳಿಕವೂ ಸಮಸ್ಯೆ ತೀರುವುದಿಲ್ಲ. ಬಿಲ್‌ಗಾಗಿ ಮತ್ತೆ ಕಾರ್ಖಾನೆಗಳಿಗೆ ಅಲೆದಾಡಬೇಕು. ಉಪವಾಸ ಬಿದ್ದು ಹೋರಾಡಬೇಕು...

ಇಷ್ಟೆಲ್ಲ ಕುಂದು–ಕೊರತೆಗಳ ಮಧ್ಯೆಯೂ ಈಗ ಮತ್ತೊಂದು ಹಂಗಾಮು ಆರಂಭವಾಗಿದೆ. ಈ ಬಾರಿಯೂ ಮಣ್ಣಿನ ಮಕ್ಕಳ ಬೇಡಿಕೆಗಳು ಮಣ್ಣುಪಾಲಾಗಿವೆ.

ಜಿಲ್ಲೆಯಲ್ಲಿ 29 ಸಕ್ಕರೆ ಕಾರ್ಖಾನೆಗಳಿವೆ. ಬಹುಪಾಲು ಕಾರ್ಖಾನೆಗಳೂ ಹಂಗಾಮು ಆರಂಭಿಸಿವೆ. ಆದರೆ, ಇನ್ನೂ ಚುರುಕು ಪಡೆದಿಲ್ಲ.

ADVERTISEMENT

ಕಟಾವಿಗೆ ವರುಣ ಅಡ್ಡಿ:

‘ಈ ವರ್ಷ ನವೆಂಬರ್‌ ಮೂರನೇ ವಾರ ಬಂದರೂ ಮಳೆ ನಿಲ್ಲುತ್ತಿಲ್ಲ. ಹಾಗಾಗಿ ಕೃಷಿಭೂಮಿ ಇನ್ನೂ ಹಸಿ ಇದೆ. ಕೃಷಿಭೂಮಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಕೆಸರಾಗಿದೆ. ಹಾಗಾಗಿ ಕಟಾವಿಗಾಗಿ ಭೂಮಿ ಆರುವುದನ್ನು ಕಾಯುತ್ತಿದ್ದೇವೆ. ಪ್ರತಿವರ್ಷ ದೀಪಾವಳಿ ಹಬ್ಬದಲ್ಲೇ ಕಟಾವು ಆರಂಭಿಸುತ್ತಿದ್ದೆವು. ಈ ಬಾರಿ ಇನ್ನೂ ಆರಂಭಿಸಿಲ್ಲ’ ಎಂದು ತಾಲ್ಲೂಕಿನ ಸಾಂಬ್ರಾದ ರೈತ ಪ್ರಕಾಶ ಗಿರಿಮಲ್ಲ ಹೇಳಿದರು.

ನ್ಯಾಯ ಸಿಗೋದು ಯಾವ್ಯಾಗ?:

‘ಕೇಂದ್ರ ಸರ್ಕಾರ 10.25 ಇಳುವರಿಯ ಪ್ರತಿ ಟನ್‌ ಕಬ್ಬಿಗೆ ಘೋಷಿಸಿದ  ₹3,400 ಎಫ್‌ಆರ್‌ಪಿ ನ್ಯಾಯಸಮ್ಮತವಾಗಿಲ್ಲ. ಮತ್ತೊಂದೆಡೆ ಕಾರ್ಖಾನೆಯಲ್ಲಿ ಕಬ್ಬಿನ ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ಕಬ್ಬಿನ ಉಪ ಉತ್ಪನ್ನಗಳಿಗೂ ಕಾರ್ಖಾನೆಗಳು ಹಣ ಕೊಡುತ್ತಿಲ್ಲ. ಹೀಗಿರುವಾಗ ನಮಗೆ ನ್ಯಾಯ ಸಿಗೋದು ಯಾವಾಗ?’ ಎಂಬುದು ಕಬ್ಬು ಬೆಳೆಗಾರರ ಪ್ರಶ್ನೆ.

‘ನಾನು 17 ಎಕರೆಯಲ್ಲಿ ಕಬ್ಬು ಬೆಳೆದಿದ್ದೇನೆ. ಸಕ್ಕರೆ ಕಾರ್ಖಾನೆಯವರು ನಮಗೆ ಪಾವತಿಸುವ ಬಿಲ್‌ನಲ್ಲಿ ಕಟಾವು, ಸಾಗಾಣಿಕೆ ವೆಚ್ಚ ಮುರಿದುಕೊಳ್ಳುತ್ತಾರೆ. ಆದರೆ, ನಮ್ಮ ಹೊಲದಲ್ಲಿ ಕಬ್ಬು ಕಡಿಯುತ್ತಿರುವ ಮಹಾರಾಷ್ಟ್ರದ ಕಾರ್ಮಿಕರು (ತೋಡ್ನಿ ಗ್ಯಾಂಗ್‌ನವರು) ಪ್ರತಿ ಟ್ರ್ಯಾಕ್ಟರ್‌ ಕಬ್ಬಿಗೆ (20ರಿಂದ 30 ಟನ್‌) ₹1,500 ಪಡೆಯುತ್ತಿದ್ದಾರೆ. ಹಂಗಾಮು ಚುರುಕು ಪಡೆದರೆ, ಕಟಾವು ದರ ಇನ್ನಷ್ಟು ದುಬಾರಿಯಾಗಲಿದೆ’ ಎಂದು ತಾಲ್ಲೂಕಿನ ಹಿರೇಬಾಗೇವಾಡಿಯ ರೈತ ರಘು ಪಾಟೀಲ ಹೇಳಿದರು.

ಮೂರೇ ಎಕರೆ ಬೆಳೆದಿದ್ದೇನೆ:

‘ನಮ್ಮಲ್ಲಿ ಕಬ್ಬು ಬೆಳೆದರೆ, ಮೊದಲ ವರ್ಷ ಉತ್ತಮ ಇಳುವರಿ (ಎಕರೆಗೆ 50 ಟನ್‌) ಬರುತ್ತದೆ. ಮಾರನೇ ವರ್ಷ ದೊಣ್ಣೆಹುಳು ಕಾಟದಿಂದ 20ರಿಂದ 25 ಟನ್‌ ಮಾತ್ರ ಬರುತ್ತಿದೆ. ಕಬ್ಬು ಕಟಾವು ಗ್ಯಾಂಗ್‌ನವರು ಹೆಚ್ಚಿನ ಹಣ ಕೊಟ್ಟವರ ಕಬ್ಬನ್ನೇ ಮೊದಲು ಕತ್ತರಿಸುತ್ತಾರೆ. ಕಳೆದ ವರ್ಷ ಎಂಟು ಎಕರೆಯಲ್ಲಿ ಕಬ್ಬು ಬೆಳೆದಿದ್ದೆ. ಈ ವರ್ಷ ಮೂರೇ ಎಕರೆಯಲ್ಲಿ ಬೆಳೆದಿದ್ದೇನೆ’ ಎನ್ನುತ್ತಾರೆ ಬೈಲಹೊಂಗಲ ತಾಲ್ಲೂಕಿನ ವಕ್ಕುಂದದ ರೈತ ಉಳವಪ್ಪ ಭದ್ರಶೆಟ್ಟಿ.ಪ್ರಕಾಶ ಗಿರಿಮಲ್ಲ ರೈತ ಸಾಂಬ್ರಾ

ಬೆಳಗಾವಿ ತಾಲ್ಲೂಕಿನ ಕಂಗ್ರಾಳಿ ಖುರ್ದ್‌ ಬೆಳೆದಿರುವ ಕಬ್ಬು 
ಬೆಳಗಾವಿ ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ಇನ್ನೂ ಆರಂಭವಾಗದ ಆಲೆಮನೆ
ಮಹಾರಾಷ್ಟ್ರದಲ್ಲಿ ಕಬ್ಬಿಗೆ ₹3300 ನೀಡುತ್ತಾರೆ. ನಿಗದಿತ ಸಮಯಕ್ಕೆ ಬಿಲ್‌ ಕೈಸೇರುತ್ತದೆ. ಹಾಗಾಗಿ ಕಬ್ಬನ್ನು ಅಲ್ಲಿನ ಕಾರ್ಖಾನೆಗೆ ಸಾಗಿಸುತ್ತೇನೆ
ಪ್ರಕಾಶ ಗಿರಿಮಲ್ಲ ರೈತ ಸಾಂಬ್ರಾ
ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಈ ವರ್ಷ ತೂಕದ ಯಂತ್ರಗಳನ್ನು ಅಳವಡಿಸುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಇನ್ನೂ ಅನುಷ್ಠಾನವಾಗಿಲ್ಲ
ಉಳವಪ್ಪ ಭದ್ರಶೆಟ್ಟಿ ರೈತ ವಕ್ಕುಂದ
ಗುಜರಾತ್‌ ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಕಬ್ಬಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗಿದೆ. ಹೀಗಿರುವಾಗ ಕರ್ನಾಟಕದವರಿಗೆ ಏಕೆ ಆಗುತ್ತಿಲ್ಲ
ಸಿದಗೌಡ ಮೋದಗಿ ರೈತ ಮುಖಂಡ ಬೆಳಗಾವಿ
ಜಿಲ್ಲೆಯಲ್ಲಿ 3.12 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿರುವ ಕಬ್ಬಿನ ಕಟಾವು ಪ್ರಕ್ರಿಯೆ ಆರಂಭವಾಗಿದೆ. ರೈತರ ಭೂಮಿಗಳಿಗೇ ತೆರಳಿ ರೈತರ ಸಮಸ್ಯೆ ಆಲಿಸಲಾಗುತ್ತಿದೆ
ಜಿಲ್ಲೆಯಲ್ಲಿ 3.12 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿರುವ ಕಬ್ಬಿನ ಕಟಾವು ಪ್ರಕ್ರಿಯೆ ಆರಂಭವಾಗಿದೆ. ರೈತರ ಭೂಮಿಗಳಿಗೇ ತೆರಳಿ ರೈತರ ಸಮಸ್ಯೆ ಆಲಿಸಲಾಗುತ್ತಿದೆ
ಸಕ್ಕರೆ ಕಾರ್ಖಾನೆಗಳು ಸಚಿವರು ಶಾಸಕರು ಮತ್ತು ಪ್ರಭಾವಿಗಳ ಹಿಡಿತದಲ್ಲೇ ಇವೆ. ಹಾಗಾಗಿ ರೈತರ ಮೇಲೆ ಎಷ್ಟೇ ಶೋಷಣೆಯಾದರೂ ನ್ಯಾಯ ಸಿಗುತ್ತಿಲ್ಲ
ಶಿವರುದ್ರಪ್ಪ ವೀರಭದ್ರಪ್ಪ ಕರವಿನಕೊಪ್ಪ ಎಂ.ಕೆ.ಹುಬ್ಬಳ್ಳಿಯ ರೈತ ಮುಖಂಡ

ಬೆಳೆಗಾರರ ಬೇಡಿಕೆಗಳೇನು?

* ಕಬ್ಬು ಕಟಾವಿಗೂ ಮುನ್ನ ದರ ಪರಿಷ್ಕರಣೆ ಮಾಡಬೇಕು.

* ಇದೇ ವರ್ಷ ಎಲ್ಲ ಕಾರ್ಖಾನೆಗಳಲ್ಲಿ ಸರ್ಕಾರಿ ತೂಕದ ಯಂತ್ರಗಳನ್ನು ಅಳವಡಿಸಬೇಕು.

* ತೋಡ್ನಿ ಗ್ಯಾಂಗ್‌ನವರ ಕೂಲಿ ಹಾಗೂ ಸಾರಿಗೆ ವೆಚ್ಚವನ್ನು ಮೊದಲೇ ನಿಗದಿಪಡಿಸಬೇಕು.

* ಕಬ್ಬು ಪೂರೈಸಿದ 15 ದಿನಗಳ ಒಳಗೆ ಸಕ್ಕರೆ ಕಾರ್ಖಾನೆಗಳು ಬಿಲ್‌ ಪಾವತಿಸಬೇಕು.

* ಬಿಲ್‌ ನೀಡಲು ಎಷ್ಟು ವಿಳಂಬ ಆಗುತ್ತದೆಯೋ ಅಷ್ಟು ತಿಂಗಳು ಬಡ್ಡಿ ನೀಡಬೇಕು.

* ಸಕಾಲಕ್ಕೆ ಬಿಲ್‌ ಪಾವತಿಸಿದ ಸರ್ಕಾರಿ ಆದೇಶ ಪಾಲಿಸದ ಕಾರ್ಖಾನೆಗಳಿಗೆ ಜಿಲ್ಲಾಡಳಿತ ನೋಟಿಸ್‌ ಕೊಟ್ಟರೆ ಸಾಲದು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮವಾಗಬೇಕು.

ಆಲೆಮನೆಗಳೂ ಬಂದ್‌
ಬೆಳಗಾವಿ ತಾಲ್ಲೂಕಿನ ಸಾಂಬ್ರಾ ಪಂತಬಾಳೇಕುಂದ್ರಿ ಮುತಗಾ ಮೋದಗಾ ಹೊನ್ನಿಹಾಳ ಮಾರಿಹಾಳ ಭಾಗದಲ್ಲಿ ಕಬ್ಬು ಬೆಳೆದವರು ಕಾರ್ಖಾನೆಗಿಂತ ಕಳುಹಿಸುವುದಕ್ಕಿಂತ ಸ್ಥಳೀಯ ಆಲೆಮನೆಗಳಲ್ಲೇ ಹೆಚ್ಚಾಗಿ ಬೆಲ್ಲ ತಯಾರಿಸುತ್ತಾರೆ.   ‘ಆರಂಭದಲ್ಲಿ ಯಂತ್ರದಲ್ಲಿ ಕಬ್ಬು ಕತ್ತರಿಸುತ್ತೇವೆ. ಕಬ್ಬಿನ ಹಿಪ್ಪೆಯನ್ನು ಒಣಗಿಸುತ್ತೇವೆ. ನಂತರ ಕೊಪ್ಪರಿಗೆ ಇರಿಸಿದ ಒಲೆಯಲ್ಲಿ ಬೆಂಕಿಗಾಗಿ ಆ ಹಿಪ್ಪೆಯನ್ನೇ ಬಳಸುತ್ತೇವೆ. ಆದರೆ ಮಳೆಯಿಂದಾಗಿ ಕಬ್ಬು  ಕತ್ತರಿಸಿ ಒಣಗಿಸಿ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆಲೆಮನೆಗಳು ಇನ್ನೂ ಆರಂಭಗೊಂಡಿಲ್ಲ’ ಎಂದು ರೈತ ‌ಪ್ರಕಾಶ ಗಿರಿಮಲ್ಲ ಹೇಳಿದರು.
ಹೆಚ್ಚುತ್ತಲೇ ಇದೆ ಕಬ್ಬಿನ ಕ್ಷೇತ್ರ
ಕಬ್ಬಿಗೆ ಸರಿಯಾಗಿ ದರ ಸಿಗುತ್ತಿಲ್ಲ. ಕಬ್ಬಿನ ಬಾಕಿ ಬಿಲ್ಲನ್ನು ಸಕ್ಕರೆ ಕಾರ್ಖಾನೆಗಳು ಸಕಾಲಕ್ಕೆ ಪಾವತಿಸುತ್ತಿಲ್ಲ. ಕಬ್ಬಿನ ಮೋಸ ನಿಂತಿಲ್ಲ. ಹೀಗೆ... ಸಾಲು ಸಾಲು ಸಮಸ್ಯೆಗಳಿದ್ದರೂ ಗಡಿಜಿಲ್ಲೆಯಲ್ಲಿ ಕಬ್ಬು ಬೆಳೆಯುವ ಕ್ಷೇತ್ರ ಹೆಚ್ಚುತ್ತಲೇ ಇದೆ. 2013–14ರಲ್ಲಿ 207293 ಹೆಕ್ಟೇರ್‌ನಲ್ಲಿ ಕಬ್ಬಿನ ನಾಟಿಯಾಗಿತ್ತು. ಈಗ ಕಬ್ಬು ಬೆಳೆಯುವ ಕ್ಷೇತ್ರ 3 ಲಕ್ಷದ ಹೆಕ್ಟೇರ್‌ ದಾಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.