ADVERTISEMENT

ಗ್ಯಾರಂಟಿ ಯೋಜನೆ ತಿರಸ್ಕರಿಸಿದ ಮತದಾರ: ಜಗದೀಶ ಶೆಟ್ಟರ್

ಅಭಿನಂದನಾ ಸಮಾರಂಭ: ಸಂಸದ ಜಗದೀಶ ಶೆಟ್ಟರ್ ಟೀಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 13:47 IST
Last Updated 22 ಜೂನ್ 2024, 13:47 IST
ಮೂಡಲಗಿ ತಾಲ್ಲೂಕಿನ ನಾಗನೂರಿಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಜಗದೀಶ ಶೆಟ್ಟರ್‌ ಮಾತನಾಡಿದರು
ಮೂಡಲಗಿ ತಾಲ್ಲೂಕಿನ ನಾಗನೂರಿಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಜಗದೀಶ ಶೆಟ್ಟರ್‌ ಮಾತನಾಡಿದರು   

ಮೂಡಲಗಿ: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಪ್ರಬುದ್ಧ ಮತದಾರರು ತಿರಸ್ಕರಿಸಿದರು. ಸೋತು ಸುಣ್ಣವಾಗಿರುವ ಕಾಂಗ್ರೆಸ್‌ ಇನ್ಮುಂದೆ ಅಧಿಕಾರಕ್ಕೆ ಬರುವುದಿಲ್ಲ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ತಾಲ್ಲೂಕಿನ ನಾಗನೂರಿನ ಭಗೀರಥ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಸಂಸದರ ಅಭಿನಂದನೆ ಹಾಗೂ ಕಾರ್ಯಕರ್ತರ ಕೃತಜ್ಞತಾ ಸಮಾರಂಭಯಲ್ಲಿ ಮಾತನಾಡಿದರು.

‘ಗ್ಯಾರಂಟಿ ಯೋಜನೆ ನಿಲ್ಲಿಸುವಂತೆ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನಿಲ್ಲಿಸುತ್ತದೆ’ ಎಂದರು. 

ADVERTISEMENT

‘ಕಾಂಗ್ರೆಸ್‌ನವರ ಹಣಬಲ, ತೋಳ್ಬಲ, ಆಸೆ-ಆಮಿಷದ ಆಟ ನಡೆಯಲಿಲ್ಲ. ಗ್ಯಾರಂಟಿ ಯೋಜನೆಗಳೂ ಫಲ ನೀಡಲಿಲ್ಲ. ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಅರಿತು, ಮತದಾರರು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ದುಡ್ಡಿನ ದರ್ಪಕ್ಕೆ ತಕ್ಕ ಉತ್ತರ ನೀಡಿದ್ದಾರೆ’ ಎಂದು ತಿಳಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ‘ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪ್ರಯತ್ನದಿಂದ ಅರಭಾವಿಮಠದಿಂದ ಲೋಕಾಪೂರದವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದ್ದು,  ಸಂಸದರು ಕೇಂದ್ರದಿಂದ ಅನುದಾನ ಕೊಡಿಸಬೇಕು. ಅರಭಾವಿ ಕ್ಷೇತ್ರದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸಬೇಕು’ ಎಂದು  ಕೋರಿದರು.

ಬಿ.ಆರ್.ಪಾಟೀಲ, ಸರ್ವೋತ್ತಮ ಜಾರಕಿಹೊಳಿ, ಬಸನಗೌಡ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಭಗೀರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರು ಬೆಳಗಲಿ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.