ADVERTISEMENT

ಚಿಕ್ಕೋಡಿ: ವಸತಿ ನಿಲಯ ಸ್ಥಳಾಂತರಕ್ಕೆ ಸೂಚನೆ

ವಸತಿ ನಿಲಯಕ್ಕೆ ಬೆಳಗಾವಿಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನವೀನ ಶಿಂತ್ರೆ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 15:17 IST
Last Updated 3 ಜೂನ್ 2024, 15:17 IST
ಚಿಕ್ಕೋಡಿ ಪಟ್ಟಣದಲ್ಲಿ ಶಿಥಿಲಗೊಂಡ ಬಾಲಕಿಯರ ವಸತಿ ನಿಲಯವನ್ನು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನವೀನ ಶಿಂತ್ರೆ ವೀಕ್ಷಿಸಿದರು
ಚಿಕ್ಕೋಡಿ ಪಟ್ಟಣದಲ್ಲಿ ಶಿಥಿಲಗೊಂಡ ಬಾಲಕಿಯರ ವಸತಿ ನಿಲಯವನ್ನು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನವೀನ ಶಿಂತ್ರೆ ವೀಕ್ಷಿಸಿದರು   

ಚಿಕ್ಕೋಡಿ: ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ದುಃಸ್ಥಿತಿಯ ಕುರಿತು ಮೇ 29ರಂದು ‘ಪ್ರಜಾವಾಣಿ’ಯಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ದುಸ್ಥಿತಿ ಕುರಿತು ವಿಶೇಷ ವರದಿ ಪ್ರಕಟಗೊಂಡಿತ್ತು. ವರದಿಯ ಪರಿಣಾಮವಾಗಿ ಬೆಳಗಾವಿಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನವೀನ ಶಿಂತ್ರೆ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕೂಡಲೇ ಬೇರೊಂದು ಸುಸಜ್ಜಿತ ಕಟ್ಟಡವನ್ನು ಬಾಡಿಗೆಗೆ ಪಡೆದು ವಸತಿ ನಿಲಯ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ‘ಪ್ರಜಾವಾಣಿ’ಯ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದ್ದಾರೆ.

ವಸತಿ ನಿಲಯದ ಕಟ್ಟಡ ಹಳೇಯದಾಗಿದ್ದರಿಂದ ಬೀಳುವ ಸ್ಥಿತಿಯಲ್ಲಿದೆ. ಬಿರುಕು ಬಿಟ್ಟ ಗೋಡೆಗಳು, ತುಕ್ಕು ಹಿಡಿದ ಚಾವಣಿಯ ಕಬ್ಬಿಣದ ಸರಳುಗಳು ಹೊರ ಬಂದಿದ್ದನ್ನು ವೀಕ್ಷಿಸಿ, ಮಕ್ಕಳ ವಾಸಕ್ಕೆ ಯೋಗ್ಯವಲ್ಲದ ಕಟ್ಟಡ ಇದಾಗಿದೆ ಎಂದು ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ADVERTISEMENT

ವಸತಿ ನಿಲಯದ ಚಾವಣಿಯ ಸಿಮೆಂಟ್ ಉದುರಿ ಬೀಳುತ್ತಿದ್ದು, ಮಳೆಗಾಲದಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ವರದಿ ನೀಡಿದ್ದಾರೆ.

ಬಾಡಿಗೆ ಕಟ್ಟಡದಲ್ಲಿ ಕೆಲವು ದುರಸ್ತಿ ಕೆಲಸಗಳಿರುವ ಕಾರಣ ಮೂರ್ನಾಲ್ಕು ದಿನಗಳಲ್ಲಿ ಹೊಸ ಬಾಡಿಗೆ ಕಟ್ಟಡಕ್ಕೆ ವಸತಿ ನಿಯಲ ಸ್ಥಳಾಂತರಿಸಲು ಸ್ಥಳೀಯ ಅಧಿಕಾರಿಗಳು ನಿರ್ಧರಿಸಿದ್ದಾರೆ.

200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸಿಸಲು ಅನುಕೂಲವಾಗುವ ಬಾಡಿಗೆ ಕಟ್ಟಡವನ್ನು ಪಟ್ಟಣದ ಹೃದಯ ಭಾಗದಲ್ಲಿ ಗುರುತಿಸಲಾಗಿದೆ ಎಂದು ಚಿಕ್ಕೋಡಿಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ ಪಾಟೀಲ ತಿಳಿಸಿದ್ದಾರೆ.

ಚಿಕ್ಕೋಡಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ ಪಾಟೀಲ, ಹಾಸ್ಟೆಲ್ ವಾರ್ಡನ್ ಸಮೀನಾ ನದಾಫ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.