ಚಿಕ್ಕೋಡಿ: ಪಟ್ಟಣದ ರಸ್ತೆಗಳ ಮೇಲೆ ಬೇಕಾಬಿಟ್ಟಿಯಾಗಿ ಜಾನುವಾರುಗಳನ್ನು ಬಿಟ್ಟಿದ್ದಾರೋ, ಅವರೆಲ್ಲರೂ ತಮ್ಮ ಜಾನುವಾರುಗಳನ್ನು ತೆಗೆದುಕೊಂಡು ಹೋಗಬೇಕು. ಇಲ್ಲದೇ ಹೋದಲ್ಲಿ ಗೋಶಾಲೆಗಳಿಗೆ ಜಾನುವಾರುಗಳನ್ನು ರವಾನೆ ಮಾಡುವುದಾಗಿ ಪುರಸಭೆ ಎಚ್ಚರಿಕೆ ನೀಡಿದೆ.
ಬೀಡಾಡಿ ದನಗಳು ರಸ್ತೆ ಮೇಲೆ ತಿರುಗಾಡುವುದು, ಮಲಗುವುದು ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಮಕ್ಕಳು, ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕೂಡಲೇ ಬೀಡಾಡಿ ದನಗಳ ಮಾಲೀಕರು ತಮ್ಮ ತಮ್ಮ ಜಾನುವಾರುಗಳನ್ನು ಗುರುತಿಸಿ ತೆಗೆದುಕೊಂಡು ಹೋಗದೇ ಇದ್ದಲ್ಲಿ ಚಿಕ್ಕೋಡಿ ಪುರಸಭೆಯಿಂದ ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗಳಿಗೆ ರವಾನೆ ಮಾಡಲಾಗುವುದು. ನಂತರ ಯಾರೇ ಈ ಕುರಿತು ದೂರು ನೀಡಿದರೂ ತಮ್ಮ ಅಹವಾಲನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ ತಿಳಿಸಿದ್ದಾರೆ.
ಬೀಡಾಡಿ ದನಗಳ ಹಾವಳಿ ಕುರಿತು ‘ಬೆಂಬಿಡದ ಬೀಡಾಡಿ ದನಗಳ ಹಾವಳಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಜಾವಾಣಿಯಲ್ಲಿ ನ.14ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಪುರಸಭೆಯು ಬೀಡಾಡಿ ದನಗಳ ಹಾವಳಿ ತಪ್ಪಿಸಲು ಮುಂದಾಗಿದೆ. ಈ ಕುರಿತು ಗುರುವಾರ ಪುರಸಭೆ ಕಚೇರಿಯಿಂದ ಧ್ವನಿವರ್ಧಕದ ಮೂಲಕ ಸೂಚನೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.