ADVERTISEMENT

ಸಿ.ಎಂ ಸ್ಥಾನದ ರೇಸ್‌ನಲ್ಲಿ ಯಾರೂ ಇಲ್ಲವೇ ಇಲ್ಲ: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 6:00 IST
Last Updated 11 ಸೆಪ್ಟೆಂಬರ್ 2024, 6:00 IST
   

ಬೆಳಗಾವಿ: ‘ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ. ಈಗ ಸಿ.ಎಂ ಸ್ಥಾನಕ್ಕೆ ರೇಸ್‌ನಲ್ಲಿ ಯಾರೂ ಇಲ್ಲವೇ ಇಲ್ಲ’ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಹೇಳಿದರು.

‘ದೀಪಾವಳಿ ನಂತರ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಇಲ್ಲಿ ಬುಧವಾರ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದ ಅವರು, ‘ಸ್ಥಿರವಾಗಿರುವ ನಮ್ಮ ಸರ್ಕಾರವನ್ನು ಸಹಿಸಿಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲ. ಹಾಗಾಗಿ ಸರ್ಕಾರ ಬೀಳಿಸಲು, ಒಡೆಯಲು ಮತ್ತು ಆಪರೇಷನ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯವರು ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಬದಲಿಗೆ ಕಾಂಗ್ರೆಸ್‌ ಸರ್ಕಾರ ಬೀಳಿಸಲು ಯತ್ನಿಸುವುದೇ ಅವರ ಕೆಲಸವಾಗಿದೆ’ ಎಂದು ಟೀಕಿಸಿದರು.

‘ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಸಿ.ಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನಿರ್ಧಾರವಾಗುತ್ತದೆಯೇ’ ಎಂಬ ಪ್ರಶ್ನೆಗೆ, ‘ಸಿ.ಎಂ ಅವರ ರಾಜಕೀಯ ಭವಿಷ್ಯ ನಿರ್ಧಾರದ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ನ್ಯಾಯಾಲಯದಲ್ಲಿ ನಮಗೆ ವ್ಯತಿರಿಕ್ತವಾದ ತೀರ್ಪು ಬರುವುದಿಲ್ಲ. ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಅಧಿಕಾರ  ದುರುಪಯೋಗ ಪಡಿಸಿಕೊಂಡಿಲ್ಲ’ ಎಂದರು.  

ADVERTISEMENT

‘ರಾಜಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ ವಿರುದ್ಧದ ಭ್ರಷ್ಟಚಾರ ಅರ್ಜಿ ರಾಜಪಾಲರ ಕಚೇರಿಯಲ್ಲಿ ತಿಂಗಳುಗಟ್ಟಲೇ ಬಿದ್ದರೂ, ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಈಗ ಸಿ.ಎಂ ವಿರುದ್ಧ ಖಾಸಗಿ ದೂರು ಬಂದ ತಕ್ಷಣ ನೋಟಿಸು  ಕೊಟ್ಟಿದ್ದಾರೆ. ರಾಜಪಾಲರ ಮನಸ್ಥಿತಿ ಹೇಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಅವರು ಪಕ್ಷಪಾತ ಮಾಡುತ್ತಿರುವುದು ತಿಳಿಯುತ್ತದೆ’ ಎಂದು ಟೀಕಿಸಿದರು.

ಭ್ರಷ್ಟ ಸಿ.ಎಂ ಮತ್ತು ಭ್ರಷ್ಟ ಸಿ.ಎಂ ಆಕಾಂಕ್ಷಿಗಳು ಎಂದು ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿರುವ ಕುರಿತು ಪ್ರತಿಕ್ರಿಯಿಸಿದ ದಿನೇಶ, ‘ಅವರು ಸಾಮಾಜಿಕ ಜಾಲತಾಣದಲ್ಲಿ ಏನೇನೋ ಹಾಕುತ್ತಿರುತ್ತಾರೆ. ಸುಳ್ಳು ಹೇಳುವುದರಲ್ಲಿ ಮತ್ತು ಪ್ರಚೋದನ ಮಾಡುವಲ್ಲಿ ಬಿಜೆಪಿಯವರು ದೇಶದಲ್ಲಿ ನಂಬರ್ ಒನ್ ಅಲ್ಲವೇ’ ಎಂದು ವ್ಯಂಗ್ಯವಾಡಿದರು.

‘ಇಂದು ಖಾನಾಪುರದಲ್ಲಿ ಆಸ್ಪತ್ರೆ ಉದ್ಘಾಟಿಸಲಿದ್ದೇನೆ. ಗೋಕಾಕದಲ್ಲಿ ಆಸ್ಪತ್ರೆ ಕಾಮಗಾರಿ ಪರಿಶೀಲಿಸಲಿದ್ದೇನೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆ ಇದೆ. ಅದನ್ನು ನಿವಾರಿಸಲು ಪ್ರಯತ್ನಿಸುತ್ತೇನೆ. ತಜ್ಞ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುತ್ತೇವೆ. ನಕಲಿ ವೈದ್ಯರ ವಿರುದ್ಧ ಕಾನೂನು ರೀತಿ ಕ್ರಮವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.