ADVERTISEMENT

ಬೆಳಗಾವಿ | ಮನೆ ಬಿಟ್ಟು ಹೋದ ತಾಯಿ: ಮಕ್ಕಳ ದೂರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:40 IST
Last Updated 18 ಜೂನ್ 2024, 14:40 IST
   

ಬೆಳಗಾವಿ: ತಮ್ಮ ತಾಯಿ ಮನೆ ಬಿಟ್ಟು ಹೋಗಿದ್ದರಿಂದ ಜೀವನ ಕಷ್ಟವಾಗಿದೆ. ಅವರನ್ನು ಮರಳಿ ಮನೆಗೆ ಕರೆತನ್ನಿ ಎಂದು ಮೂವರು ಮಕ್ಕಳು ಇಲ್ಲಿನ ಕ್ಯಾಂಪ್‌ ಠಾಣೆಗೆ ದೂರು ನೀಡಿದ್ದರು. ಮಂಗಳವಾರ ಮಹಿಳೆಯನ್ನು ಕರೆತಂದ ಪೊಲೀಸರು ತಾಯಿ– ಮಕ್ಕಳು ಹಾಗೂ ಕುಟುಂಬದವರ ಮಧ್ಯೆ ಸಂಧಾನ ಮಾಡಲು ಯತ್ನಿಸಿದರು.

40 ವರ್ಷದ ಮಹಿಳೆಯ ಪತಿ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಪತಿ ಸರ್ಕಾರಿ ನೌಕರಿಯಲ್ಲಿದ್ದ ಕಾರಣ, ಅನುಕಂಪದ ಆಧಾರದ ಮೇಲೆ ಮಹಿಳೆಗೆ ಸರ್ಕಾರಿ ನೌಕರಿ ಸಿಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆ ಇನ್ನೊಬ್ಬ ಪುರುಷನ ಜತೆಗ ಸ್ನೇಹ ಬೆಳೆಸಿಕೊಂಡಿದ್ದರು. ಈಗ ಅವರೊಂದಿಗೆ ಹೋಗಿ ಜೀವನ ಸಾಗಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

18 ವರ್ಷ, 16 ವರ್ಷ ಹಾಗೂ 14 ವರ್ಷದ ಮೂವರು ಮಕ್ಕಳು ಈ ಮಹಿಳೆಗೆ ಇದ್ದಾರೆ. ಪರ ಪುರುಷನಿಂದ ತಮ್ಮ ತಾಯಿಯನ್ನು ಮರಳಿ ಕೊಡಿಸಿ ಎಂದು ಅವರು ದೂರಿನಲ್ಲಿ ಕೋರಿದ್ದಾರೆ.

ADVERTISEMENT

ಮಂಗಳವಾರ ಠಾಣೆಗೆ ಬಂದ ಮಹಿಳೆ ಮಕ್ಕಳೊಂದಿಗೆ ಮಾತನಾಡಿದರು. ಈ ವೇಳೆ ಹಾಜರಿದ್ದ ಕುಟುಂಬದವರು ಸಹ ಮಹಿಳೆಗೆ ಬುದ್ಧಿವಾದ ಹೇಳಿದರು. ಪರ ಪುರುಷನನ್ನು ಬಿಟ್ಟು ಮನೆಗೆ ಬರಬೇಕು; ಇಲ್ಲವೇ ವೇತನದ ಶೇ 75ರಷ್ಟು ಭಾಗವನ್ನು ಮೂವರೂ ಮಕ್ಕಳ ಪಾಲನೆಗಾಗಿ ನೀಡಬೇಕು ಎಂದು ಪಟ್ಟು ಹಿಡಿದರು. ಮಹಿಳೆ ಇದಾವುದಕ್ಕೂ ಒಪ್ಪಲಿಲ್ಲ.

‘ಇದು ತಾಯಿ– ಮಕ್ಕಳ ಮಧ್ಯೆ ಬಂದ ಸಮಸ್ಯೆ. ತಾಯಿ ಕಾಣೆಯಾಗಿದ್ದಾಳೆ ಎಂದು ಮಕ್ಕಳು ಮೇ ತಿಂಗಳಲ್ಲಿ ದೂರು ದಾಖಲಿಸಿದ್ದರು. ತಾಯಿಯನ್ನು ಪತ್ತೆ ಹಚ್ಚಿ ಕರೆತಂದಿದ್ದೇವೆ. ಅವರ ದೂರು ಸುಖಾಂತ್ಯ ಆಗುವಂತೆ ಯತ್ನ ಮಾಡುತ್ತೇವೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.