ಬೆಳಗಾವಿ: ಕೋವಿಡ್ ಅಲೆ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲೂ ಜಿಲ್ಲೆಯ ಅಲ್ಲಲ್ಲಿ ವೈದ್ಯಕೀಯ ತ್ಯಾಜ್ಯದ ಸಮರ್ಪಕ ವಿಲೇವಾರಿ ನಡೆಯುತ್ತಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿನ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಹೊರಹಾಕಲಾಗಿರುತ್ತದೆ. ನಿಯಮಿತವಾಗಿ ವಿಲೇವಾರಿಗೆ ಗಮನಹರಿಸುತ್ತಿಲ್ಲ. ಹೀಗಾಗಿ, ಆಗಾಗ ಚೀಲಗಳ ರಾಶಿಯು (ಅಂಬೇಡ್ಕರ್ ರಸ್ತೆ ಕಡೆಯಿಂದ) ಕಂಡುಬರುತ್ತದೆ. ಬಳಸಿದ ಕೈಗವುಸು, ಮುಖಗವಸು, ಪಿಪಿಇ ಉಡುಪು, ಔಷಧ ಪೊಟ್ಟಣ ಇತ್ಯಾದಿ ಎಲ್ಲವನ್ನೂ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಗಂಟುಕಟ್ಟಿ ಹಾಕಲಾಗಿರುತ್ತದೆ.
ಕೋವಿಡ್ ಕಾಣಿಸಿಕೊಂಡ ಬಳಿಕ ವೈದ್ಯಕೀಯ ತ್ಯಾಜ್ಯ ಉತ್ಪಾದನೆ ಹೆಚ್ಚಾಗಿದೆ. ನಗರದಲ್ಲಿ ನಿತ್ಯ ಅಂದಾಜು 800 ಕೆ.ಜಿ. ಉತ್ಪತ್ತಿ ಆಗುತ್ತಿದೆ. ಆದರೆ, ವೈಜ್ಞಾನಿಕ ವಿಲೇವಾರಿಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ.
ವಿಚಕ್ಷಣೆಯೇ ಇಲ್ಲ!:
ಬಹುತೇಕ ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಲ್ಲಿ ಇದರ ವಿಂಗಡಣೆಗೆ ಪ್ರತ್ಯೇಕ ಸಿಬ್ಬಂದಿ ಇಲ್ಲ. ಸಾಮಾನ್ಯ ತ್ಯಾಜ್ಯ ವಿಂಗಡಿಸುವವರೆ ನಿರ್ವಹಣೆ ಮಾಡುತ್ತಿದ್ದಾರೆ! ಇದರಿಂದ ಅದು ಇತರ ಘನತ್ಯಾಜ್ಯದೊಂದಿಗೆ ಸೇರಿಕೊಳ್ಳುವ ಸಾದ್ಯತೆಯೂ ಇದೆ. ಕೆಲವರು, ಕತ್ತಲಾದ ನಂತರ ಹೊರವಲಯದಲ್ಲಿ ಅಥವಾ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಸುರಿದು ಕೈತೊಳೆದುಕೊಳ್ಳುವುದು ಸಾಮಾನ್ಯವಾಗಿದೆ. ಇದನ್ನು ತಡೆಯುವುದಕ್ಕೆ ವಿಚಕ್ಷಣೆಯೇ ಇಲ್ಲವಾಗಿದೆ!
ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳು, ಔಷಧ ಅಂಗಡಿಗಳು, ಸ್ಕ್ಯಾನಿಂಗ್ ಸೆಂಟರ್, ಪ್ರಯೋಗಾಲಯ ಮೊದಲಾದವು ಸೇರಿದಂತೆ 1,750ಕ್ಕೂ ಅಧಿಕ ವೈದ್ಯಕೀಯ ಸಂಸ್ಥೆಗಳು ಇವೆ. ನಗರವೊಂದರಲ್ಲಿಯೇ 730ಕ್ಕೂ ಅಧಿಕ ವೈದ್ಯಕೀಯ ಸಂಸ್ಥೆಗಳಿವೆ. ನಿತ್ಯ ಅಂದಾಜು 750 ಕೆ.ಜಿ.ಗೂ ಹೆಚ್ಚು ವೈದ್ಯಕೀಯ ತ್ಯಾಜ್ಯ ಉತ್ಪಾದನೆ ಆಗುತ್ತಿತ್ತು. ಈಗ ಆ ಪ್ರಮಾಣ ಮತ್ತಷ್ಟು ಹೆಚ್ಚಿದೆ. ಇವುಗಳ ಸಂಸ್ಕರಣೆಗೆ 3 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ ಖಾಸಬಾಗ್‌ನಲ್ಲಿರುವ ಘಟಕವನ್ನು, ಕಡಿಮೆ ಜಾಗದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ತ್ಯಾಜ್ಯ ಸಂಗ್ರಹಿಸುತ್ತಿದ್ದ ಕಾರಣದಿಂದ ಜಪ್ತಿ ಮಾಡಲಾಗಿತ್ತು. ಹಾರೂಗೊಪ್ಪ ಹಾಗೂ ಕೆಎಲ್‌ಇ ಆಸ್ಪತ್ರೆಯಲ್ಲಿ ಮಾತ್ರ ಜೈವಿಕ ತ್ಯಾಜ್ಯ ಸಂಸ್ಕರಣೆ ಕಾರ್ಯ ನಡೆಯುತ್ತಿದೆ.
ಜಲಮೂಲಗಳಿಗೆ ವಿಷ:
ವೈದ್ಯಕೀಯ ತ್ಯಾಜ್ಯ (ಬಯೊವೇಸ್ಟ್)ವನ್ನು ಅಲ್ಲಲ್ಲಿ ರಸ್ತೆಬದಿಯಲ್ಲಿ, ನದಿಗಳ ಪಾತ್ರದಲ್ಲಿ ಸುರಿಯುವುದು ಕಂಡುಬರುತ್ತಿದೆ. ಇದರಿಂದಾಗಿ ಜಲ ಮೂಲಗಳಿಗೆ ವಿಷ ಸೇರುತ್ತಿದೆ. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ‘ಅಲ್ಲಲ್ಲಿ ಅಸಮರ್ಪಕ ವಿಲೇವಾರಿ ಆಗುತ್ತಿರುವುದು ಗಮನಕ್ಕೆ ಬಂದಿದೆ. ಕ್ರಮ ವಹಿಸುವಂತೆ ಟಿಎಚ್‌ಒಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.
ಮಾರಕವಾಗುತ್ತಿದೆ:
ಎಂ.ಕೆ. ಹುಬ್ಬಳ್ಳಿ: ಪಟ್ಟಣದಲ್ಲಿ ತ್ಯಾಜ್ಯವನ್ನು ಜಲ ಮೂಲಗಳ ಬಳಿ ಹಾಕುವುದು ಕಂಡುಬರುತ್ತಿದೆ. ಇದರಿಂದ ನೀರು ಕಲ್ಮಶಗೊಂಡು ಅನಾರೋಗ್ಯದ ಜೊತೆಗೆ ಪಕ್ಷಿ-ಪ್ರಾಣಿ, ಜಲಚರಗಳಿಗೆ ಮಾರಕವಾಗುತ್ತಿದೆ. ಕಸ ವಿಲೇವಾರಿಗೆ ಪಟ್ಟಣದಲ್ಲಿ ಈವರೆಗೆ ವಿಲೇವಾರಿ ಘಟಕ ಸ್ಥಾಪಿಸಿಲ್ಲ. ಕಸದ ರಾಶಿಯು ಆಗಾಗ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತದೆ. ಬಳಸಿದ ಔಷಧಿ ಬಾಟಲಿ, ಸೂಜಿ ಸೇರಿ ಇತರ ತ್ಯಾಜ್ಯಗಳನ್ನು ನದಿ, ಹಳ್ಳ ಸೇರಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಪಟ್ಟಣ ಪಂಚಾಯ್ತಿಯು ಇವುಗಳ ಪ್ರತ್ಯೇಕ ನಿರ್ವಹಣೆಗೆ ಅಗತ್ಯ ಕ್ರಮ ವಹಿಸಿಲ್ಲ. ಬಳಸಿದ ಮಾಸ್ಕ್‌ಗಳನ್ನು ಜನರು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಮಲಪ್ರಭಾ ನದಿ ಹಾಗೂ ಬಳಿಯ ಹಳ್ಳ-ಕೊಳ್ಳಗಳಲ್ಲಿ ವೈದ್ಯಕೀಯ ತ್ಯಾಜ್ಯ ಎಸೆಯಲಾಗುತ್ತಿದೆ. ಸಮರ್ಪಕ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಸವದತ್ತಿಯಲ್ಲಿ ಸಮರ್ಪಕ ವಿಲೇವಾರಿ:
ಸವದತ್ತಿ: ವೈದ್ಯಕೀಯ ತ್ಯಾಜ್ಯ ವಿಲೇವಾರಿ ಕ್ರಮದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆ ಮಾದರಿಯಾಗಿದೆ. ಬೈಲಹೊಂಗಲ ತಾಲ್ಲೂಕಿನ ಹಾರೊಗೊಪ್ಪ ಗ್ರಾಮದಲ್ಲಿ ಬೆಳಗಾವಿ ಗ್ರೀನ್ ಎನ್ವಿರಾನ್‍ಮೆಂಟ್ ಪ್ರೈ.ಲಿ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕಕ್ಕೆ ದಿನ ಬಿಟ್ಟು ದಿನ ತ್ಯಾಜ್ಯ ಕಳುಹಿಸಲಾಗುತ್ತಿದೆ. ಆಸ್ಪತ್ರೆಯೇ ಇದರ ಖರ್ಚನ್ನು ನಿಭಾಯಿಸಿ ಪ್ರತಿ ತಿಂಗಳು ಹಣ ಪಾವತಿಸುತ್ತಿದೆ. ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆಂದು ನಿರ್ದಿಷ್ಟ ಕೊಠಡಿ ಇದೆ. ಪ್ರತಿ ವಾರ್ಡ್‌ನಲ್ಲಿನ ತ್ಯಾಜ್ಯವನ್ನು ವಿಂಗಡಿಸಿ ನಿರ್ದಿಷ್ಟ ಡಬ್ಬಿಗಳಲ್ಲಿ ಸಂಗ್ರಹಿಸಿ ಕೊಡಲಾಗುತ್ತಿದೆ. ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯನ್ನು ಘಟಕ ಹೊಂದಿದೆ.
ಎಲ್ಲೆಂದರಲ್ಲಿ:
ಬೈಲಹೊಂಗಲ: ಪಟ್ಟಣದಲ್ಲಿವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕಗ್ಗಂಟಾಗಿದೆ. ಹಸಿ ಮತ್ತು ಒಣ ತ್ಯಾಜ್ಯ ವಿಂಗಡಿಸುವ ಮಾದರಿಯಲ್ಲಿ ವೈದ್ಯಕೀಯ ತ್ಯಾಜ್ಯ ಬೇರ್ಪಡಿಸಿ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆದಿಲ್ಲ. ಎಲ್ಲೆಂದರಲ್ಲಿ ಬಿಸಾಡಿರುವುದರಿಂದ ವಾತಾವರಣ ಹಾಳಾಗುತ್ತಿದೆ.
ಖಾನಾಪುರದಲ್ಲಿ ನಿರ್ವಹಣೆ:
ಖಾನಾಪುರ: ಪಟ್ಟಣ ಪಂಚಾಯಿತಿಯಿಂದ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಲಾಗುತ್ತಿದೆ. ಬಳಸಿ ಬಿಸಾಡಿದ ಮಾಸ್ಕ್‌ಗಳು, ಸ್ಯಾನಿಟೈಸರ್ ಬಾಟಲಿಗಳು, ಮಾತ್ರೆಗಳ ಪ್ಲಾಸ್ಟಿಕ್ ಕವರ್, ಸಿರಂಜ್ ಮೊದಲಾದವುಗಳನ್ನು ಕಸದಿಂದ ಪ್ರತ್ಯೇಕಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ವಿವಿಧ ಆಸ್ಪತ್ರೆ, ಲ್ಯಾಬ್ ಮತ್ತು ಔಷಧಿ ಮಳಿಗೆಗಳಿಂದ ವೈದ್ಯಕೀಯ ತ್ಯಾಜ್ಯ ಪಡೆದು ಪ್ರತ್ಯೇಕವಾಗಿ ಸಾಗಿಸಿ, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ.
ತಲೆಕೆಡಿಸಿಕೊಳ್ಳುತ್ತಿಲ್ಲ:
ಗೋಕಾಕ: ವೈದ್ಯಕೀಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದು ತಾಲ್ಲೂಕಿನಲ್ಲೂ ಕಂಡುಬರುತ್ತಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆ ಮತ್ತು ಇತರ 7 ಕೋವಿಡ್ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ವೈದ್ಯಕೀಯ ತ್ಯಾಜ್ಯಗಳ ವಿಲೇವಾರಿಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಹೊರವಲಯದ ಫಾಲ್ಸ್ ರಸ್ತೆ ಬದಿಯಲ್ಲಿ ಬಳಕೆ ನಂತರದ ಹಲವು ಪಿಪಿಇ ಉಡುಪುಗಳನ್ನು ಎಸೆದು ಪರಿಸರವನ್ನು ಮಾಲಿನ್ಯಗೊಳಿಸಲಾಗಿದೆ. ನಿಗದಿತ ವಿಧಾನದಲ್ಲಿ ವಿಲೇವಾರಿ ಆಗುತ್ತಿಲ್ಲ.
ವಾರಕ್ಕೆ 2 ಬಾರಿ:
ತೆಲಸಂಗ: ವೈದ್ಯಕಿಯ ತ್ಯಾಜ್ಯ ನಿರ್ವಹಣೆಗಾಗಿ ವಾಹನ ವ್ಯವಸ್ಥೆ ಮಾಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಾರಕ್ಕೆ 2 ಬಾರಿ ವಾಹನ ಬಂದು ಸಾಗಿಸುತ್ತದೆ. ಆದರೆ, ಎಲ್ಲೆಂದರಲ್ಲಿ ತಿಪ್ಪೆಗಳು ರಸ್ತೆಯ ಬದಿಯಲ್ಲಿ ತಲೆಎತ್ತಿದ್ದರಿಂದ ಸಾಂಕ್ರಾಮಿಕ ರೋಗಕ್ಕೆ ಅಹ್ವಾನ ನೀಡಿದಂತಾಗಿದೆ. ಕೊರೊನಾ ಭೀತಿಯಲ್ಲಿರುವ ಜನರಿಗೆ ಸಾಂಕ್ರಾಮಿಕ ರೋಗದ ಆತಂಕವೂ ಶುರುವಾಗಿದೆ.
ರಸ್ತೆ ಬದಿಗೆ ತ್ಯಾಜ್ಯ ಚೆಲ್ಲುವರು
ಚನ್ನಮ್ಮನ ಕಿತ್ತೂರು: ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕೆಲವು ಖಾಸಗಿ ದವಾಖಾನೆ ವೈದ್ಯರು ವೈದ್ಯಕೀಯ ತ್ಯಾಜ್ಯ ವಿಲೇವಾರಿಯ ಜವಾಬ್ದಾರಿಯನ್ನು ಬೆಳಗಾವಿಯ ಹಸಿರು ಪರಿಸರ ನಿರ್ವಹಣೆ (ಬಿಜಿಐಎಂಪಿ) ಸಂಸ್ಥೆಗೆ ನೀಡಲಾಗಿದೆ. 2 ದಿನಕ್ಕೊಮ್ಮೆ ಸಂಸ್ಥೆ ಸಿಬ್ಬಂದಿ ಬಂದು ಆಸ್ಪತ್ರೆಯವರು ವಿಂಗಡಿಸಿಟ್ಟಿರುವ ಒಣ ಮತ್ತು ಹಸಿ ತ್ಯಾಜ್ಯ ತೆಗೆದುಕೊಂಡು ಹೋಗುತ್ತಾರೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಿವಾನಂದ ಮಾಸ್ತಿಹೊಳಿ ಮಾಹಿತಿ ನೀಡುತ್ತಾರೆ. ಕೆಲವು ಖಾಸಗಿ ವೈದ್ಯರು ಸಿರಿಂಜ್, ರಕ್ತ ಒರೆಸಿದ ಹತ್ತಿ, ಬಟ್ಟೆ ಸೇರಿದಂತೆ ಕೆಲವು ವಸ್ತುಗಳನ್ನು ರಸ್ತೆ ಪಕ್ಕದಲ್ಲಿ ಚೆಲ್ಲುವುದು ಕಂಡುಬಂದಿದೆ.
ಹಾರೂಗೊಪ್ಪದಲ್ಲಿ ನಾಶ
ರಾಮದುರ್ಗ: ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಬಳಸಿದ ನಿರುಪಯುಕ್ತ ವಸ್ತುಗಳನ್ನು ವಿಂಗಡಿಸಿ ಹೊರಗುತ್ತಿಗೆ ಸಂಸ್ಥೆಯೊಂದು ತೆಗೆದುಕೊಂಡು ಹೋಗಿ ಹಾರೂಗೊಪ್ಪದಲ್ಲಿ ನಾಶ ಪಡಿಸುತ್ತಾರೆ. ವಾರದಲ್ಲಿ ಎರಡು ಸಾರಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುವ ತಂಡ ವಿಂಗಡಿಸಿದ ತ್ಯಾಜ್ಯ ಒಯ್ದು ನಾಶಪಡಿಸುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಚಿಕ್ಕೋಡಿಯಲ್ಲೂ ವಿಲೇವಾರಿ
ಚಿಕ್ಕೋಡಿ: ಪುರಸಭೆಯು ಹೊರವಲಯದಲ್ಲಿರುವ ಚನ್ಯಾನದಡ್ಡಿ ಬಳಿ ತ್ಯಾಜ್ಯ ವಿಲೇವಾರಿ ಘಟಕ ಹೊಂದಿದೆ. ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ವಿಲೇವಾರಿ ಮಾಡಲಾಗುತ್ತಿದೆ. ಎರೆಹುಳು ಗೊಬ್ಬರ ತಯಾರಿಕೆ ಘಟಕವೂ ಇದೆ. ವೈದ್ಯಕೀಯ ತ್ಯಾಜ್ಯವನ್ನು ಕಂಪನಿಯೊಂದು ಎರಡು ದಿನಕ್ಕೊಮ್ಮೆ ವಾಹನದಲ್ಲಿ ಬಂದು ಸಂಗ್ರಹಿಸಿಕೊಂಡು ಹೋಗುತ್ತಿದೆ. ಹಾರೂಗೊಪ್ಪದಲ್ಲಿರುವ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ ಕುನ್ನೂರೆ ತಿಳಿಸಿದರು.
ಗುತ್ತಿಗೆ ನೀಡಲಾಗಿದೆ
ಮೂಡಲಗಿ: ಮೂಡಲಗಿ ತಾಲ್ಲೂಕು ರಚನೆಯಾದ ಮೇಲೆ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿದೆ. ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಮತ್ತು 35ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಲ್ಯಾಬ್‌ಗಳು, ಸರ್ಕಾರಿ ಪಶು ಆಸ್ಪತ್ರೆಗಳು ಇವೆ. ಇಲ್ಲಿಯ ಆಸ್ಪತ್ರೆಯ ಮತ್ತು ಲ್ಯಾಬ್‌ಗಳಲ್ಲಿ ಸಂಗ್ರಹವಾಗುವ ಜೈವಿಕ ತ್ಯಾಜ್ಯದ ವಿಲೇವಾರಿಗೆ ಗುತ್ತಿಗೆ ಮೇಲೆ ಖಾಸಗಿ ಸಂಸ್ಥೆಯಾಗಿರುವ ‘ಬೆಳಗಾವಿ ಗ್ರೀನ್ ಎನ್‌ವಿರಾನ್‌ಮೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ’ಗೆ ನೀಡಿದ್ದಾರೆ. ಸಂಸ್ಥೆಯ ವಾಹನವು 2 ದಿನಕ್ಕೊಮ್ಮೆ ಬಂದು ಆಸ್ಪತ್ರೆಗಳಲ್ಲಿಯ ತ್ಯಾಜ್ಯ ಸಂಗ್ರಹಿಸಿಕೊಂಡು ಹೋಗುತ್ತದೆ.
‘ಮೂಡಲಗಿಯಲ್ಲಿ ಆಸ್ಪತ್ರೆಗಳಲ್ಲಿಯ ಜೈವಿಕ ತ್ಯಾಜ್ಯ ವಿಲೇವಾರಿಗೆ ಎಲ್ಲ ಆಸ್ಪತ್ರೆಗಳಿಂದಲೂ ಉತ್ತಮ ಸ್ಪಂದನೆ ಇದೆ. ಅಪಾಯಕಾರಿ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತೇವೆ. ನಿಗದಿತ ಘಟಕದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಸುಡಲಾಗುತ್ತದೆ’ ಎಂದು ಸಂಸ್ಥೆಯ ಮೂಡಲಗಿ ತಾಲ್ಲೂಕಿನ ಮೇಲ್ವಿಚಾರಕ ರವಿ ನಾಗನ್ನವರ ತಿಳಿಸಿದರು.
‘ಸ್ಥಳೀಯ ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಜೈವಿಕ ತ್ಯಾಜ್ಯ ವಿಲೇವಾರಿ ಬಗ್ಗೆ ನಿಗಾ ವಹಿಸಲಾಗುತ್ತಿದೆ’ ಎಂದು ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಪ್ರತಿಕ್ರಿಯಿಸಿದರು.
******
* ಖಾನಾಪುರ ಪಟ್ಟಣ ಪಂಚಾಯಿತಿಯ ಕಸ ಸಂಗ್ರಹಣೆ ವಾಹನ ದಿನಕ್ಕೆ 2 ಬಾರಿ ನಮ್ಮ ಆಸ್ಪತ್ರೆಗೆ ಬಂದು ಹೋಗುತ್ತದೆ. ಮುಂಜಾನೆ ಇತರ ತ್ಯಾಜ್ಯ ಮತ್ತು ಸಂಜೆ ವೈದ್ಯಕೀಯ ತ್ಯಾಜ್ಯ ಪಡೆಯಲಾಗುತ್ತಿದೆ.
- ಡಾ.ನಾರಾಯಣ ವಡ್ಡಿನ, ಹಿರಿಯ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ ಖಾನಾಪುರ
* ಗೋಕಾಕದ ಫಾಲ್ಸ್ ರಸ್ತೆಯಲ್ಲಿ ಪಿಪಿಇ ಕಿಟ್‌ಗಳನ್ನು ಎಸೆಯಲಾಗುತ್ತಿದೆ ಎಂಬ ಮಾಹಿತಿ ನಮ್ಮ ಗಮನಕ್ಕೂ ಬಂದಿದೆ. ಅದು ತಪ್ಪು. ವೈದ್ಯಕೀಯ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಜನರು ಸಹಕರಿಸಬೇಕು
- ಶಿವಾನಂದ ಹಿರೇಮಠ, ಪ್ರಭಾರ ಪೌರಾಯುಕ್ತ, ನಗರಸಭೆ
* ನಮ್ಮ ಆಸ್ಪತ್ರೆಯ ತ್ಯಾಜ್ಯವನ್ನು ವಾರಕ್ಕೆ ಎರಡುಬಾರಿ ವಾಹನ ಬಂದು ತೆಗೆದುಕೊಂಡು ಹೋಗುತ್ತದೆ. ಎಲ್ಲೆಂದರಲ್ಲಿ ಬಿಸಾಡದಂತೆ ಇನ್ನು ಖಾಸಗಿ ಆಸ್ಪತ್ರೆಯವರಿಗೂ ಸೂಚಿಸಲಾಗಿದೆ. ಸುಟ್ಟು ಹಾಕುವಂತೆ ತಿಳಿಸಲಾಗಿದೆ.
-ಡಾ.ವಾಸಂತಿ, ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ತೆಲಸಂಗ
* ಕಿತ್ತೂರು ಸಿಎಚ್‌ಸಿಯಲ್ಲಿನ ವೈದ್ಯಕೀಯ ತ್ಯಾಜ್ಯ ವಿಲೇವಾರಿಯನ್ನು ಬೆಳಗಾವಿಯ ಗ್ರೀನ್ ಸಂಸ್ಥೆ ಮಾಡುತ್ತಿದೆ. ಎರಡು ದಿನಕ್ಕೊಮ್ಮೆ ಸಿಬ್ಬಂದಿ ಬಂದು ತೆಗೆದುಕೊಂಡು ಹೋಗುತ್ತಾರೆ.
-ಡಾ.ಶಿವಾನಂದ ಮಾಸ್ತಿಹೊಳಿ ವೈದ್ಯಾಧಿಕಾರಿ, ಸಿಎಚ್‌ಸಿ, ಕಿತ್ತೂರು
* ಮೂಡಲಗಿಯ ಆಸ್ಪತ್ರೆಯಲ್ಲಿಯ ಕೋವಿಡ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಅದನ್ನು ನಿಗದಿತ ಸ್ಥಳದಲ್ಲಿ ಪ್ರತ್ಯೇಕವಾಗಿ ಸುಡಲಾಗುವುದು.
- ರವಿ ನಾಗನ್ನವರ ಮೂಡಲಗಿ, ತಾಲ್ಲೂಕು ಮೇಲ್ವಿಚಾರಕ, ಬೆಳಗಾವಿ ಗ್ರೀನ್ ಎನ್‌ವಿರಾನ್‌ಮೆಂಟ್ ಮ್ಯಾನೇಜ್‌ಮೆಂಟ್
* ಮುನವಳ್ಳಿಯಲ್ಲಿ ಆಸ್ಪತ್ರೆ ತ್ಯಾಜ್ಯ, ಇನ್ನಿತರ ತ್ಯಾಜ್ಯವನ್ನು ಮಲಪ್ರಭಾ ನದಿಯ ದಡದಲ್ಲಿ ಹಾಕುವುದು ಕಂಡುಬರುತ್ತಿದೆ. ಇದರಿಂದ ನದಿ ಮಲಿನವಾಗುತ್ತಿದ್ದು, ಪುರಸಭೆ ಅಧಿಕಾರಿಗಳು ಕ್ರಮ ವಹಿಸಬೇಕು.
-ಕಿರಣ ಯಲಿಗಾರ, ನಿವಾಸಿ, ಮುನವಳ್ಳಿ
(ಪ್ರಜಾವಾಣಿ ತಂಡ: ಎಂ. ಮಹೇಶ, ಬಸವರಾಜ ಶಿರಸಂಗಿ, ಎಸ್.ವಿಭೂತಿಮಠ, ಚನ್ನಪ್ಪ ಮಾದರ, ಪ್ರದೀಪ ಮೇಲಿನಮನಿ, ರಾಮೇಶ್ವರ ಕಲ್ಯಾಣಶೆಟ್ಟಿ, ಸುಧಾಕರ ತಳವಾರ, ಪ್ರಸನ್ನ ಕುಲಕರ್ಣಿ, ರವಿ ಎಂ. ಹುಲಕುಂದ, ಬಾಲಶೇಖರ ಬಂದಿ, ಜಗದೀಶ ಖೊಬ್ರಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.