ಬೆಳಗಾವಿ: ಮಾರುಕಟ್ಟೆಯಲ್ಲಿಮೇಕೆ ಹಾಗೂ ಕುರಿಗಳ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮಾಂಸದ ದರವನ್ನೂ ಏರಿಕೆ ಮಾಡಲು ಮಾರಾಟಗಾರರು ನಿರ್ಧರಿಸಿದ್ದಾರೆ. ಪ್ರಸ್ತುತ ಕೆ.ಜಿ.ಗೆ ₹ 540 ಇದೆ. ಇದನ್ನು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಮಾಂಸಪ್ರಿಯ ಗ್ರಾಹಕರಿಗೆ ಹೊರೆಯಾಗಲಿದೆ.
15 ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಕುರಿ ಹಾಗೂ ಮೇಕೆ ಮಾಂಸದ ಬೆಲೆ ₹ 500ದಿಂದ ₹520 ಇತ್ತು. ಈ ವಾರ ₹ 540ಕ್ಕೆ ಹೆಚ್ಚಾಗಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಲಕ್ಷಣಗಳಿವೆ.
‘ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಸಾಕಷ್ಟು ಸಂಖ್ಯೆಯ ಕುರಿ ಹಾಗೂ ಮೇಕೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇದಲ್ಲದೇ, ಮಹಾರಾಷ್ಟ್ರ ಮೊದಲಾದ ಹೊರರಾಜ್ಯಗಳ ವ್ಯಾಪಾರಿಗಳು ಬಂದು ಇಲ್ಲಿ ಲಭ್ಯವಿರುವ ಕುರಿ, ಮೇಕೆಗಳನ್ನು ಖರೀದಿಸುತ್ತಿದ್ದಾರೆ. 10 ಕೆ.ಜಿ. ತೂಕದ ಕುರಿಯ ಬೆಲೆ ₹ 5ಸಾವಿರದವರೆಗೆ ತಲುಪಿದೆ. ಹೀಗಾಗಿ ನಾವೂ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ’ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಕೋಳಿ ಮಾಂಸದ ದರ (₹ 170) ಯಥಾಸ್ಥಿತಿಯಲ್ಲಿದೆ. ಮೀನಿನ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದಿದೆ. ಕೆ.ಜಿ. ಬಾಂಗಡೆ ಮೀನಿಗೆ ₹ 200ರಿಂದ 240 (ಹೋದ ವಾರ ₹ 200–250), ತಾರ್ಲಿ ₹ 100ರಿಂದ ₹ 160 (ಹಿಂದಿನ ವಾರ ₹ 100–₹150), ಸುರಮಯಿ ₹ 400ರಿಂದ ₹ 800 (ಹಿಂದಿನ ವಾರ ₹ 500–₹ 600)ಕ್ಕೆ ಹೆಚ್ಚಾಗಿದೆ. ಪಾಪ್ಲೆಟ್ ₹ 500ರಿಂದ ₹ 800ರಲ್ಲೇ ಇದೆ. ರಾವಸ್ ₹ 200ರಿಂದ ₹ 350 ಇದೆ.
ಕೆಲವು ತರಕಾರಿಗಳ ಬೆಲೆ ಕೊಂಚ ಹೆಚ್ಚಾಗಿದೆ. ಕೆಲವು ಸ್ಥಿರವಾಗಿವೆ. ಕೊತ್ತಂಬರಿ (ಒಂದು ಸಣ್ಣ ಕಟ್ಟು) ದರ ₹ 20ರಿಂದ ₹50 ಇದೆ. ಮಾರುಕಟ್ಟೆಗೆ ಕೊತ್ತಂಬರಿ ಆವಕ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದರ ಇಳಿದಿಲ್ಲ. ಇನ್ನೂ ಒಂದು ತಿಂಗಳು ದರ ಇಳಿಕೆ ಆಗುವ ಸಾಧ್ಯತೆ ಕಡಿಮೆ ಇದೆ ಎನ್ನುತ್ತಾರೆ ವ್ಯಾಪಾರಿಗಳು. ಮೆಂತ್ಯೆ ಸೊಪ್ಪುಒಂದು ಕಟ್ಟಿಗೆ ₹ 20ಕ್ಕೆ ಏರಿದೆ (ಕಳೆದವಾರ ₹ 10 ಇತ್ತು). ಪುದಿನಾ, ಸಬ್ಬಸಗಿ ದರ ಸ್ಥಿರವಾಗಿದೆ.
ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ, ಟೊಮೆಟೊ ಬೆಲೆ ಕೊಂಚ ಕಡಿಮೆಯಾಗಿದೆ. ಬದನೆಕಾಯಿ ಹೋದ ವಾರ ₹ 80ರಿಂದ ₹100 ಇತ್ತು. ಆದರೆ, ಈ ವಾರ₹ 50ರಿಂದ 60ಕ್ಕೆ ಇಳಿದಿದೆ. ಸೌತೆಕಾಯಿ, ಮೆಣಸಿನಕಾಯಿ, ಆಲೂಗಡ್ಡೆ ದರದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬುಧವಾರ ಇದೇ ಮೊದಲ ಬಾರಿಗೆ 65ಸಾವಿರ ಕ್ವಿಂಟಲ್‌ನಷ್ಟು ಈರುಳ್ಳಿ ವಹಿವಾಟು ನಡೆದು ದಾಖಲೆ ಸೃಷ್ಟಿಯಾಗಿದೆ. ಹುಬ್ಬಳ್ಳಿ ಹಾಗೂ ಗದಗ ಎಪಿಎಂಸಿ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಕುಸಿದ ಹಿನ್ನೆಲೆಯಲ್ಲಿ ಬೆಳಗಾವಿ ಎಪಿಎಂಸಿಗೆ ನಿರೀಕ್ಷೆಗೂ ಮೀರಿ ಆವಕವಾಗಿದೆ. 36ಸಾವಿರ ಕ್ವಿಂಟಲ್ ಈರುಳ್ಳಿ ಆವಕ ನಿರೀಕ್ಷಿಸಲಾಗಿತ್ತು. ಉತ್ತಮ ಗುಣಮಟ್ಟದ ಈರುಳ್ಳಿಗೆ ಕ್ವಿಂಟಲ್‌ಗೆ ₹ 2460ರಿಂದ ₹ 3,800ರವೆರೆಗೆ ಬೆಲೆ ಸಿಕ್ಕಿದೆ. ಹೆಚ್ಚಿನ ಆವಕವಾದ್ದರಿಂದ ಬೆಲೆ ಕಡಿಮೆಯಾಗಿದೆ. ಅಕ್ಟೋಬರ್ 3ನೇ ವಾರದಲ್ಲಿ ಕ್ವಿಂಟಲ್‌ಗೆ ₹ 3900ರಿಂದ ₹ 5450ರವರೆಗೆ ಬೆಲೆ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.