ADVERTISEMENT

ಪಾಲಿಕೆಯಿಂದ ₹20 ಕೋಟಿ ಪರಿಹಾರ ನೀಡಲು ಸಮ್ಮತಿ ಇಲ್ಲ: ಸಚಿವ ಸತೀಶ ಜಾರಕಿಹೊಳಿ

ಸ್ಮಾರ್ಟ್‌ಸಿಟಿ ಯೋಜನೆ ಅಡಿ ಮಾಡಿದ ಕಾಮಗಾರಿಗೆ ಮಹಾನಗರ ಪಾಲಿಕೆ ಪರಿಹಾರ ಕೊಡುವುದು ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 10:57 IST
Last Updated 28 ಆಗಸ್ಟ್ 2024, 10:57 IST
<div class="paragraphs"><p>ಸಚಿವ ಸತೀಶ ಜಾರಕಿಹೊಳಿ</p></div>

ಸಚಿವ ಸತೀಶ ಜಾರಕಿಹೊಳಿ

   

ಬೆಳಗಾವಿ: ‘ಸ್ಮಾರ್ಟ್‌ಸಿಟಿ ಯೋಜನೆ ಅಡಿ ಮಾಡಿದ ಕಾಮಗಾರಿಗೆ ಮಹಾನಗರ ಪಾಲಿಕೆ ಪರಿಹಾರ ಕೊಡುವುದು ಸರಿಯಲ್ಲ. ಇದರಲ್ಲಿ ರಾಜಕೀಯ ಹಿತಾಸಕ್ತಿಯೂ ಇದೆ. ಈ ವಿಚಾರದಲ್ಲಿ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ಕೈಗೊಂಡ ನಿರ್ಣಯಕ್ಕೆ ನನ್ನ ಸಮ್ಮತಿ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ನಗರದಲ್ಲಿ ರಸ್ತೆಯೊಂದರ ವಿಸ್ತರಣೆಗಾಗಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಇದಕ್ಕೆ ₹20 ಕೋಟಿ ಪರಿಹಾರ ಕೊಡಬೇಕು ಎಂದು ಮಾಲೀಕರು ನ್ಯಾಯಾಲಯ ಮೊರೆ ಹೋಗಿದ್ದರು. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಈ ಮೊತ್ತವನ್ನು ಸ್ಮಾರ್ಟ್‌ಸಿಟಿ ಭರಿಸಬೇಕಿತ್ತು. ರಾಜಕೀಯ ಮಾಡಿ ಮಹಾನಗರ ಪಾಲಿಕೆ ಮೇಲೆ ಅಪರಾಧ ಹೊರಿಸಲಾಗಿದೆ’ ಎಂದು ಅವರು ನಗರದಲ್ಲಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ADVERTISEMENT

‘ಪರಿಹಾರವಾಗಿ ₹20 ಕೋಟಿಯನ್ನು ವಿಶೇಷ ಭೂಸ್ವಾಧೀನ ಅಧಿಕಾರಿ ಖಾತೆಯಲ್ಲಿ ಠೇವಣಿ ಮಾಡಲು ನಿರ್ಧರಿಸಿದ್ದಾರೆ. ಇದು ಸರಿಯಾದ ಮಾರ್ಗವಲ್ಲ. ಪಾಲಿಕೆಯ ದುಡ್ಡು ಉಳಿಸಿಕೊಳ್ಳಲು ಸಾಧ್ಯವಿದೆಯೇ ಎಂದು ಚರ್ಚೆ ಮಾಡುತ್ತೇವೆ’ ಎಂದರು.

‘ಹಿಂದೆ ಜಿಲ್ಲಾಧಿಕಾರಿ ಪಾಲಿಕೆ ಆಡಳಿತಾಧಿಕಾರಿ ಆಗಿದ್ದ ವೇಳೆ ಈ ಭೂಸ್ವಾಧೀನ ಹಾಗೂ ಕಾಮಗಾರಿ ನಡೆದಿದೆ. ₹35 ಸಾವಿರಕ್ಕೆ ಒಂದು ಚದರ ಅಡಿಯಂತೆ ಪರಿಹಾರ ನಿಗದಿ ಮಾಡಲಾಗಿದೆ. ಆಗಿನ ಪಾಲಿಕೆ ಆಯುಕ್ತರ ಮೇಲೆ ರಾಜಕೀಯ ಒತ್ತಡ ಹೇರಿ ದೊಡ್ಡ ಮೊತ್ತದ ಪರಿಹಾರ ಘೋಷಿಸುವಂತೆ ಮಾಡಲಾಗಿದೆ. ಆಗಿನ ಆಯುಕ್ತರ ಮೇಲೂ ತನಿಖೆ ಆಗಬೇಕಿದೆ. ಶಾಸಕರೊಬ್ಬರೇ ಪ್ರಭಾವ ಬೀರಿ ಇದನ್ನು ಮಾಡಿಸಿದ್ದಾರೆ. ಈಗ ಪಾಲಿಕೆ ಮೇಲೂ ಪ್ರಭಾವ ಬೀರಿ ಅವರೊಬ್ಬರೇ ಪರಿಹಾರ ಕೊಡಿಸುವ ನಿರ್ಧಾರ ಮಾಡಿದ್ದಾರೆ’ ಎಂದು ಅವರು ಪರೋಕ್ಷವಾಗಿ ಶಾಸಕ ಅಭಯ ಪಾಟೀಲ ವಿರುದ್ಧ ಹರಿಹಾಯ್ದರು.

‘ವ್ಯಾಜ್ಯ ನಡೆದಾಗ ಪಾಲಿಕೆಯ ಕಾನೂನು ಸಲಹೆಗಾರರು ಸರಿಯಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಅವರು ಕೂಡ ಒತ್ತಡಕ್ಕೆ ಸಿಲುಕಿರಬಹುದು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಪ್ರಕರಣದಲ್ಲಿ ಸಮಗ್ರ ತನಿಖೆ ಮಾಡಿಸಲಾಗುವುದು’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆದಾಯ ಬಾಕಿ:

‘ಮಹಾನಗರ ಪಾಲಿಕೆಗೆ ವಿವಿಧ ಮೂಲಗಳಿಂದ ಸರಿಯಾಗಿ ಆದಾಯ ಹರಿದುಬರುತ್ತಿಲ್ಲ. ಇನ್ನೂ ಶೇ 40ರಷ್ಟು ವಸೂಲಿ ಬಾಕಿ ಇದೆ. ಇದಕ್ಕೆ ವಿಶೇಷ ಸಮಿತಿ ರಚನೆ ಮಾಡಿ ವಸೂಲಿ ಮಾಡಿಸುವ ಕುರಿತು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗುವುದು’ಎಂದು ಸಚಿವ ತಿಳಿಸಿದರು.

‘ವಿವಿಧ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾಲಿಕೆಯಿಂದ ಇನ್ನೂ ₹8 ಕೋಟಿ ಜಿಎಸ್‌ಟಿ ಕಟ್ಟುವುದು ಬಾಕಿ ಇದೆ. ಆಗಿನ ಆಯುಕ್ತರು ಯಾರದೋ ಕೈಗೊಂಬೆಯಾಗಿ ಸರಿಯಾಗಿ ಕೆಲಸ ಮಾಡಿಲ್ಲ. ಇದೆಲ್ಲವನ್ನೂ ಸರಿ ಮಾಡಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.