ಬೆಳಗಾವಿ: ಭಾರತೀಯ ಶಿಕ್ಷಣ ಮಂಡಳ ಕರ್ನಾಟಕ (ಉತ್ತರ ಪ್ರಾಂತ) ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)-2020 ಕುರಿತು ರಾಷ್ಟ್ರೀಯ ಸಮ್ಮೇಳನವನ್ನು ಏ.30 ಹಾಗೂ ಮೇ 1ರಂದು ಆಯೋಜಿಸಲಾಗಿದೆ ಎಂದು ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶ್ರೀನಿವಾಸ ಬಳ್ಳಿ ತಿಳಿಸಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 'ವಿಟಿಯು ಜ್ಞಾನಸಂಗಮ ಕ್ಯಾಂಪಸ್‌ನ ಡಾ.ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಏ.30ರಂದು ಬೆಳಿಗ್ಗೆ 10ಕ್ಕೆ ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು' ಎಂದು ಹೇಳಿದರು.
'ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಸಹ ಸರಕಾರ್ಯವಾಹ ಮನಮೋಹನ ವೈದ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಭಾರತೀಯ ಶಿಕ್ಷಣ ಮಂಡಳದ ಅಧ್ಯಕ್ಷ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಸಚ್ಚಿದಾನಂದ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಪಚೌರಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಕುಲ್ ಕಾನಿಟ್ಕರ್ ಹಾಗೂ ಸಹ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಮಾರ್ಗದರ್ಶನ ನೀಡಲಿದ್ದಾರೆ' ಎಂದು ವಿವರಿಸಿದರು.
'ಮೇ 1ರಂದು ಶಿಕ್ಷಣ ತಜ್ಞರ ದುಂಡು ಮೇಜಿನ ಸಭೆ ನಡೆಯಲಿದ್ದು, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಡಾ.ತಿಮ್ಮೇಗೌಡ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಭಾಗವಹಿಸಲಿದ್ದಾರೆ. 400 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ವಿವಿಧ ಕೇಂದ್ರೀಯ ಹಾಗೂ ರಾಜ್ಯ ವಿಶ್ವವಿದ್ಯಾಲಯದ 30 ಕುಲಪತಿಗಳು, ಕುಲಸಚಿವರು, ನಿವೃತ್ತ ಕುಲಪತಿಗಳು, ಶಿಕ್ಷಣ ತಜ್ಞರು ಹಾಗೂ ಪ್ರಾಧ್ಯಾಪಕರು ವಿವಿಧ ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ' ಎಂದು ವಿವರ ನೀಡಿದರು.
'ವಿವಿಧೆಡೆ ನಡೆದಿರುವ ಎನ್‌ಇಪಿ ಅನುಷ್ಠಾನದ ಪ್ರಯತ್ನಗಳು ಹಾಗೂ ಪ್ರಯೋಗಗಳ ವರದಿಯನ್ನು ಪಡೆಯಲಾಗುವುದು. ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಚಿಂತನ- ಮಂಥನ ನಡೆಯಲಿದೆ. ಇದೇ ವೇಳೆ ಎನ್‌ಇಪಿ ಹಾಗೂ ರಾಷ್ಟ್ರೀಯ ಶಿಕ್ಷಣ ಕುರಿತ ಸ್ಮರಣ ಸಂಚಿಕೆ 'ಸಮಷ್ಟಿ'ಯನ್ನು ಬಿಡುಗಡೆ ಮಾಡಲಾಗುವುದು' ಎಂದರು.
ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿ, 'ಎನ್‌ಇಪಿ ಅನುಷ್ಠಾನದಲ್ಲಿ ಎದುರಾಗಿರುವ ಸವಾಲುಗಳು ಹಾಗೂ ಅವುಗಳನ್ನು ಬಗೆಹರಿಸುವ ಕುರಿತು ಸಮ್ಮೇಳನದಲ್ಲಿ ಸಮಾಲೋಚನೆ ನಡೆಯಲಿದೆ' ಎಂದು ಹೇಳಿದರು
ಭಾರತೀಯ ಶಿಕ್ಷಣ ಮಂಡಳ ಕರ್ನಾಟಕ (ಉತ್ತರ) ಅಧ್ಯಕ್ಷ ಡಾ.ಸತೀಶ ಜಿಗಜಿನ್ನಿ, ಕಾರ್ಯದರ್ಶಿ ಡಾ.ಗಿರೀಶ ತೆಗ್ಗಿನಮಠ ಹಾಗೂ ವಿಟಿಯು ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.