ಅಥಣಿ: ‘ಶಾಲೆ ಕಾಲೇಜುಗಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವ ಕುರಿತು ಸರ್ಕಾರ ಮಟ್ಟದಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲ’ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ವಿವಿಧೋದ್ದೇಶ ಸಹಕಾರಿ ಸಂಘದ 75ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಾತಿ ಜನಗಣತಿ ಕಾಂತರಾಜು ನಿಯೋಗ ನಡೆಸಿದ ವರದಿಯನ್ನು ಲಿಂಗಾಯತ ಮಹಾ ಸಭೆಯಲ್ಲಿ ತಿರಸ್ಕರಿಸಿದ ವಿಚಾರಕ್ಕೆ ಮಾತನಾಡಿ, ಮತ್ತೊಮ್ಮೆ ಜಾತಿ ಜನಗಣತಿ ಮಾಡುವಂತೆ ವೀರಶೈವರ ಒತ್ತಾಯ ಇದೆ ಎಂದು ಪ್ರತಿಕ್ರಿಯಿಸಿದರು.
ಸಕ್ಕರೆ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸವಾಗುತ್ತಿರುವ ಕುರಿತು ಆರೋಪಗಳು ಕೇಳಿ ಬರುತ್ತಿವೆ. ಮುಂದಿನ ಕಬ್ಬು ಕಟಾವು ಹಂಗಾಮಿಗೆ ಸರ್ಕಾರ ವತಿಯಿಂದ ತೂಕದ ಯಂತ್ರ ಅಳವಡಿಕೆ ಮಾಡಲಾಗುವುದು. ತಾಲ್ಲೂಕಿನ ಎಪಿಎಂಸಿ ತೂಕದ ಯಂತ್ರದಲ್ಲಿ ತೂಕ ಮಾಡಿಕೊಂಡು ನಂತರ ಕಾರ್ಖಾನೆಗಳಿಗೆ ರೈತರು ಕಬ್ಬು ಸರಬರಾಜು ಮಾಡಬೇಕು. ಸಕ್ಕರೆ ಕಾರ್ಖಾನೆ ಮೋಸ ಮಾಡದಲ್ಲಿ ಲೈಸೆನ್ಸ್ ರದ್ದು ಮಾಡಲಾಗುವುದು. ಮುಂದಿನ ವರ್ಷ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಡಿಜಿಟಲ್ ತೂಕದ ಯಂತ್ರ ಅಳವಡಿಕೆ ಮಾಡಲಾಗುವುದು’ ಎಂದು ಹೇಳಿದರು.
‘ಕಳೆದ ಬಾರಿ ಸಕ್ಕರೆ ಕಾರ್ಖಾನೆಗಳು ₹19 ಸಾವಿರಾ ಕೋಟಿ ಬಾಕಿ ಹಣವನ್ನು ಉಳಿಸಿಕೊಂಡಿದ್ದರು. ನಾನು ಸಚಿವನಾದ ಬಳಿಕ ₹20 ಸಾವಿರ ಕೋಟಿ ಕೊಡಿಸಲಾಗಿದೆ. ಹೆಚ್ಚು ಲಾಭದಲ್ಲಿರುವ ಕಾರ್ಖಾನೆಗಳಿಂದ ರೈತರಿಗೆ ಹೆಚ್ಚುವರಿ ಹಣವನ್ನು ಕೊಡಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.