ನಿಪ್ಪಾಣಿ (ಬೆಳಗಾವಿ ಜಿಲ್ಲೆ): ನಿಪ್ಪಾಣಿ ಪಟ್ಟಣ ಹೊರವಲಯದಲ್ಲಿ ಗುರುವಾರ ನಸುಕಿನಲ್ಲಿ ಬುಟ್ಟಿಯಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿದೆ.
ಬೆಳಿಗ್ಗೆ ಈ ಮಾರ್ಗದಲ್ಲಿ ಹೊಲದ ಕೆಲಸಕ್ಕೆ ಹೋದ ಕಾರ್ಮಿಕರಿಗೆ ಹಸುಳೆ ಅಳುವ ಧ್ವನಿ ಕೇಳಿಸಿದೆ. ರಸ್ತೆ ಪಕ್ಕದ ಜಮೀನಿನಲ್ಲಿ ಹೋಗಿ ನೋಡಿದಾಗ ಪ್ಲಾಸ್ಟಿಕ್ ವೈರಿನಿಂದ ಹೆಣೆದ ಬುಟ್ಟಿಯಲ್ಲಿ ಹಸುಳೆ ಇರುವುದು ಗೊತ್ತಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಹಸುಳೆಯನ್ನು ರಕ್ಷಣೆ ಮಾಡಿ, ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದರು. ನಿಪ್ಪಾಣಿ ಸಿಡಿಪಿಒ ಕಚೇರಿಯ ಸಿಬ್ಬಂದಿ ಸುಪರ್ದಿಗೆ ಪಡೆದರು.
ಮೈ ಕೊರೆಯುವ ಚಳಿಯಲ್ಲಿ ಬಿಟ್ಟುಹೋಗಿದ್ದರಿಂದ ಶಿಶು ನಿತ್ರಾಣಗೊಂಡಿದ್ದು, ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದೆ ಎಂದು ತಾಲ್ಲೂಕು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ನಿಪ್ಪಾಣಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.