ಅಥಣಿ (ಬೆಳಗಾವಿ ಜಿಲ್ಲೆ): ‘ತಾಲ್ಲೂಕಿನ ಅನಂತಪುರ ಹಾಗೂ ಬಾಳಿಗೇರಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ 50ಕ್ಕೂ ಅಧಿಕ ರೈತರ 300 ಎಕರೆಗಿಂತ ಹೆಚ್ಚಿನ ಕೃಷಿಭೂಮಿಯಲ್ಲಿ ವಕ್ಫ್ ಮಂಡಳಿ ಹೆಸರು ಸೇರ್ಪಡೆಯಾಗಿದೆ’ ಎಂದು ಭಾನುವಾರ ದೂರಿದ ರೈತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
‘ನಮಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಈಗ ನಮ್ಮ ಜಮೀನಿನ ಪಹಣಿಯಲ್ಲೂ ವಕ್ಫ್ ಮಂಡಳಿ ಹೆಸರು ಸೇರ್ಪಡೆಯಾಗಿದೆ. ನ್ಯಾಯ ಸಿಗದಿದ್ದರೆ ನಮಗೆ ಆತ್ಮಹತ್ಯೆಯೇ ದಾರಿ’ ಎಂದು ಬಾಳಿಗೇರಿಯ ರೈತ ಶಮಸುದ್ದೀನ್ ಮುಲ್ಲಾ ಕಣ್ಣೀರು ಹಾಕಿದರು.
‘ನಾಲ್ಕು ತಲೆಮಾರಿನಿಂದ ನಮ್ಮ ಕುಟುಂಬದವರು ಈ ಭೂಮಿಯಲ್ಲೇ ಉಳುಮೆ ಮಾಡುತ್ತಿದ್ದೇವೆ. ಈಗ ಏಕಾಏಕಿಯಾಗಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಿಸಿದರೆ, ನಾವು ಜೀವನ ನಡೆಸುವುದು ಹೇಗೆ?’ ಎಂದು ಅನಂತಪುರದ ರೈತ ದವಳ ಮುಲ್ಲಾ ಅಳಲು ತೋಡಿಕೊಂಡರು.
ವಕೀಲ ಸಂಪತಕುಮಾರ ಶೆಟ್ಟಿ, ‘ಅಥಣಿ ತಾಲ್ಲೂಕಿನ ಹಲವು ರೈತರ ಪಹಣಿಯಲ್ಲಿ 2018ರಲ್ಲಿ ‘ವಕ್ಫ್ ಮಂಡಳಿ ಆಸ್ತಿ’ ಎಂದು ನಮೂದಾಗಿದೆ. ರೈತರಿಗೆ ಯಾವ ನೋಟಿಸ್ ಕೊಡದೆ, ವಕ್ಫ್ ಆಸ್ತಿ ಎಂದು ನಮೂದಿಸಿದ್ದು ಕಾನೂನುಬಾಹಿರ. ಸರ್ಕಾರ ರೈತರಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.
ರೈತರಾದ ರಾಜಾಸಾಬ್ ಮುಲ್ಲಾ, ಸುಭಾನಲ್ಲಾ ಮುಲ್ಲಾ, ಪೈಗಂಬರ್ ಮುಲ್ಲಾ, ರಾಜಾಸಾಬ ಮುಜಾವರ, ಶಕೀಲ್ ಮುಲ್ಲಾ, ಗುಲಾಬಸಾಬ್ ಮುಲ್ಲಾ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.