ADVERTISEMENT

ಹೊಸ ವರ್ಷಾಚರಣೆ ಸಂಭ್ರಮ; ಮದ್ಯ ಮಾರಾಟದಲ್ಲಿ ಹೆಚ್ಚಳ

ಶ್ರೀಕಾಂತ ಕಲ್ಲಮ್ಮನವರ
Published 2 ಜನವರಿ 2019, 20:15 IST
Last Updated 2 ಜನವರಿ 2019, 20:15 IST
   

ಬೆಳಗಾವಿ: ಡಿಸೆಂಬರ್‌ 31ರಂದು ಹೊಸ ವರ್ಷಾಚರಣೆ ವೇಳೆ ಜಿಲ್ಲೆಯಲ್ಲಿ ಸುಮಾರು 1.70 ಲಕ್ಷ ಲೀಟರ್‌ ದೇಶೀಯ ಮದ್ಯ (ಬಿಯರ್‌ ಸೇರಿ) ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ದಿನ 47,655 ಲೀಟರ್‌ ಮಾರಾಟವಾಗಿತ್ತು. 1.23 ಲಕ್ಷ ಲೀಟರ್‌ವರೆಗೆ ಹೆಚ್ಚಳವಾಗಿದೆ.

ಹೊಸ ವರ್ಷವನ್ನು ಅದ್ಧೂರಿಯಾಗಿ, ಸಂಭ್ರಮದಿಂದ ಸ್ವಾಗತಿಸಬೇಕು ಎನ್ನುವ ಯುವಜನರ ಖಯಾಲಿಯಿಂದಾಗಿ ಪಾರ್ಟಿ ಮಾಡುವ ಖಯಾಲಿ ಹೆಚ್ಚಾಗಿದೆ. ಹೀಗಾಗಿ ಮದ್ಯ ಮಾರಾಟದಲ್ಲಿ ಏರಿಕೆ ಕಂಡಿದೆ ಎನ್ನುತ್ತಾರೆ ಅಬಕಾರಿ ಇಲಾಖೆಯ ಅಧಿಕಾರಿಗಳು.

ಬೆಳಗಾವಿಯಲ್ಲಿ ಹೆಚ್ಚು:ಜಿಲ್ಲೆಯಲ್ಲಿ ಒಟ್ಟಾರೆಯಾಗಿ ದೇಶೀಯ ಮದ್ಯ 1,24,857 ಲೀಟರ್‌ ಹಾಗೂ ಬಿಯರ್‌ 45,531 ಲೀಟರ್‌ ಮಾರಾಟವಾಗಿದೆ. ಇದರಲ್ಲಿ ಬೆಳಗಾವಿಯಲ್ಲಿ ಅತಿ ಹೆಚ್ಚು ಮದ್ಯ ಹಾಗೂ ಬಿಯರ್‌ ಮಾರಾಟವಾಗಿದೆ. 29,178 ಲೀಟರ್‌ ಮದ್ಯ ಹಾಗೂ 22,959 ಲೀಟರ್‌ ಬಿಯರ್‌ ಮಾರಾಟವಾಗಿದೆ. ಒಟ್ಟು 52,137 ಲೀಟರ್‌ ಮಾರಾಟವಾಗಿದೆ. ಕಳೆದ ವರ್ಷ 10,782 ಲೀಟರ್‌ ಮದ್ಯ ಹಾಗೂ 6,021 ಲೀಟರ್‌ ಬಿಯರ್‌ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಬಹುತೇಕ ಮೂರು ಪಟ್ಟು ಹೆಚ್ಚಳವಾಗಿದೆ.

ADVERTISEMENT

ಸಾಮಾನ್ಯವಾಗಿ ಬಿಯರ್‌ಗೆ ಹೆಚ್ಚು ಬೇಡಿಕೆ ಇರುತ್ತದೆ. ಹೊರಜಿಲ್ಲೆಗಳಲ್ಲಿ ಕೂಡ ಬಿಯರ್‌ಗೆ ಹೆಚ್ಚು ಬೇಡಿಕೆ. ಆದರೆ, ಈ ಸಲ ಜಿಲ್ಲೆಯಲ್ಲಿ ಹೆಚ್ಚು ಚಳಿ ಇದ್ದ ಕಾರಣಕ್ಕೆ ಬಿಯರ್‌ಗಿಂತ ಮದ್ಯ ಮಾರಾಟವಾಗಿದೆ. ಇದರ ಜೊತೆ ಯುವತಿಯರು ಹಾಗೂ ಹದಿಹರೆಯದ ಯುವಕರು ಕೂಡ ಮದ್ಯ ಸೇವಿಸುತ್ತಿರುವುದರಿಂದ ಮಾರಾಟದಲ್ಲಿ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ 631 ಮದ್ಯದ ಅಂಗಡಿಗಳಿವೆ. ವರ್ಷದಿಂದ ವರ್ಷಕ್ಕೆ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಶೇ 83ರಷ್ಟು ಸಾಧನೆ:ಪ್ರಸಕ್ತ ಹಣಕಾಸು ವರ್ಷದಲ್ಲಿ 3,39,928 ಬಾಕ್ಸ್‌ ಮಾರಾಟದ ಗುರಿ ನೀಡಲಾಗಿದೆ. ಏಪ್ರಿಲ್‌ನಿಂದ ಡಿಸೆಂಬರ್‌ ಅಂತ್ಯದವರೆಗೆ 2,82,782 ಬಾಕ್ಸ್‌ (8ರಿಂದ 9 ಲೀಟರ್‌ ಮದ್ಯ) ಮಾರಾಟವಾಗಿದೆ. ಶೇ 83.19ರಷ್ಟು ಸಾಧನೆಯಾಗಿದೆ. ಇನ್ನುಳಿದ ಗುರಿಯನ್ನು ಮೂರು ತಿಂಗಳಲ್ಲಿ ತಲುಪಬಹುದು ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಕೆ.ಅರುಣಕುಮಾರ್‌ ‘ಪ್ರಜಾವಾಣಿ’ ಗೆ ತಿಳಿಸಿದರು.

ಸ್ಥಳ; ಮದ್ಯ ಬಾಕ್ಸ್‌ಗಳ ಸಂಖ್ಯೆ; ಬಿಯರ್‌ ಬಾಕ್ಸ್‌ಗಳ ಸಂಖ್ಯೆ
ಅಥಣಿ; 1,991; 532
ಬೈಲಹೊಂಗಲ; 1,220; 424
ಬೆಳಗಾವಿ: 3,242; 2,551
ಚಿಕ್ಕೋಡಿ; 3,469; 432
ಗೋಕಾಕ; 826; 413
ಹುಕ್ಕೇರಿ; 927; 241
ಖಾನಾಪುರ; 462; 115
ಪರಸಗಡ; 779; 160
ರಾಮದುರ್ಗ; 957; 191
ಒಟ್ಟು; 13,873; 5,059

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.