ಬೆಳಗಾವಿ: ನಗರದ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನ ಎಂಬಿಎ ವಿಭಾಗವು ಜೂನ್ 4 ಮತ್ತು 5ರಂದು ‘ಕೋವಿಡ್–19– ಸಾಂಕ್ರಾಮಿಕ ಸಮಯದಲ್ಲಿ ವ್ಯಾಪಾರ ಆವಿಷ್ಕಾರಗಳು’ ಎನ್ನುವ ವಿಷಯ ಕುರಿತು ರಾಷ್ಟ್ರೀಯ ಸಮ್ಮೇಳನವನ್ನುಆನ್‌ಲೈನ್‌ನಲ್ಲಿ ಆಯೋಜಿಸಿದೆ.
ರಾಜಸ್ಥಾನದ ಜೋಧಪುರದ ಐಐಟಿಯ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಮುಖ್ಯಸ್ಥ ಡಾ.ಆತನು ಘೋಷ್, ಗೋವಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಡಾ.ಅಜಿತ್ ವರುಲೇಕರ್, ಹರಿಹರದ ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ನಿರ್ದೇಶಕ ಡಾ.ಬಿಪ್ಲಬ್ ಕುಮಾರ್ ಬಿಸ್ವಾಲ್ ಪ್ರಮುಖ ಭಾಷಣ ಮಾಡಲಿದ್ದಾರೆ ಎಂದು ಕೆಎಲ್‌ಎಸ್ ಜಿಐಟಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ ತಿಳಿಸಿದ್ದಾರೆ.
‘ಕೋವಿಡ್ ಬಿಕ್ಕಟ್ಟು ಸೃಷ್ಟಿಸಿರುವ ಈ ಸವಾಲಿನ ಕಾಲದಲ್ಲಿ ಸಂಸ್ಥೆಗಳು ಸುಸ್ಥಿರತೆ ಮತ್ತು ಮಾನವ ಸಂಪನ್ಮೂಲದ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿವೆ. ಸಂಸ್ಥೆಗಳನ್ನು ನಿರ್ವಹಿಸುವಲ್ಲಿ ಹಲವು ಒಳನೋಟಗಳು ಹಾಗೂ ಉಪಾಯಗಳು ಇಂತಹ ಸಮ್ಮೇಳನಗಳಿಂದ ದೊರೆಯುತ್ತವೆ. ಕಾರ್ಯತಂತ್ರದ ಯೋಜನೆಗಳು ಮತ್ತು ವ್ಯವಹಾರ ನಿರ್ವಹಿಸಲು ಹೊಸ ಆಲೋಚನೆಗಳನ್ನು ಇಂತಹ ವೇದಿಕೆಗಳು ಒದಗಿಸುತ್ತವೆ’ ಎಂದು ಪ್ರಾಂಶುಪಾಲ ಡಾ.ಜಯಂತ ಕೆ. ಕಿತ್ತೂರ ಮಾಹಿತಿ ನೀಡಿದ್ದಾರೆ.
‘ಕೈಗಾರಿಕೆ ಮತ್ತು ಸಮಾಜದ ಹಿತದೃಷ್ಟಿಯಿಂದ ಹೆಚ್ಚು ಪ್ರಸ್ತುತವಾದ ವಿಷಯಗಳ ಬಗ್ಗೆ ಚರ್ಚಿಸುವಲ್ಲಿ ಕೆಎಲ್‌ಎಸ್ ಜಿಐಟಿ ಮುಂದಿದೆ. ಸಮ್ಮೇಳನವು ಈ ದಿಕ್ಕಿನಲ್ಲಿ ಮತ್ತೊಂದು ಪ್ರಯತ್ನವಾಗಿದೆ’ ಎಂದು ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಕೃಷ್ಣಶೇಖರ ಲಾಲದಾಸ ಹೇಳಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ಡಾ.ಸಂಜೀವ ಇಂಗಲಗಿ–ಮೊ:9480285690 ಅಥವಾ ಡಾ.ವಾಣೀಶ್ರೀ ಹುಂಡೇಕರ ಮೊ:9844921930 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.