ADVERTISEMENT

ಜನರನ್ನು ಪರಾವಲಂಬಿಯಾಗಿಸುತ್ತಿರುವ ‘ಗ್ಯಾರಂಟಿ’: ರಮೇಶ್ ಕತ್ತಿ ವಿಷಾದ

ನೇರಲಿ ಪಿಕೆಪಿಎಸ್: ₹5.59 ಕೋಟಿ ಪತ್ತು ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 14:07 IST
Last Updated 10 ಜುಲೈ 2024, 14:07 IST
ಹುಕ್ಕೇರಿ ತಾಲ್ಲೂಕಿನ ನೇರಲಿ ಪಿಕೆಪಿಎಸ್ ವತಿಯಿಂದ ₹5.59 ಕೋಟಿ ಪತ್ತನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಬುಧವಾರ ವಿತರಿಸಿದರು
ಹುಕ್ಕೇರಿ ತಾಲ್ಲೂಕಿನ ನೇರಲಿ ಪಿಕೆಪಿಎಸ್ ವತಿಯಿಂದ ₹5.59 ಕೋಟಿ ಪತ್ತನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಬುಧವಾರ ವಿತರಿಸಿದರು   

ಹುಕ್ಕೇರಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ಯಾರಂಟಿ ಯೋಜನೆ ಹೆಸರಿನಲ್ಲಿ ರೈತರು ಸೇರಿದಂತೆ ಜನರನ್ನು ಪರಾವಲಂಬಿಗಳಾಗಿ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಹೇಳಿದರು.

ತಾಲ್ಲೂಕಿನ ನೇರಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 2024–25 ರಿಂದ 2026–27ನೇ ಸಾಲಿಗೆ ಮಂಜೂರಾದ ₹5.59 ಕೋಟಿ ಪತ್ತನ್ನು ಬುಧವಾರ 811 ಸದಸ್ಯರಿಗೆ ವಿತರಿಸಿ  ಮಾತನಾಡಿದರು.

‘ಪಕ್ಷಾತೀತವಾಗಿ ಸರ್ಕಾರಗಳು ಬರಬರುತ್ತ ಜನರನ್ನು ಸ್ವಾವಲಂಬಿ ಬದುಕು ಕಲಿಯಲು ಬೇಕಾದ ನೀತಿ ರಚಿಸದೇ, ಪರಾವಲಂಬಿ ಬದುಕಿಗೆ ಬೇಕಾದ ನೀತಿ ರೂಪಿಸುತ್ತಿರುವುದು ದೇಶದ ಭವಿಷ್ಯಕ್ಕೆ ಮಾರಕ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

‘ರೈತರೂ ಕೂಡಾ ಇದರ ಬಗ್ಗೆ ಚಿಂತಿಸದೆ, ರಾಸಾಯನಿಕ ಗೊಬ್ಬರ ಬಳಸಿ, ಭೂಮಿಯನ್ನು ಬರಡು ಮಾಡುತ್ತ, ಫಲವತ್ತತೆ ಕಡಿಮೆ ಮಾಡುತ್ತಿರುವುದು ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತೆ’ ಎಂದು ಕುಟುಕಿದರು.

ಕ್ರಾಂತಿಗೆ ದಾರಿ: ‘ಈಗಿನ ರೈತರ ಪರಿಸ್ಥಿತಿ ನೋಡಿದರೆ, ಭಯ ಹುಟ್ಟಿಸುತ್ತಿದೆ. ಎಲ್ಲರಿಗೂ ಅನ್ನ ನೀಡುವ ಅನ್ನದಾತ ಬೆಳೆ ಬೆಳೆಯದೆ ಕೈಚೆಲ್ಲಿ ಕುಳಿತರೆ, ಸಮಾಜವು ಅಧೋಗತಿಗೆ ಇಳಿದು ಕ್ರಾಂತಿಯಾಗುವ ಸಾಧ್ಯತೆ ಇದೆ. ಸರ್ಕಾರಗಳು ಬೇಗನೆ ಎಚ್ಚೆತ್ತುಕೊಂಡು ರೈತರಿಗೆ ಅನುಕೂಲಕರ ನೀತಿ ರಚಿಸಿ ಅವರ ಬದುಕು ಗಟ್ಟಿಗೊಳಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ್, ಹಿರಾ ಶುಗರ್ಸ್ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಚಿಕ್ಕೋಡಿ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸತ್ಯಪ್ಪ ನಾಯಿಕ ಅತಿಥಿಗಳಾಗಿದ್ದರು. ಸಂಘದ ಅಧ್ಯಕ್ಷ ಈಶ್ವರ ಖೋತ್ ಅಧ್ಯಕ್ಷತೆ ವಹಿಸಿದ್ದರು.

ಆಡಳಿತ ಮಂಡಳಿ ವತಿಯಿಂದ ರಮೇಶ್ ಕತ್ತಿ ಅವರನ್ನು ಮತ್ತು ಹೊಸದಾಗಿ ಪಿಡಿಒ ಆಗಿ ನೇಮಕಾತಿ ಹೊಂದಿದ ಸಂಜು ಹೊಸಮನಿ ಅವರನ್ನು ಸತ್ಕರಿಸಲಾಯಿತು.

ಉಪಾಧ್ಯಕ್ಷೆ ಸಾವಿತ್ರಿ ಶೆಂಡೂರಿ, ನಿರ್ದೇಶಕರಾದ ಬಸವರಾಜ ಲಬ್ಬಿ, ಭೀಮರಾವ್ ಜಾಧವ್, ಸೋಮೇಶ್ ಶೇಡಬಾಳೆ, ಅಪ್ಪಾಸಾಹೇಬ ಪಾಟೀಲ್, ರುದ್ರಗೌಡ ಪಾಟೀಲ್ (ಸಣ್ಣಕ್ಕಿ), ಶಕೀಲ್ ಮುಲ್ಲಾ, ಅಮರ ಪತಾಟೆ, ಬಸಗೌಡ ಪಾಟೀಲ್ (ಮಲಗೌಡರ) ಸೇರಿದಂತೆ ಮುಖಂಡರು, ಸದಸ್ಯರು ಇದ್ದರು. ಅಧ್ಯಕ್ಷ ಈಶ್ವರ ಖೋತ್ ಸ್ವಾಗತಿಸಿ ಪ್ರಾಸ್ತಾವಿಸಿದರು. ಸಿಇಒ ರಾಮು ಶಿಂಧೆ ನಿರೂಪಿಸಿ ವಂದಿಸಿದರು.

ಹುಕ್ಕೇರಿ ತಾಲ್ಲೂಕಿನ ನೇರಲಿ ಪಿಕೆಪಿಎಸ್ ವತಿಯಿಂದ ರೂ.5.59 ಕೋಟಿ ಪತ್ತು ವಿತರಿಸುವ ಸಮಾರಂಭದಲ್ಲಿ ಸದಸ್ಯರನ್ನು ಉದ್ಧೇಶಿಸಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಬುಧವಾರ ಮಾತನಾಡಿದರು.
ಹುಕ್ಕೇರಿ ತಾಲ್ಲೂಕಿನ ನೇರಲಿ ಪಿಕೆಪಿಎಸ್ ವತಿಯಿಂದ ರೂ.5.59 ಕೋಟಿ ಪತ್ತು ವಿತರಿಸುವ ಸಮಾರಂಭದಲ್ಲಿ ಆಡಳಿತ ಮಂಡಳಿ ವತಿಯಿಂದ ಅಧ್ಯಕ್ಷ ಈಶ್ವರ ಖೋತ್ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಅವರನ್ನು ಸತ್ಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.