ADVERTISEMENT

ಮೂಡಲಗಿ: ಎನ್‌ಎಂಎಂಎಸ್‌ ಪರೀಕ್ಷೆಯಲ್ಲಿ ರಾಷ್ಟ್ರೀಯ ದಾಖಲೆ

ಬಾಲಶೇಖರ ಬಂದಿ
Published 14 ಜನವರಿ 2024, 8:20 IST
Last Updated 14 ಜನವರಿ 2024, 8:20 IST
ಮೂಡಲಗಿಯ ಉಮಾಬಾಯಿ ಪ್ರೌಢ ಶಾಲೆಯ ಕೇಂದ್ರದಲ್ಲಿ ಎನ್‌ಎಂಎಂಎಸ್‌ ಪರೀಕ್ಷೆಗೆ ಹಾಜರಾಗಲು ಬಂದಿರುವ ಮಕ್ಕಳೊಂದಿಗೆ ಬಿಇಒ ಅಜೀತ ಮನ್ನಿಕೇರಿ 
ಮೂಡಲಗಿಯ ಉಮಾಬಾಯಿ ಪ್ರೌಢ ಶಾಲೆಯ ಕೇಂದ್ರದಲ್ಲಿ ಎನ್‌ಎಂಎಂಎಸ್‌ ಪರೀಕ್ಷೆಗೆ ಹಾಜರಾಗಲು ಬಂದಿರುವ ಮಕ್ಕಳೊಂದಿಗೆ ಬಿಇಒ ಅಜೀತ ಮನ್ನಿಕೇರಿ    

ಮೂಡಲಗಿ: ಇತ್ತಿಚೆಗೆ ಜರುಗಿದ ರಾಷ್ಟ್ರೀಯ ಮೀನ್ಸ್‌ ಕಮ್‌ ಮೆರಿಟ್ ಸ್ಕಾಲರಶಿಪ್ (ಎನ್‌ಎಂಎಂಎಸ್) ಪರೀಕ್ಷೆಗೆ ಮೂಡಲಗಿಯ ಶೈಕ್ಷಣಿಕ ವಲಯದಿಂದ 4032 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಇಡೀ ದೇಶದಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ವಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಳೆದ ವರ್ಷದ ಎನ್‌ಎಂಎಂಎಸ್‌ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ವಲಯದಲ್ಲಿ ಉತ್ತೀರ್ಣರಾಗಿರುವ 272 ವಿದ್ಯಾರ್ಥಿಗಳ ಪೈಕಿ ಮೂಡಲಗಿ ವಲಯದಿಂದ 112 ಮಕ್ಕಳು ಉತ್ತೀರ್ಣರಾಗುವ ಮೂಲಕ ಪರಿಣಾಮದಲ್ಲಿಯೂ ಸಹ ದಾಖಲೆ ಬರೆದಿದ್ದಾರೆ. ‘ಇದು ಒಂದೆರಡು ವರ್ಷಗಳ ಸಾಧನೆ ಅಲ್ಲ ಕಳೆದ ಒಂದು ದಶಕದಿಂದ ವಲಯದ ವಿದ್ಯಾರ್ಥಿಗಳನ್ನು ಎನ್‌ಎಂಎಂಎಸ್‌ ಪರೀಕ್ಷೆಗೆ ಸಿದ್ಧಗೊಳಿಸಲಾಗುತ್ತಿದೆ‘ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದರು.

ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರವು ಜಂಟಿಯಾಗಿ ಮಾಡುವ ಎನ್‌ಎಂಎಂಎಸ್‌ ಪರೀಕ್ಷೆಯ ಮುಖ್ಯ ಉದ್ಧೇಶ 8ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸ ಮುಂದುವರಿಸಲಿಕ್ಕೆ ಮತ್ತು ಅವರು ಶಾಲೆಯಿಂದ ಹೊರಗುಳಿಯದಂತೆ ತಡೆದು ಅವರ ಓದಿಗೆ ಪ್ರೇರಿಪಿಸುವುದಾಗಿದೆ.

ADVERTISEMENT

ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ ಮುಂದಿನ 4 ವರ್ಷಗಳ ವರೆಗೆ ಅಂದರೆ ದ್ವಿತೀಯ ಪಿಯುಸಿವರೆಗೆ ಪ್ರತಿ ವರ್ಷವೂ ₹12,000 ವಿದ್ಯಾರ್ಥಿ ವೇತನ ದೊರೆಯುತ್ತದೆ. ಇದು ಬಡ ಪ್ರತಿಭಾವಂತ ಮಕ್ಕಳಿಗೆ ಬಹಳಷ್ಟು ಅನುಕೂಲವಾಗುತ್ತಲಿದೆ. ಅದು ಅಲ್ಲದೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಸಹ ಬೆಳೆಸುತ್ತಲಿದೆ. ಅಂತೆಯೇ ಪ್ರತಿ ವರ್ಷ ವೈದ್ಯಕೀಯ ಕೋರ್ಸ್‌ಗೆ ಬಹಳಷ್ಟು ಮಕ್ಕಳು ಆಯ್ಕೆಯಾಗುತ್ತಿದ್ದಾರೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ ಎಂದರು.

‘2016ರಲ್ಲಿ ಎನ್‌ಎಂಎಂಎಸ್‌ ಪರೀಕ್ಷೆ ಬರೆದು ಸ್ಕಾಲರ್‌ಷಿಪ್‌ ಪಡೆದು ವಿದ್ಯಾಭ್ಯಾಸ ಮುಂದುವರಿಸಿ ಸದ್ಯ ನಾನು ಮಂಡ್ಯದಲ್ಲಿ ಎಂಬಿಬಿಎಸ್‌ ಮಾಡುತ್ತಿರುವೆ’ ಎಂದು ಅವರಾದಿಯ ಸೃಷ್ಟಿ ಸಿ. ನಾಯಿಕ ಹೇಳಿದರೆ ಕಂಪ್ಯೂಟರ್‌ ಸಾಯಿನ್ಸ್‌ದಲ್ಲಿ ಬೆಳಗಾವಿ ಗೋಗಟೆ ಕಾಲೇಜುದಲ್ಲಿ ಎಂಜಿನೀಯರಿಂಗ ಓದುತ್ತಿರುವ ಶಿವಾಪುರದ ಸವಿತಾ ಬನಹಟ್ಟಿ ಸಹ ತನಗೂ ಎನ್‌ಎಂಎಂಎಸ್‌ ಸ್ಕಾಲರಷಿಪ್‌ ಆರ್ಥಿಕ ಅನುಕೂಲ ಮಾಡಿದೆ ಎಂದು ಪ್ರತಿಕ್ರಿಯಿಸಿದರು.

ಕ್ರಿಯಾ ಯೋಜನೆ: ಎನ್‌ಎಂಎಂಎಸ್ ಪರೀಕ್ಷೆಯನ್ನು ಎದುರಿಸಲು ವಲಯದಲ್ಲಿರುವ ಸರ್ಕಾರಿ ಮತ್ತು ಅನುದಾನಿತ 85 ಪ್ರೌಢ ಶಾಲೆಗಳಲ್ಲಿ ಸಮರೋಪಾದಿಯಲ್ಲಿ ತಯಾರು ಮಾಡುತ್ತಿರುವುದು ವಿಶೇಷವಾಗಿದೆ. ಅದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಕ್ರೀಯಾ ಯೋಜನೆಯನ್ನು ರೂಪಿಸಿ ಅದನ್ನು ಶಿಸ್ತುಬದ್ಧವಾಗಿ ಅನುಷ್ಠಾನಗೊಳಿಸಿತ್ತಿದ್ದಾರೆ. ಅತೀ ಹೆಚ್ಚು ನೋಂದಣಿಗಾಗಿ ಪ್ರತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು, ನೋಂದಣಿಯಾದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಂಬಂಧಿಸಿದಂತೆ ಆಯಾ ಶಾಲೆಗಳಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಷಯಗಳಲ್ಲಿ ವಿಶೇಷ ವರ್ಗಗಳ ಆಯೋಜನೆ, ವಿಷಯಕ್ಕೆ ಸಂಬಂಧಿಸಿದಂತೆ ಗುಂಪು ಚರ್ಚೆ, ವಿದ್ಯಾರ್ಥಿಗಳೊಂದಿಗೆ ವಿಷಯ ಪರಿಣಿತ ಶಿಕ್ಷಕರಿಂದ ಸಂವಾದ, ಆಯಾ ಶಾಲಾ ಹಂತದಲ್ಲಿ ಪ್ರತಿ 2 ತಿಂಗಳಿಗೊಮ್ಮೆ ಒಟ್ಟು 8 ಅಣಕು ಪರೀಕ್ಷೆ ಏರ್ಪಾಡು. ತಾಲ್ಲೂಕಾ ಮಟ್ಟದಲ್ಲಿ ನಾಲ್ಕು ಕೇಂದ್ರಗಳಲ್ಲಿ ಅಣಕು ಪರೀಕ್ಷೆ ಮಾಡಿ ಅತ್ಯುತ್ತಮ 300 ಮಕ್ಕಳಿಗೆ ಪ್ರೋತ್ಸಾಹ ಬಹುಮಾನಗಳನ್ನು ನೀಡಿರುವ ಬಗ್ಗೆ ಮನ್ನಿಕೇರಿ ಅವರು ಪರೀಕ್ಷೆಗಾಗಿ ವರ್ಷವಿಡೀ ತಾವು ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ತಿಳಿಸಿದರು. ‘ವಿದ್ಯಾರ್ಥಿಗಳ ಅಣಕು ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಖರ್ಚುವೆಚ್ಚಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಹಿಸಿಕೊಂಡು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ಬಿಇಒ ಅಜೀತ ಮನ್ನಿಕೇರಿ ತಿಳಿಸಿದರು. ಶೈಕ್ಷಣಿಕ ಪ್ರಗತಿಯಲ್ಲಿ ಅವಿಷ್ಕೃತ ಮತ್ತು ಉತ್ತಮ ಪ್ರಯೋಗಗಳನ್ನು ಮಾಡಿರುವ ಸಾಧನೆಗೆ ಇತ್ತಿಚೆಗೆ ಬಿಇಒ ಅಜೀತ ಮನ್ನಿಕೇರಿ ಅವರಿಗೆ ರಾಷ್ಟ್ರೀಯ ಪುರಸ್ಕಾರ ದೊರೆತಿತ್ತು. ಎನ್‌ಎಂಎಂಎಸ್‌ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ದಾಖಲೆಯಿಂದ ಪ್ರಶಸ್ತಿಗೆ ಮತ್ತೊಂದು ಗರಿ ಮೂಡಿದಂತಾಗಿದೆ.

ಅಜೀತ ಮನ್ನಿಕೇರಿ ಬಿಇಒ ಮೂಡಲಗಿ ವಲಯ
2012ರಿಂದ ಸಾಧನೆಯಲ್ಲಿ ಸ್ಥಿರತೆ ಮಕ್ಕಳಲ್ಲಿ ಪರೀಕ್ಷೆ ಬಗ್ಗೆ ಜಾಗೃತಿ ಪರೀಕ್ಷೆಗಾಗಿ ಕ್ರಿಯಾ ಯೋಜನೆ ಸಿದ್ಧ
ಎನ್‌ಎಂಎಂಎಸ್‌ ಪರೀಕ್ಷೆಗೆ ಮೂಡಲಗಿ ಶೈಕ್ಷಣಿಕ ವಲಯದಿಂದ 4032 ವಿದ್ಯಾರ್ಥಿಗಳು ನೋಂದಣಿ ಮಾಡಿರುವುದು ಇಡೀ ದೇಶದಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳ ನೋಂದಣಿ ಮಾಡಿರುವ ವಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ
ಗೋಪಾಲಕೃಷ್ಣ.ಎಚ್.ಎನ್ ನಿರ್ದೇಶಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಬೆಂಗಳೂರು
ಎನ್‌ಎಂಎಂಎಸ್‌ ಪರೀಕ್ಷೆಯ ಸಿದ್ದತೆಗಾಗಿ ಕ್ರಿಯಾ ಯೋಜನೆಯ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಅವರೆಲ್ಲರ ವಿಶೇಷ ಆಸಕ್ತಿಯಿಂದಾಗಿ ರಾಷ್ಟ್ರಮಟ್ಟದಲ್ಲಿ ದಾಖಲೆ ಬರೆಯಲು ಕಾರಣವಾಗಿದೆ
ಅಜೀತ ಮನ್ನಿಕೇರಿ ಬಿಇಒ ಮೂಡಲಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.